ADVERTISEMENT

ಹುಬ್ಬಳ್ಳಿ: ದೀಪಾವಳಿಗೆ ಲಂಬಾಣಿಗರ ಮೆರುಗು

ಗೋವರ್ಧನ ಎಸ್.ಎನ್.
ಜಗದೀಶ ಎಂ.ಗಾಣಿಗೇರ
Published 31 ಅಕ್ಟೋಬರ್ 2024, 6:44 IST
Last Updated 31 ಅಕ್ಟೋಬರ್ 2024, 6:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ವಿಶಿಷ್ಠ ಭಾಷೆ, ಸಂಸ್ಕೃತಿ, ಆಚರಣೆ, ವೇಷಭೂಷಣದಿಂದ ಗಮನ ಸೆಳೆಯುವ ಲಂಬಾಣಿ ಸಮುದಾಯದಲ್ಲಿ ದೀಪಾವಳಿ ಆಚರಣೆ ವಿಶೇಷ ಮೆರುಗು ಪಡೆದಿದೆ. ಹಬ್ಬದ ಮೂರೂ ದಿನ ವಿವಿಧ ರೀತಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ತೊಡಗುವ ಸಮುದಾಯದವರು, ಇಂದಿಗೂ ಅವುಗಳನ್ನು ಪಾಲಿಸಿಕೊಂಡುಬಂದಿದ್ದಾರೆ. 

ಲಂಬಾಣಿ ಭಾಷೆಯಲ್ಲಿ ದೀಪಾವಳಿಯನ್ನು ‘ದವಾಳಿ’ ಎಂದು ಕರೆಯುತ್ತಾರೆ. ಸಮಾಜದ ಹಿರಿಯ ಮಹಿಳೆಯರು ಮದುವೆಯಾಗದ ಯುವತಿಯರು ಹಾಗೂ ಚಿಕ್ಕ ಮಕ್ಕಳಿಗೆ ಸಾಂಪ್ರದಾಯಿಕ ನೃತ್ಯ ಹಾಗೂ ಹಾಡು ಹೇಳಿಕೊಡುವ ಮೂಲಕ ‘ಸಂಸ್ಕೃತಿಯ ದೀಪ’ ಹಚ್ಚುತ್ತಾರೆ. ಹಬ್ಬಕ್ಕೂ ಮುನ್ನ ನೃತ್ಯ ಹಾಗೂ ಹಾಡುಗಾರಿಕೆ ಅಭ್ಯಾಸ ನಿರಂತರವಾಗಿ ನಡೆಯುತ್ತದೆ.

‘ದೀಪಾವಳಿ ಅಮಾವಾಸ್ಯೆಯಂದು ರಾತ್ರಿ ಯುವತಿಯರು ಲಕ್ಷ್ಮಿದೇವಿ ಪೂಜೆ ಸಲ್ಲಿಸಿ, ವೇಷಭೂಷಣ ತೊಟ್ಟು ಕೈಯಲ್ಲಿ ಹಣತೆ ಹಿಡಿದು ತಾಂಡಾದ ಪ್ರತಿ ಮನೆಗೆ ತೆರಳುತ್ತಾರೆ. ಆಕಳು, ಎತ್ತುಗಳಿಗೆ ಆರತಿ ಮಾಡುತ್ತಾರೆ. ತಾಂಡಾದ ನಾಯಕ ಹಾಗೂ ಮುಖಂಡರ ಮನೆಯಲ್ಲಿ ಆರತಿ ಬೆಳಗಿಸಿ, ಹಬ್ಬದ ಶುಭಾಶಯ ಕೋರುತ್ತಾರೆ’ ಎಂದು ಅಖಿಲ ಭಾರತ ಬಂಜಾರಾ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ ತಿಳಿಸಿದರು.

ADVERTISEMENT

‘ವರ್ಷಧಾರೆ ಕೋರ ದವಾಳಿ; ತೋನ ಮೇರಾ ಲಕ್ಷಿ ತೋನ; ಮೇರಾ ಗಾವಡಿ ತೋನ ಮೇರಾ...’  ಎಂದು ಹಾಡಿ, ಎಲ್ಲರಿಗೂ ಸುಖ, ಶಾಂತಿ, ಸಂತೋಷ, ನೆಮ್ಮದಿ ಸಿಗಲೆಂದು ಹಾರೈಸುತ್ತಾರೆ. ಸೇವಾಲಾಲ್ ಹಾಗೂ ಮರಿಯಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ. ತಡರಾತ್ರಿವರೆಗೂ ದೀಪ ಬೆಳಗಿಸುವ ಈ ಆಚರಣೆಯನ್ನು ‘ಮೇರಾ’ ಎಂದು ಕರೆಯಲಾಗುತ್ತದೆ’ ಎಂದರು.

‘ಎರಡನೇ ದಿನ ಗೋವುಗಳ ಮೈ ತೊಳೆದು, ಅಲಂಕರಿಸಿ ಪೂಜಿಸಲಾಗುತ್ತದೆ. ಅಗಲಿದ ಹಿರಿಯರನ್ನು ಸ್ಮರಿಸಿ, ಅವರು ಇಷ್ಟಪಡುತ್ತಿದ್ದ ಪದಾರ್ಥಗಳನ್ನು ತಯಾರಿಸಿ ಅರ್ಪಿಸುತ್ತಾರೆ. ತುಪ್ಪ, ಧೂಪ, ಅಕ್ಕಿಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಿದ ಪದಾರ್ಥಗಳನ್ನು ಸಮರ್ಪಣೆ ಮಾಡುವುದಕ್ಕೆ ‘ಧಬುಕಾರ್’ ಎನ್ನಲಾಗುತ್ತದೆ’ ಎಂದು ತಿಳಿಸಿದರು.

‘ಬಲಿಪಾಡ್ಯಮಿಯಂದು ತಾಂಡಾದ ಯುವತಿಯರು ವಿವಿಧ ಹೂವುಗಳನ್ನು ಬಿದಿರಿನ ಬುಟ್ಟಿಯಲ್ಲಿ ತಂದು, ಸಂತ ಸೇವಾಲಾಲ್‌, ಜಗದಂಬಾ, ಮರಿಯಮ್ಮದೇವಿ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ತಾಂಡಾದ ಪ್ರತಿ ಮನೆಗೆ ತೆರಳಿ, ದನದ ಕೊಟ್ಟಿಗೆಯಲ್ಲಿ ಸಗಣಿ ಕುಪ್ಪಿಗಳನ್ನು ಸಿದ್ದಪಡಿಸಿ, ಹೂವುಗಳನ್ನಿಟ್ಟು ಪೂಜಿಸುತ್ತಾರೆ’ ಎಂದು ಮಾಹಿತಿ ನೀಡಿದರು.  

‘ಬಾಲಕಿಯರು ಒಂದೆಡೆ ಸೇರಿ ಮನೆಯಿಂದ ತಂದ ಸಿಹಿತಿನಿಸುಗಳನ್ನು ಪರಸ್ಪರ ಹಂಚಿಕೊಂಡು ತಿನ್ನುತ್ತಾರೆ. ಎಲ್ಲ ಮನೆಗಳ ಎದುರು ಜೋಡಿಸಿಟ್ಟ ಬೂದಗಳನ್ನು ಹೂವುಗಳಿಂದ ಅಲಂಕರಿಸುತ್ತಾರೆ. ಇಡೀ ದಿನ ಹಾಡು, ನೃತ್ಯದೊಂದಿಗೆ ಹಬ್ಬದ ಸಂಭ್ರಮ ಮನೆ ಮಾಡುತ್ತದೆ’ ಎಂದರು.

ದೀಪಾವಳಿ ಆಚರಣೆ ಸಂಭ್ರಮ

ಅಣ್ಣಿಗೇರಿ: ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಪಟ್ಟಣ ಜನರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 

ಹಿಂದೂ ಸಮುದಾಯಕ್ಕೆ ಬೃಹತ್ ಹಬ್ಬವೆಂದರೆ ದೀಪಾವಳಿ ಹಬ್ಬ. ಹೊಸ ಹೊಸ ಬಟ್ಟೆಗಳನ್ನು ಧರಿಸುವ ಮೂಲಕ ಪ್ರತಿ ಮನೆ ಮನೆಯಲ್ಲೂ ಲಕ್ಷ್ಮಿ ಪೂಜೆ ಮಾಡುವ ಮೂಲಕ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದರಿಂದ ಮನೆಯ ಮುಂಭಾಗದಲ್ಲಿ ದೀಪಗಳ ಬೆಳಕನ್ನು ಪ್ರತಿ ಬಿಂಬಿಸುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ.

ಮನೆಯಲ್ಲಿದ್ದ ವಾಹನಗಳ ಪೂಜೆ ಹಾಗೂ ಮಶಿನರಿಗಳನ್ನು ಕೂಡ ಈ ಹಬ್ಬದ ದಿನದಂದು ಸಡಗರದಿಂದ ಪೂಜೆ ಮಾಡಿ ಇಷ್ಟಾರ್ಥಗಳನ್ನು ಪೂರೈಸುವಂತೆ ಬೇಡಿಕೊಳ್ಳಲಾಗುತ್ತದೆ.

ದೀಪಾವಳಿ ಎಂದರೆ ಹಿಂದೂ ಸಮಾಜಕ್ಕೆ ಎಲ್ಲಿಲ್ಲದ ಸಂತೋಷವಾಗುತ್ತದೆ. ಮೂರು ದಿನಗಳ ಕಾಲ ಜರುಗುವ ಈ ಹಬ್ಬವನ್ನು ಹಿಂದು ಜನತೆ ಬೃಹತ್ ಸಂಭ್ರಮಾಚರಣೆಯಿಂದ ಮಾಡುತ್ತದೆ. ಹಬ್ಬದ ದಿನಗಳಂದು ವಿವಿಧ ತರಹದ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಹಿಡಿದು ಹಬ್ಬದ ನಿಮಿತ್ಯ ಪ್ರಸಾದ ಏರ್ಪಡಿಸಲಾಗುತ್ತದೆ.

ದೀಪಾವಳಿ ಎಂದರೆ ದೀಪ ದೀಪಗಳ ಮೂಲಕ ಬೆಳಕನ್ನು ಸಮಾಜಕ್ಕೆ ಬಿತ್ತರಿಸುವ ಪ್ರತಿ ಬಿಂಬವೇ ದೀಪಾವಳಿ ಎಂದು ಹೇಳಬಹುದಾಗಿದೆ. ಹಬ್ಬದ ನಿಮಿತ್ಯ ಮನೆಯ ಮುಂಭಾಗದಲ್ಲಿ ಅಲಂಕೃತಗೊಂಡ ವಿವಿಧ ತರಹದ ಲೈಟಿಂಗ್ ಕೂಡ ಅಳವಡಿಸಲಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.