ADVERTISEMENT

ಮುಖ್ಯಮಂತ್ರಿ ಆಕಾಂಕ್ಷಿತರಲ್ಲಿ ಡಿ.ಕೆ.ಶಿವಕುಮಾರ್ ಮೊದಲಿಗರು: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 14:08 IST
Last Updated 9 ಅಕ್ಟೋಬರ್ 2024, 14:08 IST
<div class="paragraphs"><p>ಡಿ.ಕೆ.ಶಿವಕುಮಾರ್ ಮತ್ತು&nbsp;ಬಿ.ವೈ.ವಿಜಯೇಂದ್ರ</p></div>

ಡಿ.ಕೆ.ಶಿವಕುಮಾರ್ ಮತ್ತು ಬಿ.ವೈ.ವಿಜಯೇಂದ್ರ

   

ಹುಬ್ಬಳ್ಳಿ: ‘ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವವರೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. 

ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಅವಧಿ ಪೂರ್ಣಗೊಳಿಸುವರು ಎಂದು ಹೇಳುವವರೇ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಅವರಲ್ಲಿ ಡಿ.ಕೆ.ಶಿವಕುಮಾರ್ ಮೊದಲಿಗರು’ ಎಂದರು. 

ADVERTISEMENT

‘ಸಿದ್ದರಾಮಯ್ಯ ಅವರು ಸೂಚಿಸುವ ವ್ಯಕ್ತಿಗಳೇ ಸಹಜವಾಗಿ ಮುಖ್ಯಮಂತ್ರಿಯಾಗುತ್ತಾರೆ. ಹೀಗಾಗಿ ಅವರನ್ನು ಓಲೈಸಿಕೊಳ್ಳಲು ಪದೇ ಪದೇ ಅನಿವಾರ್ಯವಾಗಿ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ದಸರಾ ನಂತರ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ’ ಎಂದು ಹೇಳಿದರು.

ಪ್ರಾಮಾಣಿಕ ಕಳಕಳಿ ಇಲ್ಲ:

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣಗಳ ಸರಮಾಲೆಯಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ತಮ್ಮ ಸ್ಥಾನ ಅಲುಗಾಡುತ್ತಿದ್ದಂತೆ ಜಾತಿ ಜನಗಣತಿ ವರದಿ ಅನುಷ್ಠಾನ ಎಂಬ ದಾಳವನ್ನು ಉರುಳಿಬಿಟ್ಟಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಜಾತಿ ಗಣತಿ ಎಂಬುದೇ ಅವೈಜ್ಞಾನಿಕ ಎಂದು ಈ ಹಿಂದೆ ಅವರ ಪಕ್ಷದ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಟೀಕಿಸಿದ್ದರು. ಈ ವರದಿ ಅನುಷ್ಠಾನದಲ್ಲಿ ಸಿದ್ದರಾಮಯ್ಯ ಅವರಿಗೆ ಯಾವುದೇ ಪ್ರಾಮಾಣಿಕ ಕಳಕಳಿ ಇಲ್ಲ. ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮಾಡುತ್ತಿರುವ ನಾಟಕ’ ಎಂದು ಟೀಕಿಸಿದರು.

ಈಶ್ವರಪ್ಪನದು 20–20 ಕ್ರಿಕೆಟ್‌ ಮ್ಯಾಚ್‌:

ಕೆ.ಎಸ್‌.ಈಶ್ವರಪ್ಪ ಆರ್‌ಸಿಬಿ (ರಾಯಣ್ಣ, ಚನ್ನಮ್ಮ ಬ್ರಿಗೇಡ್‌) ಸ್ಥಾಪನೆಗೆ ಸಿದ್ಧತೆ ನಡೆಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆರ್‌ಸಿಬಿ  ಬಗ್ಗೆ ನಾನು ಏನನ್ನೂ ಹೇಳಲು ಇಷ್ಟಪಡಲ್ಲ. ಅದೊಂದು 20–20 ಕ್ರಿಕೆಟ್‌ ಮ್ಯಾಚ್‌ ಇದ್ದ ಹಾಗೆ. ನಾನು ಟೆಸ್ಟ್ ಮ್ಯಾಚ್‌ ಆಡಲು ಬಂದಿದ್ದೇನೆ. ಪಕ್ಷದಿಂದ ಉಚ್ಚಾಟನೆಯಾದವರು, ಹೊರಹೋದವರು ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಹಾಗೂ ಯೋಗ್ಯತೆಯನ್ನು ಉಳಿಸಿಕೊಂಡಿಲ್ಲ’ ಎಂದರು. 

‘ಪಕ್ಷದ ಹೈಕಮಾಂಡ್‌ಗೆ ಮಂಕುಬೂದಿ ಎರಚಿ ಪಕ್ಷದ ರಾಜ್ಯಾಧ್ಯಕ್ಷನಾಗಿಲ್ಲ. ಅಲ್ಲದೇ ನಾನು ನಾಯಕನಾಗಿ ಬಂದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುತ್ತಿದ್ದೇನೆ’ ಎಂದು ವಿಜಯೇಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.