ಹುಬ್ಬಳ್ಳಿ: ಇಲ್ಲಿನ ಗಬ್ಬೂರು ವೃತ್ತದ ಬಳಿ ಮಂಗಳವಾರ ಮಾದಕ ವಸ್ತು (ಅಫೀಮ್) ಸಾಗಾಟ ಮಾಡುತ್ತಿದ್ದ ಐದು ಮಂದಿಯನ್ನು ಕಸಬಾ ಠಾಣೆ ಪೊಲೀಸರು ಬಂಧಿಸಿ, ₹1.50 ಲಕ್ಷ ಮೌಲ್ಯದ 150 ಗ್ರಾಮ್ ಅಫೀಮ್ ಹಾಗೂ 3 ಕೆ.ಜಿ ಅಫೀಮ್ ಗಿಡದ ಪೌಡರ್ (ಪೊಪೆಸ್ಟ್ರಾ) ವಶಪಡಿಸಿಕೊಂಡಿದ್ದಾರೆ.
ಜುಗತ್‌ರಾಮ್ ಪಟೇಲ್, ಹೇಮರಾಜ ಬಿಷ್ಣೋವಿ, ಧನರಾಮ ಪಟೇಲ್, ಶ್ರವಣಕುಮಾರ ಬಿಷ್ಣೋವಿ ಮತ್ತು ಓಂಪ್ರಕಾಶ ಬಿಷ್ಣೋವಿ ಬಂಧಿತರು. ಆರೋಪಿಗಳೆಲ್ಲ ರಾಜಸ್ಥಾನ ಮೂಲದವರಾಗಿದ್ದು, ಶಿವಮೊಗ್ಗ, ಶಿರಸಿ, ಕುಮಟಾ ಮತ್ತು ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದರು. ರಾಜಸ್ಥಾನ, ಗುಜರಾತನಿಂದ ಮಾದಕ ವಸ್ತುಗಳನ್ನು ತಂದು, ರಾಜ್ಯದ ವಿವಿಧೆಡೆ ಸಾಗಿಸುತ್ತಿದ್ದರು ಎಂದು ಆರೋಪಿಗಳ ವಿಚಾರಣೆಯಲ್ಲಿ ತಿಳಿದು ಬಂದಿದೆ.
'ಈ ದಂಧೆಯಲ್ಲಿ ಪಾಲ್ಗೊಂಡಿರುವ ರಾಜಸ್ಥಾನಿ, ಗುಜರಾತಿ ಆರೋಪಿಗಳು ರಾಜ್ಯದ ವಿವಿಧೆಡೆ ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ಹಾಗೂ ವ್ಯಕ್ತಿಗಳನ್ನಷ್ಟೇ ಸಂಪರ್ಕಿಸಿ ಮಾದಕ ವಸ್ತುಗಳ ಸಾಗಾಟ, ಮಾರಾಟ ಮಾಡುತ್ತಾರೆ. ಅಫೀಮ್ ಅನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುಡಿದರೆ ಉನ್ಮಾದ ಹೆಚ್ಚುತ್ತದೆ. ಅದಕ್ಕಾಗಿ ಇದರ ಬಳಕೆ ಹೆಚ್ಚಾಗುತ್ತಿದೆ. ತನಿಖೆ ಮುಂದುವರಿದಿದ್ದು, ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ' ಎಂದು ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
'ರಾಜಸ್ಥಾನ ಮತ್ತು ಗುಜರಾತನಿಂದ ರಾಜ್ಯಕ್ಕೆ ಮಾದಕ ವಸ್ತುಗಳು ಸುಲಭವಾಗಿ ಬರುತ್ತದೆ. ವ್ಯಾಪಾರ ವಹಿವಾಟಿಗೆ ತೆರಳುವವರು ಬರುವಾಗ ಜೊತೆಯಲ್ಲಿ ತೆಗೆದುಕೊಂಡು ಬಂದು ಸಂಗ್ರಹಿಸುತ್ತಾರೆ. ಹುಬ್ಬಳ್ಳಿಯಿಂದ ಕರಾವಳಿ, ಶಿವಮೊಗ್ಗ ಭಾಗಕ್ಕೆ ಬಸ್‌ನಲ್ಲಿ ಔಷಧಿ ಹಾಗೂ ಇತರ ವಸ್ತುಗಳ ಪಾರ್ಸೆಲ್ ನೆಪದಲ್ಲಿ ಸಾಗಾಟ ಮಾಡಲಾಗುತ್ತದೆ' ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.