ADVERTISEMENT

ಧಾರವಾಡ ಕೃಷಿ ಮೇಳ: ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಜಾಗೃತಿ

ಬಿ.ಜೆ.ಧನ್ಯಪ್ರಸಾದ್
Published 12 ಸೆಪ್ಟೆಂಬರ್ 2023, 4:53 IST
Last Updated 12 ಸೆಪ್ಟೆಂಬರ್ 2023, 4:53 IST
ಧಾರವಾಡದ ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆಯವರು ಕೃಷಿಮೇಳದಲ್ಲಿ ಪ್ರದರ್ಶಿಸಿರುವ ಸ್ವಯಂಚಾಲಿತ ಹನಿ ನೀರಾವರಿ ವಿಧಾನದ ಮಾದರಿ ಪ್ರಜಾವಾಣಿ ಚಿತ್ರ– ಗೋವಿಂದರಾಜ ಜವಳಿ 
ಧಾರವಾಡದ ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆಯವರು ಕೃಷಿಮೇಳದಲ್ಲಿ ಪ್ರದರ್ಶಿಸಿರುವ ಸ್ವಯಂಚಾಲಿತ ಹನಿ ನೀರಾವರಿ ವಿಧಾನದ ಮಾದರಿ ಪ್ರಜಾವಾಣಿ ಚಿತ್ರ– ಗೋವಿಂದರಾಜ ಜವಳಿ     

ಧಾರವಾಡ: ಕೃಷಿ ವಿ.ವಿ.ಯಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆಯು (ವಾಲ್ಮಿ) ಸ್ವಯಂಚಾಲಿತ ಹನಿ ನೀರಾವರಿ ವಿಧಾನದ ಮಾದರಿಯನ್ನು ಪ್ರದರ್ಶಿಸಿದ್ದು, ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಮಾಹಿತಿ, ವಿವಿಧ ಪ್ರದೇಶಗಳಲ್ಲಿ ಈ ಪ್ರಯೋಗ ಫಲಪ್ರದವಾಗಿರುವ ವಿವರ ಇದೆ.

ಸ್ವಯಂಚಾಲಿತ ಹನಿ ನೀರಾವರಿ ಘಟಕ ಅಳವಡಿಕೆ, ಕಾರ್ಯವಿಧಾನ ಕುರಿತು ಹಲವು ರೈತರು, ವಾಲ್ಮಿಯ ತೋಟಗಾರಿಕೆ ವಿಭಾಗದ ಅಧಿಕಾರಿಗಳು, ಬೋಧಕರಿಂದ ಮಾಹಿತಿ ಪಡೆದುಕೊಂಡರು. ನೀರು, ದ್ರವಗೊಬ್ಬರಗಳನ್ನು ಬೆಳೆಗಳಿಗೆ ನೀಡುವುದು, ನೀರಿನ ಉಳಿತಾಯ, ಜಮೀನಿನ ಮಣ್ಣಿನ ಸವಳು–ಜವಳು ಹಾಗೂ ಮಣ್ಣಿನ ಸವಕಳಿ ಸಮಸ್ಯೆಗಳಿಗೆ ಮುಕ್ತಿ ಮೊದಲಾದ ಅನುಕೂಲತೆಯ ವಿವರ ನೀಡಲಾಗಿದೆ.

ವಾಲ್ಮಿ ಆವರಣದ ಐದು ಎಕರೆಯಲ್ಲಿ ಈ ಘಟಕ ಅಳವಡಿಸಿ, ಬೆಳೆ ಬೆಳೆಯಲಾಗುತ್ತಿದೆ. ರಾಜ್ಯದ ವಿವಿಧೆಡೆ ಹಲವು ರೈತರು ಈ ವಿಧಾನವನ್ನು ಅನುಸರಿಸುತ್ತಿದ್ದಾರೆ. ಘಟಕ ಅಳವಡಿಕೆ ಕಾರ್ಯವನ್ನು ಎರಡು ಕಂಪನಿಗಳು ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಒಣ ಬೇಸಾಯ ಪ್ರದೇಶ ಹೆಚ್ಚು ಇದ್ದು, ಈ ಹನಿ ನೀರಾವರಿ ವಿಧಾನ ಹೆಚ್ಚು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

‘ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದೆ. ಮೊಳಕೆಯೊಡೆದಿದ್ದ ಬೆಳೆಗಳು ಒಣಗಿವೆ. ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಕುರಿತು ವಾಲ್ಮಿಯವರು ಮಾಹಿತಿ ನೀಡಿದ್ದಾರೆ. ಸ್ವಯಂಚಾಲಿತ ಹನಿ ನೀರಾವರಿ ಘಟಕವನ್ನು ಅಳವಡಿಸುತ್ತೇನೆ’ ಎಂದು ಹಾವೇರಿ ಜಿಲ್ಲೆ ಶಿಗ್ಗಾವಿ ಕೃಷಿಕ ಮಲ್ಲಪ್ಪ ತಿಳಿಸಿದರು.

‘ಶೇ 65 ರಷ್ಟು ನೀರು ಉಳಿತಾಯ’
‘ಸ್ವಯಂಚಾಲಿತ ಹನಿ ನೀರಾವರಿ ವಿಧಾನ ಅಳವಡಿಸಿಕೊಂಡರೆ ಶೇ 65ರಷ್ಟು ನೀರಿನ ಬಳಕೆ ಕಡಿಮೆ ಮಾಡಬಹುದು. ಕಬ್ಬು ಭತ್ತ ಬಾಳೆ ಕಲ್ಲಂಗಡಿ ಮುಂತಾದ ಎಲ್ಲ ಬೆಳೆಗಳನ್ನು ಈ ವಿಧಾನದಲ್ಲಿ ಬೆಳೆಯುಬಹುದು. ರಾಮಥಾಳ ಪೂರಿಗಾಳಿ ಮೊದಲಾದ ಕಡೆಗಳಲ್ಲಿ ಬಹಳಷ್ಟು ರೈತರು ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ’ ಎಂದು ವಾಲ್ಮಿಯ ತೋಟಗಾರಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೇಘನಾ ನಾಡಿಗೇರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಯಾವ ಬೆಳೆಗೆ ಎಷ್ಟು ನೀರು ಒದಗಿಸಬೇಕು ಎಂಬುದನ್ನು ತಿಳಿದುಕೊಂಡು ಅಷ್ಟು ಮಾತ್ರ ನೀರನ್ನು ಒದಗಿಸಬೇಕು. ಈ ಕುರಿತು ಮಾಹಿತಿ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.