ADVERTISEMENT

ಧಾರವಾಡ ಜಿಲ್ಲಾಸ್ಪತ್ರೆ: ನೋಂದಣಿಗೆ ಗಂಟೆಗಟ್ಟಲೆ ಕಾಯುವ ಸ್ಥಿತಿ

ಪ್ರತಿನಿತ್ಯ ಸರಾಸರಿ 1300 ಹೊರರೋಗಿಗಳು ಭೇಟಿ

ಬಿ.ಜೆ.ಧನ್ಯಪ್ರಸಾದ್
Published 18 ಸೆಪ್ಟೆಂಬರ್ 2024, 5:25 IST
Last Updated 18 ಸೆಪ್ಟೆಂಬರ್ 2024, 5:25 IST
ಧಾರವಾಡದ ಜಿಲ್ಲಾಸ್ಪತ್ರೆಯ ನೋಂದಣಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಜನರು ಇಕ್ಕಟ್ಟಿನ ಜಾಗದಲ್ಲಿ ಮಂಗಳವಾರ ಸರದಿ ನಿಂತಿದ್ದರು
ಧಾರವಾಡದ ಜಿಲ್ಲಾಸ್ಪತ್ರೆಯ ನೋಂದಣಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಜನರು ಇಕ್ಕಟ್ಟಿನ ಜಾಗದಲ್ಲಿ ಮಂಗಳವಾರ ಸರದಿ ನಿಂತಿದ್ದರು    

ಧಾರವಾಡ: ನಗರದ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿಗಳು ನೋಂದಣಿ ಮಾಡಿಸಲು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಕೆಲವೊಮ್ಮೆ ಕೌಂಟರ್‌ ಕೇಂದ್ರದ ‌ಬಾಗಿಲಿನ ಹೊರಗೂ ರೋಗಿಗಳು ಸಾಲುಗಟ್ಟಿ ನಿಂತಿರುತ್ತಾರೆ.

ಧಾರವಾಡ ಜಿಲ್ಲೆಯವರು ಮಾತ್ರವಲ್ಲ ಬೆಳಗಾವಿ ಜಿಲ್ಲೆಯ ಕಿತ್ತೂರು, ಬೈಲಹೊಂಗಲ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ದಾಂಡೇಲಿ ಭಾಗದವರು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಪ್ರತಿನಿತ್ಯ ಸುಮಾರು 1300 ಹೊರರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.

ರೋಗಿ ಜತೆಗೆ ಬಂದವರು ಚೀಟಿ ಮಾಡಿಸಲು ಸಾಲಿನಲ್ಲಿ ನಿಲ್ಲುತ್ತಾರೆ. ರೋಗಿ ಒಬ್ಬರೇ ಬಂದಿದ್ದರೆ ಅವರೇ ಸಾಲಿನಲ್ಲಿ ನಿಲ್ಲಬೇಕು. ಹೊರ ಊರುಗಳಿಂದ ಬಂದವರು ಚೀಟಿ ಮಾಡಿಸಿ ವೈದ್ಯರು ಸಿಗದಿದ್ದರೆ ಮತ್ತೊಂದು ದಿನ ಬರಬೇಕು. ನೋಂದಣಿ ಕೌಂಟರ್‌ ಕೇಂದ್ರದಲ್ಲಿ ಸಂದಣಿ ಹೆಚ್ಚು ಇದ್ದರೆ ಬಾಗಿಲಿನ ಹೊರಗೆ ಬಿಸಿಲಿನಲ್ಲಿ ಕಾಯಬೇಕು.

ADVERTISEMENT

ಪ್ರವೇಶ ದ್ವಾರದ ಸಮೀಪದ ನೋಂದಣಿ ಕೇಂದ್ರದಲ್ಲಿ ಆರು ಕೌಂಟರ್‌ಗಳು ಇವೆ. ಆಸ್ಪತ್ರೆಯ ಇತರ ವಿಭಾಗಗಳಲ್ಲಿ ಮೂರು ಕೌಂಟರ್‌ಗಳು ಇವೆ. ಬೆಳಿಗ್ಗೆ ಸಂಜೆಯವರೆಗೆ ಕೌಂಟರ್‌ಗಳು ಕಾರ್ಯನಿರ್ವಹಿಸುತ್ತವೆ. ಒಂದು ಕೌಂಟರ್‌ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.

‘ಸೋಮವಾರ, ಮಂಗಳವಾರ ಮತ್ತು ಬುಧವಾರ ದಟ್ಟಣೆ ಹೆಚ್ಚು ಇರುತ್ತದೆ. ಶನಿವಾರ ಮತ್ತು ಭಾನುವಾರ ಕಡಿಮೆ ಇರುತ್ತದೆ’ ಎಂದು ನೋಂದಣಿ ಕೇಂದ್ರದ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘3 ಕೌಂಟರ್‌ ತೆರೆಯಲು 3 ಕಂಪ್ಯೂಟರ್‌ ಆಪರೇಟರ್‌ ನೇಮಕಕ್ಕೆ ಪ್ರಸ್ತಾವ’

‘ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ನೋಂದಣಿಗೆ ಹೆಚ್ಚುವರಿ ಯಾಗಿ ಮೂರು ಕೌಂಟರ್‌ ತೆರೆಯಲು ಮತ್ತು ಮೂವರು ಕಂಪ್ಯೂಟರ್‌ ಆಪರೇಟರ್‌ ನೇಮಕ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ ತಿಳಿಸಿದರು. ‘ಕೌಂಟರ್‌ ತೆರೆಯಲು ಮತ್ತೊಂದು ಶೆಡ್‌ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲಿ ಕೌಂಟರ್‌ ಮತ್ತು ಆಪರೇಟರ್‌ ವ್ಯವಸ್ಥೆ ಮಾಡಲಾಗುವುದು. ತ್ವರಿತವಾಗಿ ಚೀಟಿ ಪಡೆಯಲು ಅನುಕೂಲವಾಗಲಿದೆ’ ಎಂದು ಅವರು ತಿಳಿಸಿದರು.

ಮನೆಯಲ್ಲಿ ಕೆಲಸ ಮಾಡುವಾಗ ಬಿದ್ದು ಸೊಂಟಕ್ಕೆ ಪೆಟ್ಟಾಗಿದೆ. ಚೀಟಿ ಮಾಡಿಸಲು ಕೌಂಟರ್‌ನಲ್ಲಿ ಎರಡು ಗಂಟೆಗಳಿಂದ ಸರದಿಯಲ್ಲಿ ನಿಂತಿದ್ದೇನೆ. ಚೀಟಿ ಮಾಡಿಸಿಕೊಂಡು ಹೋಗುವಷ್ಟರಲ್ಲಿ ವೈದ್ಯರು ಊಟಕ್ಕೆ ಹೋಗಿರುತ್ತಾರೆ. ವೈದ್ಯರ ಕೊಠಡಿ ಬಳಿಯೂ ಪಾಳಿ ಇರುತ್ತದೆ. ಚೀಟಿ ಮಾಡಿಸಿ ಚಿಕಿತ್ಸೆ ಪಡೆಯಲು ಬೆಳಿಗ್ಗೆಯಿಂದ ಸಂಜೆವರೆಗೆ ಇರಬೇಕು ವೈದ್ಯರು ಸಿಗದಿದ್ದರೆ ಮಾರನೇ ದಿನ ಬರಬೇಕಾದ ಸ್ಥಿತಿ ಇದೆ.
ರಮೇಶ ಮೋರೆ, ರೋಗಿ, ಹೊಸಯಲ್ಲಾಪುರ
ವಾರದಿಂದ ಜ್ವರ ಮತ್ತು ಸುಸ್ತು ಇದೆ. ಮನೆ ಸಮೀಪದ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಔಷಧ ಪಡೆದೆ ಹುಷಾರಾಗಿಲ್ಲ. ಇಲ್ಲಿ ಚೀಟಿ ಮಾಡಿಸಲು ಎರಡು ಗಂಟೆಯಿಂದ ಸಾಲಿನಲ್ಲಿ ನಿಂತಿದ್ದೇನೆ. ಚೀಟಿ ಮಾಡಿಸಲು ಬಹಳ ಹೊತ್ತು ಕಾಯಬೇಕಾದ ಸ್ಥಿತಿ ಇದೆ. ನೋಂದಣಿ ಕೌಂಟರ್‌ಗಳನ್ನು ಹೆಚ್ಚಿಸಲು ಸಂಬಂಧಪಟ್ಟವರು ಕ್ರಮವಹಿಸಬೇಕು.
ರಂಜಾನ್‌ ಅಂಗಡಗೇರಿ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.