ADVERTISEMENT

ಹುಬ್ಬಳ್ಳಿ: ಸ್ತನದ ಗಂಟು ನಿರ್ಲಕ್ಷಿಸಬೇಡಿ

ಸ್ತನ ಕ್ಯಾನ್ಸರ್ ಜಾಗೃತಿ ಮಾಸ: ಸಂವಾದದಲ್ಲಿ ಡಾ.ಗಿರಿಯಪ್ಪಗೌಡರ್ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 13:28 IST
Last Updated 22 ಅಕ್ಟೋಬರ್ 2022, 13:28 IST
ಡಾ. ಎಂ.ಜಿ. ಗಿರಿಯಪ್ಪ ಗೌಡರ್
ಡಾ. ಎಂ.ಜಿ. ಗಿರಿಯಪ್ಪ ಗೌಡರ್   

ಹುಬ್ಬಳ್ಳಿ: ‘ಆರಂಭಿಕ ಹಂತದಲ್ಲೇ ತಪಾಸಣೆಗೊಳಗಾಗಿ, ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಸ್ತನ ಕ್ಯಾನ್ಸರ್‌ಅನ್ನು ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಗುಣಪಡಿಸಿಕೊಳ್ಳಬಹುದು. ಸ್ತನದಲ್ಲಿ ಯಾವುದೇ ಬಗೆಯ ಗಂಟುಗಳು ನೋವಿಲ್ಲದೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ. ವೈದ್ಯರ ಸಲಹೆ ಪಡೆಯಿರಿ’ ಎಂದು ಕಿಮ್ಸ್ ಆಸ್ಪತ್ರೆಯ ವಿಕಿರಣ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ.ಗಿರಿಯಪ್ಪಗೌಡರ್ ಹೇಳಿದರು.

ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ (ಅಕ್ಟೋಬರ್‌) ಹಿನ್ನೆಲೆಯಲ್ಲಿ ಶುಕ್ರವಾರ ‘ಪ್ರಜಾವಾಣಿ’ ಫೇಸ್‌ಬುಕ್‌ ಸಂವಾದ ಕಾರ್ಯಕ್ರಮದಲ್ಲಿ ಅವರು ಸ್ತನ ಕ್ಯಾನ್ಸರ್‌ ಕುರಿತು ವಿವರ ಮಾಹಿತಿ ನೀಡಿದರು.

‘ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು, ಯೋಗ, ಪ್ರಾಣಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಬಹುದು. ಧೂಮಪಾನ, ಮದ್ಯಸೇವನೆ ನಿಯಂತ್ರಣ, ವ್ಯಾಯಾಮ ಮಾಡುವುದು, ಸ್ಥೂಲಕಾಯ ನಿಯಂತ್ರಣ, ನಿಯಮಿತವಾಗಿ ವೈದ್ಯರಿಂದ ಪರೀಕ್ಷೆ, ಉತ್ತಮ ಆಹಾರ ಪದ್ಧತಿ ಪಾಲನೆಯಿಂದ ಸ್ತನ ಕ್ಯಾನ್ಸರ್‌ ಅನ್ನು ನಿಯಂತ್ರಿಸಬಹುದು. ಕ್ಯಾನ್ಸರ್ ಪತ್ತೆ ಆದಾಗ ಭಯಭೀತರಾಗದೆ ಧೈರ್ಯವಾಗಿ, ಆತ್ಮವಿಶ್ವಾಸದಿಂದ ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ನಿಂದ ಬಹುಬೇಗ ಗುಣವಾಗಬಹುದು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಕಿಮ್ಸ್ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ತಪಾಸಣೆಗೆ ಅಗತ್ಯವುಳ್ಳ ಅತ್ಯಾಧುನಿಕ ಯಂತ್ರೋಪಕರಣಗಳ ಸೌಲಭ್ಯಗಳಿವೆ. ಸೂಜಿ ಪರೀಕ್ಷೆ, ಎಕ್ಸ್ ರೇ, ಸ್ಕ್ಯಾನಿಂಗ್‌, ಮೆಮೊಗ್ರಾಂ ಪರೀಕ್ಷೆಗೊಳಪಟ್ಟು, ಕ್ಯಾನ್ಸರ್‌ ದೃಢಪಟ್ಟಲ್ಲಿ ಕಿಮೊ ಥೆರಪಿ, ವಿಕಿರಣ ಚಿಕಿತ್ಸೆ, ಹಾರ್ಮೋನ್ ಚಿಕಿತ್ಸೆಗಳನ್ನು ಕಡಿಮೆ ಖರ್ಚಿನಲ್ಲಿ ಪಡೆಯಬಹುದು’ ಎಂದು ಸಲಹೆ ನೀಡಿದರು.

ಸ್ತನದ ಸ್ವಯಂ ಪರೀಕ್ಷೆ: ಇತ್ತೀಚಿನ ದಿನಗಳಲ್ಲಿ ಎಲ್ಲ ವಯೋಮಾನದವರನ್ನೂ ಸ್ತನ ಕ್ಯಾನ್ಸರ್‌ ಕಾಡುತ್ತಿರುವುದು ಸಾಮಾನ್ಯವೆನಿಸಿರುವುದರಿಂದ 30 ವರ್ಷ ದಾಟಿದ ಎಲ್ಲ ಮಹಿಳೆಯರೂ ಸ್ತನವನ್ನು ತಿಂಗಳಿಗೊಮ್ಮೆ ಪರೀಕ್ಷಿಸಿಕೊಳ್ಳಬೇಕು. ಈ ಪರೀಕ್ಷೆಯನ್ನು ಮುಟ್ಟಾದ ಒಂದು ವಾರದ ನಂತರ ಮಾಡಿಕೊಳ್ಳುವುದು ಉತ್ತಮ. ಸ್ವಯಂ ಪರೀಕ್ಷೆ ವೇಳೆ ಸ್ತನ, ಕಂಕುಳ ಭಾಗದಲ್ಲಿ ಗಂಟುಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣಬೇಕು’ ಎಂದು ಡಾ.ಗಿರಿಯಪ್ಪಗೌಡರ್‌ ಹೇಳಿದರು.

‘ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್‌ ಕಂಡುಬಂದರೆ ಅಪಾಯದ ಸಾಧ್ಯತೆ ಹೆಚ್ಚು. ಇಂಥ ಸಮಯದಲ್ಲಿ ಮಗುವಿಗೆ ಹಾಲುಣಿಸುವುದು ಸೂಕ್ತವಲ್ಲ’ ಎಂದು ಹೇಳಿದರು.

ಡಾ. ಎಂ.ಜಿ.ಗಿರಿಯಪ್ಪಗೌಡರ್ ಅವರ ಜೊತೆಗಿನ ‘ಪ್ರಜಾವಾಣಿ’ ಫೇಸ್‌ಬುಕ್‌ ಸಂವಾದವನ್ನು ವೀಕ್ಷಿಸಲು https://fb.watch/gi0DCO_sGz/ ಕ್ಲಿಕ್‌ ಮಾಡಿ.

ಸ್ತನ ಕ್ಯಾನ್ಸರ್‌ ಅಂಕಿ ಅಂಶಗಳು
ವಿಶ್ವದಲ್ಲಿ23ಲಕ್ಷ ಜನರು
ದೇಶದಲ್ಲಿ1.78ಲಕ್ಷ ಜನರು
ಸಾವು (ದೇಶದಲ್ಲಿ ವರ್ಷಕ್ಕೆ)90 ಸಾವಿರ
ವರ್ಷದಲ್ಲಿ ಏರಿಕೆ ಪ್ರಮಾಣ ಶೇ 8–10

ಲಕ್ಷಣಗಳು
* ಸ್ತನದಲ್ಲಿ ನೋವಿಲ್ಲದ ಗಂಟು ಕಾಣಿಸಿಕೊಳ್ಳುವುದು
* ಸ್ತನದ ಚರ್ಮ ತಿಳಿಗೆಂಪು ಬಣ್ಣಕ್ಕೆ ತಿರುಗುವುದು
* ಸ್ತನದ ತೊಟ್ಟಿನಲ್ಲಿ ಗುಳ್ಳೆಗಳು ಕಾಣಿಸುವುದು
* ಕಿತ್ತಳೆ ಹಣ್ಣಿನ ಸಿಪ್ಪೆಯಂತೆ ಚರ್ಮ ಸುಕ್ಕಾಗುವುದು
* ತೊಟ್ಟುಗಳಿಂದ ರಕ್ತ ಬರುವುದು
* ಸ್ತನ ಅಥವಾ ತೊಟ್ಟುಗಳ ನೋವು
* ಸ್ತನದ ತೊಟ್ಟುಗಳು (ನಿಪ್ಪಲ್‌ಗಳು) ಒಳಸೇರುವುದು

ಕಾರಣಗಳು
* ಮದ್ಯ ಸೇವನೆ
* ಜಂಕ್‌ ಫುಡ್‌ ಸೇವನೆ
* ಬಹಬೇಗ ಋತುಮತಿ ಆಗುವುದು‌
* ಸ್ಥೂಲಕಾಯ ಮತ್ತು ದೈಹಿಕ ದುರ್ಬಲತೆ
* ಅನುವಂಶಿಯ ಕಾರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.