ADVERTISEMENT

PV Web Exclusive | ‘ರೆಟಿನೋಪಥಿ’: ಸದ್ದಿಲ್ಲದೇ ಆವರಿಸುವ ಅಂಧತ್ವ...

ರಾಮಕೃಷ್ಣ ಸಿದ್ರಪಾಲ
Published 14 ನವೆಂಬರ್ 2020, 3:26 IST
Last Updated 14 ನವೆಂಬರ್ 2020, 3:26 IST
ನೇತ್ರ ತಪಾಸಣೆ ಮಾಡುತ್ತಿರುವ ಹುಬ್ಬಳ್ಳಿಯ  ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಹಿರಿಯ ನೇತ್ರತಜ್ಞ ಡಾ.ಆರ್‌.ಕೃಷ್ಣಪ್ರಸಾದ್
ನೇತ್ರ ತಪಾಸಣೆ ಮಾಡುತ್ತಿರುವ ಹುಬ್ಬಳ್ಳಿಯ ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಹಿರಿಯ ನೇತ್ರತಜ್ಞ ಡಾ.ಆರ್‌.ಕೃಷ್ಣಪ್ರಸಾದ್   
""

ಕಣ್ಣು ಇಡೀ ದೇಹದ ರಕ್ತನಾಳಗಳ ಜಾತಕ ಹೇಳುತ್ತದೆ. ದೇಹದ ಪ್ರತಿ ಅಂಗಾಂಗಕ್ಕೆ ಆಗುವ/ಆಗಿರುವ ಹಾನಿಯನ್ನು ಕಣ್ಣಿನ ರಕ್ತನಾಳದಲ್ಲಿ ಪತ್ತೆ ಮಾಡಬಹುದು. ಸಕ್ಕರೆ ಕಾಯಿಲೆ ಇರುವ ಯಾವುದೇ ವ್ಯಕ್ತಿಗೆ ‘ಡಯಾಬಿಟಿಕ್‌ ರೆಟಿನೋಪಥಿ (ಮಧುಮೇಹದ ಅಂಧತ್ವ) ಪ್ರಾರಂಭವಾದಾಗ ಅದು ಯಾವ ಸೂಚನೆಯನ್ನೂ ಕೊಡುವುದಿಲ್ಲ. ದೃಷ್ಟಿ ನೀಡುವ ಕಣ್ಣಿನ ಅಕ್ಷಿಪಟಲ ಅಥವಾ ರೆಟಿನಾಕ್ಕೆ ಮಧುಮೇಹದಿಂದಾಗಿ ಹಾನಿಯಾಗಿರುವ ಬಗ್ಗೆ ಮಧುಮೇಹ ತಜ್ಞರಿಗಿಂತ ನೇತ್ರತಜ್ಞರು ಮಾತ್ರವೇ ನಿಖರವಾಗಿ ಗುರುತಿಸಬಲ್ಲರು. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ನಿಯಮಿತವಾಗಿ ನೇತ್ರ ತಪಾಸಣೆ ಮಾಡಿಸುತ್ತಿರಬೇಕು ಎನ್ನುತ್ತಾರೆ ವೈದ್ಯರು.

* * *

‘ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ’ ಎಂದು ಸಂಸ್ಕೃತದಲ್ಲಿ ಮಾತಿದೆ. ಎಲ್ಲಾ ಇಂದ್ರಿಯಗಳಲ್ಲಿ ಕಣ್ಣು ಮುಖ್ಯವಾದದ್ದು ಎಂದು. ಕಣ್ಣಿನ ಮಹತ್ವದ ಬಗ್ಗೆ, ಕಣ್ಣುಗಳನ್ನು ಕಾಪಾಡಿಕೊಳ್ಳುವ ಬಗ್ಗೆ ದೃಷ್ಟಿ ಸರಿಯಿದ್ದಾಗ ನಾವ್ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ದೃಷ್ಟಿ ಮಸುಕಾದಾಗಲೇ ಅದರತ್ತ ಗಮನ. ವಿಶೇಷವಾಗಿ ಸಕ್ಕರೆ ಕಾಯಿಲೆ ಇರುವವರಲ್ಲಿ ದೃಷ್ಟಿ ಮಸುಕಾಗುವುದು ಗಮನಕ್ಕೆ ಬರುವುದಿಲ್ಲ. ಪಥ್ಯ, ವಾಕಿಂಗ್‌, ಕಾಲಕಾಲಕ್ಕೆ ವೈದ್ಯರ ಭೇಟಿ ಎಲ್ಲವನ್ನೂ ಮಾಡುತ್ತಿರುತ್ತಾರೆ. ಆದರೆ ಕಣ್ಣಿನ ದೋಷ ಗಮನಕ್ಕೆ ಬಾರದೇ ಅಂಧತ್ವಕ್ಕೆ ಸಿಲುಕುವುದು ಮಾತ್ರ ಗೊತ್ತೇ ಆಗುವುದಿಲ್ಲ ಎನ್ನುತ್ತಾರೆ ವೈದ್ಯರು.

ADVERTISEMENT

ನಾರಾಯಣ ಅವರಿಗೆ 65 ವರ್ಷ ವಯಸ್ಸು. 10 ವರ್ಷಗಳಿಂದ ಸಕ್ಕರೆ ಕಾಯಿಲೆಯಿದೆ. ನಿಯಮಿತವಾಗಿ ಔಷಧ, ವೈದ್ಯರ ಭೇಟಿ ಇದೆ. ಆದರೆ ಒಂದು ಕಣ್ಣು ಕಾಣಿಸದೇ ಇರುವುದು ಅವರಿಗೆ ಬಹಳಷ್ಟು ತಿಂಗಳುಗಳವರೆಗೂ ಅರಿವಾಗಿಲ್ಲ... ಏಕೆಂದರೆ ಇನ್ನೊಂದು ಕಣ್ಣು ಸರಿಯಾಗಿ ಕೆಲಸ ಮಾಡುತ್ತಿತ್ತು. ಒಂದು ದಿನ ಮನೆ ಮಹಡಿಯಿಂದ ಮೆಟ್ಟಿಲು ಇಳಿಯುತ್ತಿದ್ದಾಗ ಹೆಜ್ಜೆ ತಪ್ಪಿ ಬಿದ್ದಾಗಲೇ ಅವರಿಗೆ ತಮಗೆ ಕಣ್ಣೊಂದು ಸರಿಯಾಗಿ ಕಾಣಿಸುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿದ್ದು! ಸಕ್ಕರೆ ಕಾಯಿಲೆಯಿಂದಾಗಿ ಕಣ್ಣಿನ ದೃಷ್ಟಿ ಅವರಿಗೆ ಹೋಗಿತ್ತು. ನೇತ್ರತಜ್ಞರು ಕೂಲಂಕಷವಾಗಿ ಪರಿಶೀಲನೆ ಮಾಡಿದಾಗಲೇ ಅದು ಪತ್ತೆಯಾಗಿದೆ.

ಅದನ್ನೇ ವೈದ್ಯಕೀಯ ಭಾಷೆಯಲ್ಲಿ ‘ಡಯಾಬಿಟಿಕ್‌ ರೆಟಿನೋಪಥಿ‘ ಎನ್ನುವರು. ದೃಷ್ಟಿ ನೀಡುವ ಕಣ್ಣಿನ ಅಕ್ಷಿಪಟಲ ಅಥವಾ ರೆಟಿನಾಕ್ಕೆ ಮಧುಮೇಹದಿಂದಾಗಿ ಹಾನಿಯಾಗಿರುವ ಬಗ್ಗೆ ಮಧುಮೇಹ ತಜ್ಞರಿಗಿಂತ ನೇತ್ರತಜ್ಞರು ಮಾತ್ರವೇ ನಿಖರವಾಗಿ ಗುರುತಿಸಬಲ್ಲರು. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ನಿಯಮಿತವಾಗಿ ನೇತ್ರ ತಪಾಸಣೆ ಕೂಡ ಮಾಡಿಸುತ್ತಿರಬೇಕು.

‘ಕಣ್ಣು ಇಡೀ ದೇಹದ ರಕ್ತನಾಳಗಳ ಜಾತಕ. ದೇಹದ ಪ್ರತಿ ಅಂಗಾಂಗಕ್ಕೆ ಆಗುವ/ಆಗಿರುವ ಹಾನಿಯನ್ನು ಕಣ್ಣಿನ ರಕ್ತನಾಳದಲ್ಲಿ ಪತ್ತೆ ಮಾಡಬಹುದು. ತಮಗೆ ದೃಷ್ಟಿ ಹೋಗುತ್ತಿದೆ ಎನ್ನುವುದು ಕೊನೆಯ ಹಂತದವರೆಗೂ ಬಹಳಷ್ಟು ರೋಗಿಗಳಿಗೆ ಗೊತ್ತಾಗುವುದೇ ಇಲ್ಲ. ಕಾರಣ ಜನರು ಸಕ್ಕರೆ ಕಾಯಿಲೆಯನ್ನು ಬಹಳ ಲಘುವಾಗಿ ಪರಿಗಣಿಸುತ್ತಾರೆ. ಇಲ್ಲವೇ ಹತ್ತಾರು ವರ್ಷಗಳಾದರೂ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಯೇ ಇರುವುದಿಲ್ಲ. ಕಣ್ಣು, ಹೃದಯ, ಕಿಡ್ನಿ, ಕಾಲಿನ ರಕ್ತನಾಳಗಳನ್ನು ಹಾಳುಗೆಡವುವ ಸಕ್ಕರೆ ಕಾಯಿಲೆ ‘ಬ್ಲಡ್‌ ಶುಗರ್‌ ಲೆವಲ್‌‘ ನೋಡಿಕೊಂಡು ಬಿಟ್ಟುಬಿಡುವ ಅಷ್ಟು ಸರಳ ಗಣಿತವಲ್ಲ. ಅಂಧತ್ವಕ್ಕೆ ದಾರಿ ಮಾಡಿಕೊಡುವ ರೆಟಿನೋಪಥಿ ದೊಡ್ಡ ಪಿಡುಗು. ಅದು ನಮ್ಮ ಜನರಿಗೆ ಎಷ್ಟು ಬೇಗ ಅರ್ಥವಾಗುತ್ತದೆಯೋ ಅಷ್ಟು ಉತ್ತಮ’ ಎನ್ನುತ್ತಾರೆ ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಹಿರಿಯ ನೇತ್ರತಜ್ಞ ಡಾ. ಆರ್‌.ಕೃಷ್ಣಪ್ರಸಾದ್‌ ಅವರು.

ಸಕ್ಕರೆ ಕಾಯಿಲೆ ಇರುವ ಯಾವುದೇ ವ್ಯಕ್ತಿಗೆ ‘ಡಯಾಬಿಟಿಕ್‌ ರೆಟಿನೋಪಥಿ (ಮಧುಮೇಹದ ಅಂಧತ್ವ) ಪ್ರಾರಂಭವಾದಾಗ ಅದು ಯಾವ ಸೂಚನೆಯನ್ನೂ ಕೊಡುವುದಿಲ್ಲ. ಆರಂಭದ ಹಂತದಲ್ಲಿ ದೃಷ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೀಗಾಗಿ ರೋಗಿ ಮತ್ತು ವೈದ್ಯರು ಕೂಡ ನಿರ್ಲಕ್ಷ್ಯ ಮಾಡುವ ಸಾಧ್ಯತೆ ಇರುತ್ತದೆ. ರೆಟಿನಾ ಅಥವಾ ಅಕ್ಷಿಪಟಲದಲ್ಲಿ ಇರುವ ರಕ್ತನಾಳಗಳು ಸಕ್ಕರೆ ಕಾಯಿಲೆ ಪ್ರಭಾವಕ್ಕೆ ಒಳಗಾಗಿ ರೋಗಗ್ರಸ್ತವಾಗುತ್ತವೆ. ಕಾಲಕ್ರಮೇಣ ರಕ್ತನಾಳಗಳು ಹಿಗ್ಗಿ ಒಡೆಯುತ್ತವೆ. ನಿಧಾನವಾಗಿ ಆರಂಭವಾದ ಈ ಸಮಸ್ಯೆ ದಿನ ಕಳೆದಂತೆ ಹೆಚ್ಚಾಗುತ್ತದೆ. ಬಹಳ ತಡವಾಗಿ ವೈದ್ಯರನ್ನು ಕಾಣುತ್ತಾರೆ. ಹಲವಾರು ಹಂತಗಳನ್ನು ದಾಟಿ ಅಂಧತ್ವಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಮಧುಮೇಹಿಗಳು ಆರು ತಿಂಗಳಿಗೊಮ್ಮೆ ರೆಟಿನಾ (ಅಕ್ಷಿಪಟಲ) ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಎಂದು ಅವರು ಹೇಳುತ್ತಾರೆ.

ರೆಟಿನಾ ಅಥವಾ ಅಕ್ಷಿಪಟಲದಲ್ಲಿ ಇರುವ ರಕ್ತನಾಳಗಳು ಸಕ್ಕರೆ ಕಾಯಿಲೆಯ ಪ್ರಭಾವಕ್ಕೆ ಒಳಗಾದಾಗ ರಕ್ತನಾಳಗಳು ಬಲೂನಿನಂತಾಗಿ ಒಡೆಯುತ್ತವೆ. ನಂತರ ರೆಟಿನಾ ಬಾವು ಉಂಟಾಗುತ್ತದೆ. ಸಕ್ಕರೆ ಕಾಯಿಲೆ ಹೆಚ್ಚಿದಂತೆ ಹೆಚ್ಚು ಹೆಚ್ಚು ರಕ್ತನಾಳಗಳು ನಾಶವಾಗಿ ರೆಟಿನಾಕ್ಕೆ ಅಗತ್ಯವಾದ ಆಮ್ಲಜನಕ ಹಾಗೂ ಗ್ಲುಕೋಸ್‌ ಪೂರೈಕೆಗೆ ತಡೆಯಾಗುತ್ತದೆ. ಹೊಸ ರಕ್ತನಾಳಗಳು ಹುಟ್ಟಿಕೊಂಡರೂ ಅವುಗಳಿಂದ ಅಪಾಯವೇ ಹೆಚ್ಚು. ಕಣ್ಣಿನಲ್ಲಿ ರಕ್ತಸ್ರಾವ ಆಗುತ್ತದೆ. ವೈದ್ಯರ ಬಳಿಗೆ ಬರುವಷ್ಟರಲ್ಲಿ ದೃಷ್ಟಿ ಹಾಳಾಗಿರುತ್ತದೆ. ಅಂತಿಮವಾಗಿ ಅಂಧತ್ವದಲ್ಲಿ ಕೊನೆಗೊಳ್ಳುತ್ತದೆ ಎನ್ನುತ್ತಾರೆ ಅವರು.

ಚಿಕಿತ್ಸೆ ಹೇಗೆ?

ಹಾಗಿದ್ದರೆ ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳು ತಮ್ಮ ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಸಕ್ಕರೆ ಕಾಯಿಲೆಯೊಂದಿಗೆ ಹೇಗೆ ಬದುಕಬೇಕು ಎನ್ನುವುದು ಅರಿವಾದಾಗ ಕಣ್ಣುಗಳ ರಕ್ಷಣೆಯ ಬಗ್ಗೆಯೂ ಅರಿವಾಗುತ್ತದೆ. ಡಯಾಬಿಟಿಕ್‌ ರೆಟಿನೋಪಥಿ ಆರಂಭವಾದಲ್ಲಿ ಮುಖ್ಯವಾಗಿ ಮೂರು ಹಂತದಲ್ಲಿ ಸಾಗಿ ಅಂತಿಮವಾಗಿ ಅಂಧತ್ವಕ್ಕೆ ಈಡುಮಾಡುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳಬೇಕು. ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಒಮ್ಮೆ ಅಪಾಯದ ಹಂತಕ್ಕೆ ತಲುಪಿದರೆ ಲೇಸರ್ ಚಿಕಿತ್ಸೆ ಮೂಲಕ ಈ ಕಾಯಿಲೆಗೆ ಚಿಕಿತ್ಸೆ ಪಡೆಯಬೇಕಾಗುತ್ತದೆ.ಒಂದು ವೇಳೆ ಕಾಯಿಲೆ ಉಲ್ಬಣಗೊಂಡರೆ ಕಣ್ಣಿನ ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ.

ಇವೆಲ್ಲವೂ ಆಗದೇ ಇರಬೇಕೆಂದರೆ ಸಕ್ಕರೆ ಕಾಯಿಲೆ ಇರುವವರು ನಿಯಮಿತವಾದ ಪಥ್ಯ, ಸಕ್ಕರೆ ಮಟ್ಟ ಹತೋಟಿ, ವ್ಯಾಯಾಮ ಎಲ್ಲಕ್ಕಿಂತ ಮುಖ್ಯವಾಗಿ ಕಾಲ ಕಾಲಕ್ಕೆ ನೇತ್ರ ತಜ್ಞರ ಭೇಟಿ ಮಾಡುತ್ತಿರಬೇಕು ಎನ್ನುವುದು ವೈದ್ಯರ ಸಲಹೆ.

ನೇತ್ರತಜ್ಞ ಡಾ. ಆರ್.ಕೃಷ್ಣಪ್ರಸಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.