ADVERTISEMENT

ಗಣ್ಯರನ್ನು ಚಕಿತಗೊಳಿಸಿದ ದೊಡ್ಡಣ್ಣ

ಕ್ಯಾಂಪಸ್‌ ಡೇ–2022’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಮೇ 2022, 5:04 IST
Last Updated 6 ಮೇ 2022, 5:04 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಎಸ್.ದೊಡ್ಡಣ್ಣ ಮಾತನಾಡಿದರು
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಎಸ್.ದೊಡ್ಡಣ್ಣ ಮಾತನಾಡಿದರು   

ಧಾರವಾಡ: ರನ್ನನ ಗದಾಯುದ್ಧದ ಸಾಲುಗಳನ್ನು ಅಬ್ಬರಿಸುತ್ತಲೇ ತಮ್ಮ ನೆಚ್ಚಿನ ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಸ್ನೇಹವನ್ನು ಹಿರಿಯ ನಟ ದೊಡ್ಡಣ್ಣ ನೆನಪಿಸಿಕೊಂಡರು.

ಕೃಷಿ ವಿಶ್ವವಿದ್ಯಾಲಯದ ‘ಕ್ಯಾಂಪಸ್‌ ಡೇ–2022’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ಣನ ಅಗಲಿಕೆಯ ನಂತರ ದುರ್ಯೋಧನ ಆತನನ್ನು ಗುಣಗಾನ ಮಾಡಿ ರೋಧಿಸಿದ ಕ್ಷಣವನ್ನು ಮನೋಜ್ಞವಾಗಿ ಹೇಳಿದರು. ದುಶ್ಯಾಸನ ಮಡಿದಾಗ ದುರ್ಯೋಧನ ಆತನನ್ನು ಎದೆಗವಚಿ ಹೇಳುವ ಮಾತುಗಳ ಮೂಲ ಸೋದರ ಬಾಂಧವ್ಯವನ್ನು ವಿವರಿಸಿದ ರೀತಿ ಕಣ್ಣೀರು ತರಿಸುವಂತಿತ್ತು. ಕವಿರಾಜ ಮಾರ್ಗ, ಗದಾಯುದ್ಧದಂತ ಹಳೆಗನ್ನಡ ಗ್ರಂಥಗಳ ಸಾಲುಗಳು ದೊಡ್ಡಣ್ಣ ಅವರ ಬಾಯಲ್ಲಿ ಲೀಲಾಜಾಲವಾಗಿ ಹೊರಹೊಮ್ಮುತ್ತಿದ್ದುದನ್ನು ಕಂಡು ಗಣ್ಯರೂ ಚಕಿತರಾದರು.

ADVERTISEMENT

‘ತಾಯಿ ನಂಜಮ್ಮಣ್ಣಿ ಅವರ ತೊಡೆಯ ಮೇಲೆ ಕೂತು ಬೇಡರ ಕಣ್ಣಪ್ಪ ಚಿತ್ರ ನೋಡಿದ್ದ ಸಂದರ್ಭದಲ್ಲಿ ನಾನು ಡಾ. ರಾಜಕುಮಾರ್ ಅವರೊಂದಿಗೆ ನಟಿಸುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಆದರೆ ಅವೆಲ್ಲವೂ ಸಾಕಾರಗೊಂಡಿದ್ದಕ್ಕೆ ನನ್ನ ಪೂರ್ವಜನ್ಮದ ಪುಣ್ಯವೇ ಕಾರಣವಿರಬಹುದು. ಆದರೆ ಚಿತ್ರರಂಗದಲ್ಲಿ 800 ಚಿತ್ರಗಳನ್ನು ನಟಿಸಿದ್ದೇನೆ ಎಂದರೆ ಹಾಗೂ ನನ್ನ ಸಂಭಾಷಣೆ ಜನರನ್ನು ಕಾಡಿಸಿದೆ ಎಂದಾದರೆ ಅದಕ್ಕೆ ನನ್ನ ಅಣ್ಣ ಬಸವರಾಜ ಹಾಗೂ ತಾಯಿಯ ಪ್ರೋತ್ಸಾಹ ಹಾಗೂ ಮಾರ್ಗದರ್ಶನವೇ ಕಾರಣ’ ಎಂದರು.

ತಮ್ಮ ಮಾತಿನಲ್ಲಿ ಕನ್ನಡ ಭಾಷೆಯನ್ನು ಎಂದೂ ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ದೊಡ್ಡಣ್ಣ, ತಂಜಾವೂರಿನ ಶಾಸನದಲ್ಲಿ ಕೆತ್ತಲಾಗಿರುವ ಕನ್ನಡದ ಕುರಿತ ವರ್ಣನೆಗಳನ್ನು ಅದೇ ಧಾಟಿಯಲ್ಲಿ ರೋಷದಿಂದ ವಿವರಿಸಿದರು. ಆರು ಸದ್ಗುಣ ಉಳ್ಳವರು ಕನ್ನಡಿಗರು ಎಂದು ಆ ಕಾಲದಲ್ಲೇ ಹೇಳಲಾಗಿದೆ. ತಾಯಿ ಭಾಷೆ ಹಾಗೂ ರಾಜ್ಯ ಭಾಷೆಯನ್ನು ಮರೆತರೆ ಉಳಿಗಾಲವಿಲ್ಲ ಎಂಬುದನ್ನು ಇಂದಿನ ಯುವಕರು ಮನಗಾಣಬೇಕು ಎಂದು ಕಿವಿಮಾತು ಹೇಳಿದರು.

‘ಕನ್ನಡ ಶಾಲೆಯಲ್ಲಿ ತಂದೆ, ತಾಯಿ ಹಾಗೂ ಗುರುವಿನ ಮಹತ್ವ ತಿಳಿಸುತ್ತಿದ್ದ ಕಾಲದಲ್ಲಿ ವೃದ್ಧಾಶ್ರಮಗಳು ಇರಲಿಲ್ಲ. ಆದರೆ ಇಂದು ಇಂಗ್ಲಿಷ್ ಶಾಲೆಗಳು ತಲೆ ಎತ್ತಿರುವಂತೆಯೇ ಮೌಲ್ಯಗಳು ಕುಸಿದು ತಂದೆ ತಾಯಿಯರನ್ನು ಬೀದಿಗಟ್ಟುವ ಕಾಲ ಬಂದಿದೆ. ಜನ್ಮದಿನದಂದು ದೀಪ ಆರಿಸಿ ಕೇಕು ಕತ್ತರಿಸುವ ಬದಲು, ತಾಯಿಗೆ ಎಲೆ ಅಡಿಕೆ ಕೊಟ್ಟು ಕಾಲಿಗೆ ನಮಸ್ಕರಿಸಿ ಆಶೀರ್ವಾದ ಕೇಳಿನೋಡಿ. ತಾಯಿ ಹೃದಯ ತೆರೆದುಕೊಂಡು ಆಶೀರ್ವಾದದ ಮಳೆಯೇ ಸುರಿಸುತ್ತಾಳೆ’ ಎಂದಾಗ ಇಡೀ ಆವರಣವೇ ಚಪ್ಪಾಳೆಯ ಮಳೆಗರಿಯಿತು.

ಇದಕ್ಕೂ ಮೊದಲು ಮಾತನಾಡಿದ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ. ಆರ್.ಸಿ.ಅಗರವಾಲ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕುಲಪತಿ ಡಾ. ಎಂ.ಬಿ.ಚೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಶಶಿಮೌಳಿ ಕುಲಕರ್ಣಿ, ವೈ.ಎನ್.ಪಾಟೀಲ, ಡೀನ್ ಡಾ. ಲತಾ ಪೂಜಾರ, ಡಾ. ಬಿರಾದಾರ ಇದ್ದರು.ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.