ಹುಬ್ಬಳ್ಳಿ: ಹಬ್ಬಗಳು ಕೇವಲ ಆಚರಣೆಗಷ್ಟೇ ಸೀಮಿತಗೊಳ್ಳದೆ ದೈನಂದಿನ ಕಾರ್ಯ ಚಟುವಟಿಕೆಗಳ ಜೊತೆಗೆ ಒಡನಾಡಿಗಳು, ಬಂಧು ಬಾಂಧವರೊಂದಿಗೆ ಸಹಬಾಳ್ವೆ ನಡೆಸುವುದನ್ನೂ ಸಾರುತ್ತವೆ.
ಮನುಷ್ಯ ಜೀವಂತವಾಗಿರಲು ಅನ್ನ, ನೀರು ಎಷ್ಟು ಮುಖ್ಯವೋ, ಅವನಿಗಾಗಿ, ನಾಡಿನ ಜನರಿಗಾಗಿ ದುಡಿಯುವ ಜಾನುವಾರುಗಳ ಆರೈಕೆ, ಆರೋಗ್ಯ ಸೇವೆಯನ್ನು ಸ್ಮರಿಸುವುದೂ ಅಷ್ಟೇ ಮುಖ್ಯ. ಜನಪದರು ಹಬ್ಬದ ಆಚರಣೆಗಳನ್ನು ಹಾಡುಗಳ ಮೂಲಕ ಕಟ್ಟಿಕೊಟ್ಟಿದ್ದು, ಸಾಂಪ್ರದಾಯಿಕ ಆಚರಣೆಗಳನ್ನು ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಕಾಣಬಹುದು.
ಅನ್ನದಾತ ದೇಶದ ಬೆನ್ನುಲುಬು. ಆತನ ಸಂಪೂರ್ಣ ಪರಿವಾರ ಸುಖಮಯವಾಗಿದ್ದರೆ ಮಾತ್ರ ನಾಡಿನ ಜನ ಸಂತಸದಿಂದ ಹಬ್ಬ ಹರಿದಿನಗಳನ್ನು ಆಚರಿಸಲು ಸಾಧ್ಯ.
ದೀಪಾವಳಿ ಇಡೀ ದೇಶವೇ ಆಚರಿಸುವಂಥಹ ಹಬ್ಬ. ನಾಲ್ಕೈದು ದಿನ ವಿವಿಧ ಉಪ ಆಚರಣೆಗಳನ್ನು ಮಾಡುವ ಹಬ್ಬದ ವೇಳೆಯಲ್ಲಿ ‘ಆಣೀ–ಪೀಣಿ’ಯೂ ಒಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆದು ಬಂದಿದೆ.
ರೈತನ ಒಡನಾಡಿಗಳಾದ ದನಕರುಗಳಿಗೆ ರೋಗ, ರುಜಿನುಗಳು ಬಾಧಿಸದಿರಲಿ, ಪಶು ಸಂತಾನ ಬೆಳೆಯಲಿ ಎಂಬುವುದೇ ಈ ಆಚರಣೆಯ ಮುಖ್ಯ ಉದ್ದೇಶ.
ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಈ ಆಚರಣೆ ಹೆಚ್ಚಾಗಿದೆ. ಆಣೀ-ಪೀಣಿ ಆಚರಣೆ ಮಲೆನಾಡಿನ ಅಂಟಿಕೆ-ಪಂಟಿಕೆ ಸಂಪ್ರದಾಯಕ್ಕಿಂತ ಭಿನ್ನವಾಗಿದೆ. ಆಣೀ-ಪೀಣಿಯನ್ನು ಕೆಲವು ಕಡೆ ‘ಅವಂಟಿಗೋ–ಪವಂಟಿಗೋ’, ‘ಆಡಿ–ಪಿಡೀ’, ‘ಅಂಟಿ–ಸುಂಟಿ’ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.
ಆಣೀ–ಪೀಣಿ ದೀಪ: ದನಕಾಯುವ ಅಥವಾ ಕುರಿ ಕಾಯುವ ಹುಡುಗರು ದೀಪಾವಳಿಯ ಪಾಡ್ಯದಂದು ಬೆಳಗಿನ ಜಾವ ಅಕ್ಕ–ತಂಗಿಯರಿಂದ ಆರತಿ ಬೆಳಗಿಸಿಕೊಂಡು ಹಳ್ಳ/ ಅಡವಿಗೆ ಹೋಗಿ ಆಣೀ–ಪೀಣಿ ದೀಪ ಸಿದ್ಧಗೊಳಿಸುವಲ್ಲಿ ನಿರತರಾಗುತ್ತಾರೆ. ಹಳ್ಳದ ದಂಡೆಯಲ್ಲಿ ಬೆಳೆದ ಹುಲ್ಲಿನಿಂದ ಐದು, ಏಳು ಅಥವಾ ಹನ್ನೊಂದು ನಾಗರಹಾವಿನ ಹೆಡೆಗಳ ಮಾದರಿಯಲ್ಲಿ ಗೂಡು/ ಬುಟ್ಟಿ ರೂಪಿಸುತ್ತಾರೆ. ಅದರಲ್ಲಿ ಹಣತೆ ಇಟ್ಟು, ಹೆಡೆಗಳ ಕೆಳಗುಳಿದ ಹುಲ್ಲನ್ನು ಒಟ್ಟಿಗೆ ಕಟ್ಟಿ, ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಸಿಂಬಿ ಕಟ್ಟುತ್ತಾರೆ. ಇದೇ ಆಣೀ–ಪೀಣಿ ದೀಪ.
ಸಂಜೆ ಮನೆಗೆ ಬರುವಾಗ ಕೈಯಲ್ಲಿ ದೀಪ ಹಿಡಿದುಕೊಂಡು ಬರುವ ಯುವಕರ ಗುಂಪು, ಗ್ರಾಮದಲ್ಲಿ ದನಕರುಗಳಿರುವವರ ಮನೆಗೆ ತೆರಳಿ ಜಾನುವಾರುಗಳಿಗೆ ಆರತಿ ಬೆಳಗುತ್ತದೆ.
ಹಂಡಾಕಳಾ ಬಂಡಾಕಳಾ
ಕನಕಪ್ಪನ ಕರಿ ಆಕಳಾ
ಗುಡ್ಡಾವೇರಿ ಬರುವಾಗ ಕಳ್ಳಾರು ಕಂಡಾರೂ
ಕಳ್ಳರ ಕೈಯಾಗ ಬೆಳ್ಳಿಯ ಕುಡಗೋಲು
ಬೆಳ್ಳಿಯ ಕುಡಗೋಲು ಮಾರ ಮಾರ ಹುಲ್ಲು
ಮಾರ ಮಾರ ಹುಲ್ಲಿಗೆ ಬೋರ ಬೋರ ಹಾಲು
ಬೋರ ಬೋರ ಹಾಲಿಗೆ ಕಣ್ಣಿ ಕಣ್ಣಿ ಮೊಸರು
ಕಣ್ಣಿ ಕಣ್ಣಿ ಮೊಸರಿಗಿ, ಕಳಕಳ ತುಪ್ಪ
ಕಳಕಳ ತುಪ್ಪಕ್ಕ ಬಳಾಬಳಾ ರೊಕ್ಕ
ಆಣೀಪೀಣಿ ಜಾಣೆಗೊ ನಿಮ್ಮ ಎತ್ತಿನ ಪೀಡಾ ಹೊಳೆಯಾಚಕೊ… ಎಂದು ಹಾಡುತ್ತಾರೆ. ಆ ಮನೆಯ ದನ, ಕರು, ಬೆಳೆ, ಬೇಸಾಯಕ್ಕೆ ಒಳಿತಾಗಲೆಂದು ಹಾರೈಸಿ ಮುಂದಿನ ಮನೆಗೆ ತೆರಳುತ್ತಾರೆ.
ಅರಸನ ಕೈಯಾಗ, ಬೆಳ್ಳಿಯ ಕುಡಗೋಲ
ಬೆಳ್ಳಿಯ ಕುಡಗೋಲಿಗಿ ಮಾರ ಮಾರ ಹುಲ್ಲ
ಮಾರ ಮಾರ ಹುಲ್ಲಿಗಿ ಗೆಜ್ಜಿ ಕಟ್ಟಿದೆಮ್ಮಿ
ಗೆಜ್ಜಿ ಕಟ್ಟಿದೆಮ್ಮಿಗಿ ಸರ್ ಬುರ್ ಹಾಲು
ಸರ್ ಬುರ್ ಹಾಲಿಗೆ ಕೆನಿ ಕೆನಿ ಮೊಸರು
ಕೆನಿ ಕೆನಿ ಮೊಸರಿಗಿ ಗಮ್ ಗಮ್ ತುಪ್ಪ
ಗಮ್ ಗಮ್ ತುಪ್ಪಕ್ಕ ಬಳಕೊ ರೊಕ್ಕ…. ಎಂದು ಹರಸುತ್ತಾರೆ.
ಮೂರು ದಿನಗಳ ಕಾಲ ನಡೆಯುವ ಈ ಜಾನಪದ ಉತ್ಸವದ ಕೊನೆಯ ದಿನ ದೀಪ ಬೆಳಗಿದ ಎಲ್ಲ ಮನೆಗೂ ಹೋಗಿ ಕೊಬ್ಬರಿ, ವಸ್ತ್ರ ಸೇರಿದಂತೆ ಇತ್ಯಾದಿ ವಸ್ತುಗಳನ್ನು ಕಾಣಿಕೆಯಾಗಿ ಪಡೆದು ದೀಪವನ್ನು ಹೊಳೆಯಲ್ಲಿ ಹರಿಬಿಡುತ್ತಾರೆ.
ಈ ಆಚರಣೆ ಸಹಬಾಳ್ವೆ, ಸಾಮರಸ್ಯ ಸಾರುವುದರ ಜೊತೆಗೆ ಮೇಲು, ಕೀಳೆಂಬ ಭೇದವನ್ನು ತೊಡೆದು ಹಾಕುವುದರ ಸಂಕೇತವೂ ಆಗಿದೆ ಎನ್ನುವ ಮಾತು ವಿಜಯಪುರದ ಜನಪದ ವಿದ್ವಾಂಸ ಶಂಕರ ಬಿ. ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.