ADVERTISEMENT

Diwali 2024: ‘ಹಸಿರು’ ದೀಪಾವಳಿಗೆ ಇರಲಿ ಆದ್ಯತೆ

ಸತೀಶ ಬಿ.
Published 31 ಅಕ್ಟೋಬರ್ 2024, 6:01 IST
Last Updated 31 ಅಕ್ಟೋಬರ್ 2024, 6:01 IST
ಹಸಿರು ಪಟಾಕಿಗಳು
ಹಸಿರು ಪಟಾಕಿಗಳು   

ಹುಬ್ಬಳ್ಳಿ: ದೀಪಾವಳಿ ಹಬ್ಬವೆಂದರೆ ಎಲ್ಲೆಡೆ ಸಡಗರ. ಹಬ್ಬದಲ್ಲಿ ದೀಪಗಳಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವವನ್ನು ಜನರು ಪಟಾಕಿಗಳಿಗೂ ನೀಡುತ್ತಾರೆ. ಪಟಾಕಿಗಳೆಂದರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಅಚ್ಚುಮೆಚ್ಚು. ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಅ.31ರಿಂದ ನ.2ರವರೆಗೆ ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿಗಳನ್ನು ಹಾರಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದೆ.

ಪಟಾಕಿ ಹಚ್ಚಿದಾಗ ಬರುವ ಶಬ್ದ, ವಿವಿಧ ಬಣ್ಣ, ಚಿತ್ತಾರ ಎಲ್ಲರಿಗೂ ಖುಷಿ ನೀಡುತ್ತದೆ. ಅದರಿಂದ ಬರುವ ಹೊಗೆ, ಹೆಚ್ಚು ಶಬ್ದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಸಿರು ಪಟಾಕಿಗಳು ಕಡಿಮೆ ಶಬ್ದ, ಕಡಿಮೆ ಹೊಗೆ ಹೊರಸೂಸುತ್ತವೆ. ಹೀಗಾಗಿ ಇವುಗಳನ್ನು ಹೆಚ್ಚು ಬಳಸಬೇಕು ಎನ್ನುತ್ತಾರೆ ಅಧಿಕಾರಿಗಳು.

ಸಾಂಪ್ರದಾಯಿಕ ಪಟಾಕಿಗಳಲ್ಲಿ ಲಿಥೀಯಂ, ಬೇರಿಯಂನಂತಹ ರಾಸಾಯನಿಕ ಅಂಶ ಹೆಚ್ಚಾಗಿರುತ್ತದೆ. ಹಸಿರು ಪಟಾಕಿಗಳಲ್ಲಿ ಇವುಗಳ ಬಳಕೆ ತೀರಾ ಕಡಿಮೆ. ಹೀಗಾಗಿಯೇ ಈ ಪಟಾಕಿಗಳಿಂದ ಸಾಂಪ್ರದಾಯಿಕ ಪಟಾಕಿಗಳಿಗಿಂತ ಶೇ 30ರಷ್ಟು ಕಡಿಮೆ ಮಾಲಿನ್ಯವಾಗುತ್ತದೆ. ಸಾಂಪ್ರದಾಯಿಕ ಪಟಾಕಿಗಳ ಶಬ್ದ 160 ರಿಂದ 200 ಡೆಸಿಬಲ್‌ ಇದ್ದರೆ, ಹಸಿರು ಪಟಾಕಿಗಳ ಶಬ್ದ 100ರಿಂದ 130 ಡೆಸಿಬಲ್‌ ಇರುತ್ತದೆ.

ADVERTISEMENT

ಹಸಿರು ಪಟಾಕಿ ಹೊರತುಪಡಿಸಿ ಉಳಿದ ಪಟಾಕಿಗಳ ಮಾರಾಟ ತಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆಯ ಪರಿಸರ ಎಂಜಿನಿಯರ್‌ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ನಿಗಾ ವಹಿಸಲಿದೆ. ಬೇರೆ ಪಟಾಕಿ ಮಾರಾಟ ಮಾಡುವುದು ಕಂಡುಬಂದರೆ ಅವರಿಗೆ ದಂಡ ವಿಧಿಸುವುದು, ವ್ಯಾಪಾರ ಪರವಾನಗಿ ರದ್ದು ಮಾಡುವ ಕೆಲಸವನ್ನೂ ಅಧಿಕಾರಿಗಳು ಮಾಡಲಿದ್ದಾರೆ.

ಮಾರುಕಟ್ಟೆಯಲ್ಲಿ ಹಸಿರು ಪಟಾಕಿಗಳ ಜತೆಗೆ ಸಾಂಪ್ರದಾಯಿಕ ಪಟಾಕಿಗಳು ಇರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡುವುದು ಸಹಜ. ಪಟಾಕಿ ಬಾಕ್ಸ್‌ ಮೇಲೆ ‘csir-neeri' ಎಂಬ ಲೋಗೊ ಇದ್ದರೆ ಮಾತ್ರ ಅವರು ಹಸಿರು ಪಟಾಕಿಗಳಾಗಿರುತ್ತವೆ. ಬಾಕ್ಸ್ ಮೇಲೆ ಇರುವ ಕ್ಯುಆರ್‌ ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ಇದನ್ನು ಪರೀಕ್ಷೆ ಮಾಡಬಹುದಾಗಿದೆ.

ಹಸಿರು ಪಟಾಕಿಗಳ ಬಣ್ಣದ ಚಿತ್ತಾರ

‘ಪಟಾಕಿ ಸಿಡಿಸುವ ಸಂಭ್ರಮ ಇನ್ನೊಬ್ಬರಿಗೆ ಅನಾಹುತ ಉಂಟುಮಾಡಬಾರದು. ಪಟಾಕಿಗಳನ್ನು ಹಾರಿಸುವ ಬದಲು ದೀಪಗಳನ್ನು ಹೆಚ್ಚು ಬೆಳಗಿಸಬೇಕು. ಒಂದು ವೇಳೆ ಪಟಾಕಿಗಳನ್ನು ಬಳಸಲೇಬೇಕೆಂದರೆ ಹಸಿರು ಪಟಾಕಿಗಳಿಗೆ ಆದ್ಯತೆ ನೀಡಬೇಕು’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಜಗದೀಶ ಅವರು.

ನೀರಿ–ಸಿಎಸ್ಐಆರ್‌ ಲೋಗೊ

ಪ್ರಮುಖ ಅಂಶಗಳು

  • ಶಬ್ದ ಮಾಲಿನ್ಯ ವಾಯು ಮಾಲಿನ್ಯ ನಿಯಂತ್ರಿಸಲು 2018ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಸಾಂಪ್ರದಾಯಿಕ ಪಟಾಕಿಗಳ ಮಾರಾಟ ಮತ್ತು ಸಿಡಿಸುವುದು ನಿಷೇಧ.

  • ಸೇಫ್ ವಾಟರ್ ರಿಲೀಸರ್‌ (SWAS) ಸೇಫ್ ಥರ್ಮೈಟ್ ಕ್ರ್ಯಾಕರ್ (STAR) ಸೇಫ್ ಮಿನಿಮಲ್ ಅಲ್ಯುಮಿನಿಯಂ (SAFAL) ಬ್ರ್ಯಾಂಡ್‌ನ ಹಸಿರು ಪಟಾಕಿಗಳು ಲಭ್ಯ

  • ಆಟಂ ಬಾಂಬ್‌ ರಾಕೆಟ್‌ 3 ಇಂಚಿಗಿಂತ ಹೆಚ್ಚು ಇರುವ ಪಟಾಕಿ ಗಾರ್ಲ್ಯಾಂಡ್‌ ಸಾರ್ವಜನಿಕ ಆಸ್ತಿಪಾಸ್ತಿ ಜೀವಕ್ಕೆ ಹಾನಿ ಮಾಡುವ ಪಟಾಕಿಗಳು ಮತ್ತು 125 ಡೆಸಿಬಲ್‌ಗಿಂದ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ.

  • ಹಬ್ಬದ ಸಂದರ್ಭದಲ್ಲಿ ರಾತ್ರಿ 10 ಗಂಟೆ ನಂತರ ಮತ್ತು ಬೆಳಿಗ್ಗೆ 8ರ ಒಳಗೆ ಪಟಾಕಿ ಮಾರಾಟ ಮಾಡುವಂತಿಲ್ಲ.

  • ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಜಾಗವನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.