ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: 5ನೇ ಬಾರಿಗೆ ಕಣಕ್ಕಿಳಿಯುವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 16:11 IST
Last Updated 13 ಮಾರ್ಚ್ 2024, 16:11 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗುವರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಅಭ್ಯರ್ಥಿಗಳ ಪಟ್ಟಿ ಬುಧವಾರ ಸಂಜೆ ಬಿಡುಗಡೆಯಾಗಿದೆ. ಧಾರವಾಡ ಕ್ಷೇತ್ರಕ್ಕೆ ಹಾಲಿ ಸಂಸದ ಪ್ರಲ್ಹಾದ ಜೋಶಿ ಅವರಿಗೆ ಟಿಕೆಟ್ ಲಭಿಸಿದ್ದು, ಅವರು ಐದನೇ ಬಾರಿ ಚುನಾವಣಾ ಕಣಕ್ಕಿಳಿಯುವರು.

ಕಳೆದ ಸಲ ವಿಧಾನಸಭೆ ಚುನಾವಣೆಗೆ ಟಿಕೆಟ್‌ ಸಿಗದ ಕಾರಣ ಜಗದೀಶ ಶೆಟ್ಟರ್‌ ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರಿದ್ದರು. ಇತ್ತೀಚೆಗೆ ಅವರು ಬಿಜೆಪಿಗೆ ಮರಳಿ, ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಸರತ್ತು ನಡೆಸಿದ್ದರು. ಇದಲ್ಲದೇ, ಈ ಸಲ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು.  ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಧಾರವಾಡ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟವಾಗಿರಲಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಕುತೂಹಲ ಹೆಚ್ಚಾಗಿತ್ತು.

5ನೇ ಸಲ ಸ್ಪರ್ಧೆ:

ಪುನರ್‌ ವಿಂಗಡಣೆಗೆ ಮೊದಲು 2004ರಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಮೊದಲ ಸಲ ಪ್ರಲ್ಹಾದ ಜೋಶಿ ಸ್ಪರ್ಧಿಸಿದ್ದರು. ಇದಕ್ಕೂ ಮುಂಚೆ ವಿಜಯ ಸಂಕೇಶ್ವರ 1996, 1998 ಹಾಗೂ 1999ರ ಚುನಾವಣೆಗಳಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ನಂತರ 2004ರಲ್ಲಿ ಬಿಜೆಪಿಯು ಜೋಶಿ ಅವರಿಗೆ ಅವಕಾಶ ನೀಡಿತು.

ಅಲ್ಲಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಜೋಶಿ ಅವರು ಜಯಗಳಿಸಿದ್ದಾರೆ. 2004, 2009, 2014 ಹಾಗೂ 2019ರಲ್ಲಿ ಜಯಗಳಿಸಿದ್ದಾರೆ. ಪ್ರತಿ ಚುನಾವಣೆಯಲ್ಲೂ ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದ್ದಾರೆ.  ಕಳೆದ 2019ರ ಚುನಾವಣೆಯಲ್ಲಿ 6.84 ಲಕ್ಷ ಮತ ಪಡೆದಿದ್ದು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಅವರಿಗಿಂತ 2.05 ಲಕ್ಷಕ್ಕಿಂತ ಹೆಚ್ಚು ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು.

ಸಚಿವ ಸ್ಥಾನ:

ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳಾದ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಐದು ವರ್ಷ ಪೂರ್ಣಾವಧಿಯವರೆಗೆ ನಿರ್ವಹಿಸಿದ್ದಾರೆ.

ಪಕ್ಷ ಸಂಘಟಕ:

ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದ ಜೋಶಿ ಅವರು ಹುಬ್ಬಳ್ಳಿಯ ಈದ್ಗಾ ಮೈದಾನದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2012ರಿಂದ ನಾಲ್ಕು ವರ್ಷ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.