ADVERTISEMENT

Diwali 2024 | ಬೆಳಕ ದೀವಿಗೆಯ ಬಗೆಬಗೆಯ ವಿನ್ಯಾಸ...

ಮಹಮ್ಮದ್ ಶರೀಫ್
Published 31 ಅಕ್ಟೋಬರ್ 2024, 6:36 IST
Last Updated 31 ಅಕ್ಟೋಬರ್ 2024, 6:36 IST
ಹುಬ್ಬಳ್ಳಿ ಈದ್ಗಾ ಮೈದಾನದ ಹತ್ತಿರ ದೀಪಾವಳಿ ಹಬ್ಬದ ಅಂಗವಾಗಿ ಮಹಿಳೆಯರು ಹಣತೆ ಖರೀದಿಸುತ್ತಿರುವುದು -ಪ್ರಜಾವಾಣಿ ಚಿತ್ರ /ಗೋವಿಂದರಾಜ ಜವಳಿ (ಸಂಗ್ರಹ ಚಿತ್ರ)
ಹುಬ್ಬಳ್ಳಿ ಈದ್ಗಾ ಮೈದಾನದ ಹತ್ತಿರ ದೀಪಾವಳಿ ಹಬ್ಬದ ಅಂಗವಾಗಿ ಮಹಿಳೆಯರು ಹಣತೆ ಖರೀದಿಸುತ್ತಿರುವುದು -ಪ್ರಜಾವಾಣಿ ಚಿತ್ರ /ಗೋವಿಂದರಾಜ ಜವಳಿ (ಸಂಗ್ರಹ ಚಿತ್ರ)   

ಹುಬ್ಬಳ್ಳಿ: ಬೆಳಕಿನ ಹಬ್ಬದಲ್ಲಿ ಹೆಚ್ಚು ಗಮನ ಸೆಳೆಯುವುದು ಪಟಾಕಿ ಸದ್ದು, ಆಕಾಶಬುಟ್ಟಿಗಳ ಆಕರ್ಷಣೆ. ಇವೆರಡರ ಭರಾಟೆಯ ನಡುವೆಯೂ ಹಣತೆ ಬೆಳಗುವ ಕ್ರಮಕ್ಕೆ ದೀಪಾವಳಿಯ ವಿಶೇಷ ಆದ್ಯತೆ ಇದೆ.

ಜ್ಞಾನಕ್ಕೆ ಸಮನಾದ ಬೆಳಕನ್ನು ಹಚ್ಚುವುದು ದೀಪಾವಳಿಯ ಸಂಕೇತ. ಕತ್ತಲಿನ ವಿರುದ್ಧ ಬೆಳಕಿನ ವಿಜಯ, ಅಜ್ಞಾನದ ವಿರುದ್ಧ ಜ್ಞಾನದ ವಿಜಯ ಎಂಬರ್ಥದಲ್ಲಿ ದೀಪಾವಳಿಯ ಹಿನ್ನೆಲೆಯನ್ನು ವಿಶ್ಲೇಷಿಸಲಾಗುತ್ತದೆ.

ಮಣ್ಣಿನಿಂದ ತಯಾರಾಗುತ್ತಿದ್ದ ಹಣತೆ, ಕಾಲಕಾಲಕ್ಕೆ, ಜನರ ಬೇಡಿಕೆಗಳಿಗನುಸಾರ ಪ್ಲಾಸ್ಟಿಕ್‌, ಪಿಂಗಾಣಿಯ ರೂಪಗಳನ್ನೂ ಪಡೆದಿದೆ. ಮಣ್ಣಿನ ಹಣತೆ ತಯಾರಿಸುವ ಕುಂಬಾರರ ಬದುಕಿಗೆ ಹೊಡೆತ ಬಿದ್ದರೂ, ಬೇಡಿಕೆ ಈಗಲೂ ಇದೆ.

ADVERTISEMENT

ವೈವಿಧ್ಯ ಹಣತೆ: ಹಣತೆಗಳನ್ನು ತಯಾರಿಸುವಷ್ಟೇ ಸವಾಲಿನ ಕೆಲಸ ಮಾರಾಟ ಮಾಡುವುದು. ಮಾರಾಟಕ್ಕಾಗಿ ಇನ್ನಷ್ಟು ಆಕರ್ಷಿಸಲು ಹಣತೆಗಳಲ್ಲಿ ಭಿನ್ನ ಭಿನ್ನವಾದ ರಂಗೋಲಿ, ಕಲೆಯನ್ನು ಮೂಡಿಸಲಾಗಿದೆ. ಹಲವು ಬಣ್ಣಗಳಲ್ಲಿ ಹಣತೆ ಲಭ್ಯವಿದೆ. ಈಗ ಬಹುತೇಕ ಹಣತೆಗಳು ಕಲಾಕತಿಗಳನ್ನು ಒಳಗೊಂಡಿದ್ದು ಮಾರುಕಟ್ಟೆಗಳಲ್ಲಿ ಜನರನ್ನು ಸೆಳೆಯುತ್ತಿದೆ.

ಮಣ್ಣಿನ ಹಣತೆಗಳ ವಿನ್ಯಾಸವೂ ಬದಲಾಗುತ್ತ ಬಂದಿದ್ದು, ಐದು ಹಣತೆಗಳ ನಡುವೆಯೇ ದೇವರ ಮೂರ್ತಿಯನ್ನೂ ನಿರ್ಮಿಸಲಾಗುತ್ತದೆ. ಇದು ಹಣತೆಗೆ ಇನ್ನಷ್ಟು ಮೆರುಗು ನೀಡುತ್ತದೆ.

ಪಿಂಗಾಣಿಯ ಹಣತೆಗಳೂ ಕೂಡ ಆಕರ್ಷಣೆಯ ವಿಷಯದಲ್ಲಿ ಮುಂದೆಯೇ ಇದೆ. ಹಣತೆಗಳ ಮೇಲೆ ಮೂಡಿಸಲಾಗುವ ಕಲಾಕೃತಿಗಳು ಹಣತೆಗೆ ಸಾಂಪ್ರದಾಯಿಕ ಸ್ಪರ್ಶವನ್ನು ಒದಗಿಸುತ್ತದೆ.

ಗೋಧಿ ಹಿಟ್ಟು, ಹಸುವಿನ ಸಗಣಿ ಬಳಸಿ ಮನೆಗಳಲ್ಲಿಯೇ ಹಣತೆ ತಯಾರಿಸುವವರೂ ಇದ್ದಾರೆ. ಅದಕ್ಕೆ ತಮ್ಮದೇ ರೀತಿಯಲ್ಲಿ ವಿನ್ಯಾಸ, ಕಲೆ ಮೂಡಿಸಿ ಚಂದಗಾಣುವಂತೆ ಮಾಡಲಾಗುತ್ತದೆ.

ಸಗಣಿ ದೀಪ: ಸಗಣಿ ದೀಪ ತಯಾರಿಸಿ ಹಚ್ಚುವವರ ಸಂಖ್ಯೆಯೂ ಹೆಚ್ಚಿದೆ. ಸಗಣಿ ದೀಪಗಳಿಗೆ ವಿದೇಶಗಳಲ್ಲಿಯೂ ಉತ್ತಮ ಬೇಡಿಕೆ ಇದೆ. ಸಗಣಿಯ ಉಂಡೆಗಳನ್ನು ತಯಾರಿಸಿ ಬಳಿಕ ಹಣತೆಯ ಆಕಾಸ ನೀಡಲಾಗುತ್ತದೆ. ಇದು ಕೂಡ ಪರಿಸರ ಸ್ನೇಹಿ ಹಾಗೂ ಆರೋಗ್ಯಕರ ಹಣತೆ ಎಂದು ಪರಿಗಣಿತವಾಗಿದೆ.

ವಿಭಿನ್ನ ವಿನ್ಯಾಸದೊಂದಿಗೆ ಬಂದ ಪಿಂಗಾಣಿ ಹಣತೆಗಳು ಹೆಚ್ಚು ಆಕರ್ಷಕವಾಗಿ ಕಂಡರೂ ಕೊಳ್ಳುವವರ ಸಂಖ್ಯೆ ಕಡಿಮೆ ಇದೆ.

ಹಣತೆಗಳಿಗೆ ಮಾರುಕಟ್ಟೆಯಲ್ಲಿ ಗಾತ್ರಗಳಿಗನುಸಾರ ಬೆಲೆ ನಿಗದಿಪಡಿಸಲಾಗಿದೆ. ದೀಪಾವಳಿ ಸಮಯದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಬೆಲೆಯೂ ಹೆಚ್ಚಿದೆ.

ಈ ದೀಪಾವಳಿ, ಎಲ್ಲರೆದೆಯಲ್ಲಿ ಸಮತೆಯ ಹಣತೆ ಹಚ್ಚಲಿ.

ಹುಬ್ಬಳ್ಳಿ ಈದ್ಗಾ ಮೈದಾನದ ಹತ್ತಿರ ದೀಪಾವಳಿ ಅಂಗವಾಗಿ ಮಹಿಳೆಯರು ಹಣತೆ ಖರೀದಿಸುತ್ತಿರುವುದು -ಪ್ರಜಾವಾಣಿ ಚಿತ್ರ /ಗೋವಿಂದರಾಜ ಜವಳಿ (ಸಂಗ್ರಹ ಚಿತ್ರ)
ಮಣ್ಣಿನ ಹಣತೆ ವಿವಿಧ ವಿನ್ಯಾಸಗಳಲ್ಲಿ (ಸಂಗ್ರಹ ಚಿತ್ರ)
ಮಣ್ಣಿನ ಹಣತೆ (ಸಂಗ್ರಹ ಚಿತ್ರ)

ಗೋಧಿ ಹಿಟ್ಟಿನ ಹಣತೆ

ನೀರು ಎಣ್ಣೆ ಹಾಗೂ ಗೋಧಿ ಹಿಟ್ಟು ಬಳಸಿ ತಯಾರಿಸಲಾಗುವ ಪರಿಸರ ಸ್ನೇಹಿ ದೀಪಗಳು ಹೆಚ್ಚು ಉತ್ತಮ ಎಂದು ನಂಬಲಾಗುತ್ತದೆ. ಹಿಟ್ಟಿನ ದೀಪಕ್ಕೆ ಧಾರ್ಮಿಕ ಹಿನ್ನೆಲೆಯೂ ಇದ್ದು ಅದು ಭಗವಂತನಿಗೆ ಪ್ರಿಯವಾದದ್ದು ಎಂದೂ ಹೇಳಲಾಗುತ್ತದೆ. ದೀಪ ರಚಿಸಿದ ಬಳಿಕ ಅದನ್ನ ಒಣಗಿಸಿ ನಂತರ ನೈಸರ್ಗಿಕವಾದ ಬೀಟ್‌ರೂಟ್‌ ಅರಿಸಿನದ ಮಿಶ್ರಣ ಮಾಡಿ ಬಣ್ಣಗಳನ್ನು ಹಚ್ಚುತ್ತಾರೆ. ದೀಪಗಳನ್ನು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವಿನ್ಯಾಸಗೊಳಿಸಬಹುದು. ಜೊತೆಗೆ ಚುಕ್ಕೆ ರೇಖೆ ಬಳಸಿ ಕಲಾಕೃತಿಗಳನ್ನು ರಚಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.