ADVERTISEMENT

ರಂಗಭೂಮಿ ನಟ ಎನ್.ಬಸವರಾಜ ಸಮಾಧಿ ಅನಾಥ

ವಿಶ್ವ ರಂಗಭೂಮಿ ದಿನ

ವಾಸುದೇವ ಮುರಗಿ
Published 27 ಮಾರ್ಚ್ 2022, 6:03 IST
Last Updated 27 ಮಾರ್ಚ್ 2022, 6:03 IST
ಗುಡಗೇರಿಯಲ್ಲಿ ಎನ್.ಬಸವರಾಜ ಅವರ ಸಮಾಧಿ ಅನಾಥವಾಗಿರುವುದು
ಗುಡಗೇರಿಯಲ್ಲಿ ಎನ್.ಬಸವರಾಜ ಅವರ ಸಮಾಧಿ ಅನಾಥವಾಗಿರುವುದು   

ಗುಡಗೇರಿ: ರಂಗಭೂಮಿಯಲ್ಲಿ ಉತ್ತರ ಕರ್ನಾಟಕದ ರಾಜಕುಮಾರನಾಗಿ ಮಿನುಗಿದ ಗುಡಗೇರಿ ಎನ್.ಬಸವರಾಜ ಸಾವನ್ನಪ್ಪಿ 11 ವರ್ಷ ಗತಿಸಿದರೂ ಸಹ ಅವರ ಸಮಾಧಿಯನ್ನು ಅಭಿವೃದ್ಧಿ ಪಡಿಸಿಲ್ಲ. ಸಮಾಧಿ ಅನಾಥವಾಗಿದೆ..!

ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಗುಡಗೇರಿ ಗ್ರಾಮದಲ್ಲಿ 1937ರ ಜುಲೈ 24ರಂದು ಬಸವರಾಜ ಜನಿಸಿದರು. ಅವರು ಬಾಲ್ಯದಲ್ಲಿ ಗರಡಿ ಮನೆಯಲ್ಲಿ ತಾಲೀಮು ಮಾಡುವುದರ ಜೊತೆಗೆ ನಾಟಕವನ್ನು ನೋಡಿ ಬೆಳೆದರು. ತಾವೂ ನಾಟಕ ಕಂಪನಿ ಆರಂಭಿಸಬೇಕೆಂದು ಬಯಸಿದರು. 1963ರಲ್ಲಿ ನವೆಂಬರ್ 17ರಂದು ‘ಶ್ರೀ ಸಂಗಮೇಶ್ವರ ನಾಟ್ಯ ಸಂಘ ಗುಡಗೇರಿ’ ನಾಟಕ ಕಂಪನಿ ಕಟ್ಟಿಕೊಂಡು, ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ನೂರಾರು ನಾಟಕ ಪ್ರದರ್ಶಿಸಿದರು. ಕಲಾ ಸೇವೆಯನ್ನು ಮಾಡುತ್ತಾ 25ಕ್ಕೂ ಹೆಚ್ಚು ನಾಟಕಗಳನ್ನು ಬರೆದು ಅಭಿನಯಿಸಿ ಸೈ ಎನಿಸಿಕೊಂಡರು.

ಬಣ್ಣದ ಹೆಣ್ಣು,ಸೂಳೆಮಗ, ದುಡ್ಡಿನ ದರ್ಪ, ನೀ ಹುಟ್ಟಿದ್ದು ಯಾರಿಗೆ, ರೈತನ ಮಕ್ಕಳು, ಹುಂಬ ಮೆಚ್ಚಿದ ಹುಡುಗಿ ಸೇರಿದಂತೆ ಅನೇಕ ನಾಟಕಗಳನ್ನು ಬರೆದು ರಂಗಭೂಮಿಯಲ್ಲಿ ಅಭಿನಯಿಸಿದಾಗ ನೋಡಗರು ಹುಚ್ಚೆದ್ದು ಸಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದರು. ಮೂರು ನಾಟಕ ಕಂಪನಿಗಳನ್ನು ಕಟ್ಟಿ ಅನೇಕ ಕಲಾವಿದರಿಗೆ ಆಶ್ರಯ ನೀಡಿದ್ದರು.

ADVERTISEMENT

ಪ್ರತಿವರ್ಷ ಯುಗಾದಿಯಲ್ಲಿ ಜರುಗುವ ಸಂಗಮೇಶ್ವರ ರಥೋತ್ಸವದಲ್ಲಿ ಸಾಮೂಹಿಕ ವಿವಾಹಗಳನ್ನು ನೆರವೇರಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಸಹ ಮಾಡುತ್ತಿದ್ದರು. ಇವರ ರಂಗಸೇವೆಯನ್ನು ಕಂಡು ಕರ್ನಾಟಕ ಸರಕಾರ ರಾಜ್ಯ ಪ್ರಶಸ್ತಿ ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.

ರಂಗಭೂಮಿಯಲ್ಲದೆ ಸಿನಿಮಾಗಳಲ್ಲಿಯೂ ಅವರು ಅಭಿನಯಿಸಿದರು. ತಮ್ಮ 74ನೇ ವಯಸ್ಸಿನಲ್ಲಿ 2011ರ ಫೆಬ್ರುವರಿ 8ರಂದು ನಿಧನರಾದರು.

ಅಂದು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಇವರ ಸಮಾಧಿಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಇದರ ಜೊತೆಗೆ ಹುಬ್ಬಳ್ಳಿಯ ಟೌನ್ ಹಾಲ್‌ಗೆ ಎನ್.ಬಸವರಾಜ ಅವರ ಹೆಸರನ್ನು ಇಡುತ್ತೇವೆ ಎಂದು ಹೇಳಿದ್ದರು. ಆದರೆ ಇಂದಿಗೂ ಇವು ಭರವಸೆಯಾಗಿಯೇ ಉಳಿದಿವೆ.

ಈಗಲಾದರೂ ಮುಖ್ಯಮಂತ್ರಿ, ಅಧಿಕಾರಿಗಳು ಸಮಾಧಿಯ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕೆಂದು ರಂಗಭೂಮಿ ಕಲಾಪ್ರೇಮಿಗಳು, ಎನ್‌.ಬಸವರಾಜ ಅವರ ಅಭಿಮಾನಿಗಳು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.