ಧಾರವಾಡ: ಬಾಳೆಗೆ ಒಂದೇ ಗೊನೆ. ಗೊನೆ ಕೊಯ್ದ ಮೇಲೆ ಗಿಡ ಕೊಳೆತುಹೋಗಬೇಕಷ್ಟೆ. ಆದರೆ ಹೀಗೆ ಕಡಿದು ಹಾಕಲಾಗುವ ಬಾಳೆ ಗಿಡ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಹಾಗೂ ಸುತ್ತಮುತ್ತಲಿನ ನಿರುದ್ಯೋಗಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿದೆ.
ಮ್ಯಾಟ್ ಆಗಿ ರೂಪು ತಳೆದ ಬಾಳೆ ನಾರು ನಂತರದ ದಿನಗಳಲ್ಲಿ ಟೋಪಿ, ಕೀ ಚೈನ್, ಬಟ್ಟಲು, ಪರ್ಸ್, ವ್ಯಾನಿಟಿ ಬ್ಯಾಗ್, ನೀರಿನ ಬಾಟಲಿ ಕವರ್ ಆಗಿ ಮೌಲ್ಯವರ್ಧನೆ ಪಡೆದು ಈಗ ಲ್ಯಾಪ್‌ಟಾಪ್ ಬ್ಯಾಗ್ ಆಗಿ ಬೀಗುತ್ತಿದೆ. ಐಟಿ ಕಂಪನಿಗಳಿಂದಲೂ ಇದಕ್ಕೆ ಬೇಡಿಕೆ ಬರುತ್ತಿರುವುದು ವಿಶೇಷ.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ವಿಭಾಗದಲ್ಲಿ ಐದು ವರ್ಷಗಳ ಹಿಂದೆ ಬಾಳೆ ನಾರಿನ ಮೌಲ್ಯವರ್ಧನೆಗೆ ಅಡಿಪಾಯ ಹಾಕಲಾಯಿತು. ಬಾಳೆ ನಾರು ಹೇಗೆ ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಿತು ಎಂಬುದನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ವಿಭಾಗದ ವಿಜ್ಞಾನಿ ಕವಿತಾ ಉಳ್ಳಿಕಾಶಿ ‘ಪ್ರಜಾವಾಣಿ’ ಗೆ ವಿವರಿಸಿದರು.
ಆನೆಗುಂದಿ ಹಾಗೂ ಸುತ್ತಮುತ್ತಲಿನ ನಿರುದ್ಯೋಗಿ ಯುವತಿಯರನ್ನು ಗುರುತಿಸಿ ಅವರಿಗೆ ಬಾಳೆ ನಾರಿನ ಮ್ಯಾಟ್ ಮಾಡಲು ತರಬೇತಿ ನೀಡಲಾಯಿತು. ನಂತರ ಟೋಪಿ, ಕೀ ಚೈನ್, ಪರ್ಸ್, ವ್ಯಾನಿಟಿ ಬ್ಯಾಗ್‌ಗಳನ್ನು ಮಾಡಲು ತಯಾರಾದರು. ಇಂದು ₹4.5 ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಬ್ಯಾಗುಗಳಿಗೆ ಬೇಡಿಕೆ ಬಂದಿದ್ದು, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಆತ್ಮವಿಶ್ವಾಸ ಹೆಚ್ಚಿಸಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ‘ಜಿ–20’ ಶೃಂಗಸಭೆಯಲ್ಲಿ ಈ ಮಹಿಳೆಯರ ತಂಡ ತಮ್ಮ ಬಾಳೆ ನಾರಿನ ಉತ್ಪನ್ನಗಳೊಂದಿಗೆ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಅವರು.
ಬಾಳೆ ನಾರನ್ನು ಸ್ಥಳೀಯವಾಗಿಯೇ ಸಂಗ್ರಹಿಸಲಾಗುತ್ತಿದೆ. ಗೊನೆ ಕಡಿದ ನಂತರ ಬಾಳೆ ಗಿಡವನ್ನು ಕಡಿದು ಕಾಂಡದ ಪದರುಗಳನ್ನು ತೆಗೆದು ಬಿಸಿಲಲ್ಲಿ ಒಣಗಿಸಲಾಗುತ್ತದೆ. ಒಣಗಿದ ನಾರಿನ ಪದರನ್ನು ನೀರಿನಲ್ಲಿ ನೆನಸಿಡಲಾಗುತ್ತದೆ. ಪೂರ್ತಿ ನೆನೆದ ನಂತರ ಕೈಯಿಂದಲೇ ನಾರಿನ ಎಳೆಗಳನ್ನು ಒಂದೇ ಅಳತೆಯಲ್ಲಿ ತೆಗೆದು ಹೊಸೆಯಲಾಗುತ್ತದೆ. ನಂತರ ಅದರ ಉಂಡೆ ಮಾಡಿಕೊಂಡು, ಕ್ರೋಶಾ ಕಡ್ಡಿಯಲ್ಲಿ ಹೆಣಿಗೆ ಮಾಡಲಾಗುತ್ತದೆ. ಬಾಳೆ ನಾರಿನ ಉತ್ಪನ್ನಗಳನ್ನು ಸಿದ್ಧಪಡಿಸಲು ಕೌಶಲ ತರಬೇತಿ ನೀಡಲಾಗುತ್ತಿದ್ದು, ಹೆಚ್ಚಿನ ಕೌಶಲ ಇದ್ದವರು ಈ ಗೃಹೋದ್ಯಮದಲ್ಲಿ ಹೆಚ್ಚು ಸಾಧನೆ, ಗಳಿಕೆ ಮಾಡಲು ಸಾಧ್ಯ ಎಂದರು.
ದೀರ್ಘಾವಧಿ ಬಾಳಿಕೆ ಬರುವ ಬಾಳೆ ನಾರಿನ ಉತ್ಪನ್ನಗಳನ್ನು ಯಾವುದೇ ಯಂತ್ರಗಳನ್ನು ಬಳಸದೆ ಕೈಗಳಿಂದಲೇ ಸಂಪೂರ್ಣವಾಗಿ ಸಿದ್ಧಪಡಿಸಲಾಗುತ್ತಿದೆ. ಈ ಬಾಳೆ ನಾರು ಮಹಿಳೆಯರನ್ನು ಸ್ವಾವಲಂಬಿಯಾಗಿಸಿರುವುದು ನಮಗೆ ಹೆಮ್ಮೆಯ ಸಂಗತಿ- ಕವಿತಾ ಉಳ್ಳಿಕಾಶಿ, ವಿಜ್ಞಾನಿ ಗೃಹ ವಿಜ್ಞಾನ ವಿಭಾಗ ಕೃಷಿ ವಿವಿ ರಾಯಚೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.