ADVERTISEMENT

ಹುಬ್ಬಳ್ಳಿ | ಒಣ ಮೆಣಸಿನಕಾಯಿ ಮಾರಾಟ ಮೇಳ: ₹1.37ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 15:53 IST
Last Updated 4 ಫೆಬ್ರುವರಿ 2024, 15:53 IST
ಒಣ ಮೆಣಸಿನಕಾಯಿ
ಒಣ ಮೆಣಸಿನಕಾಯಿ   

ಹುಬ್ಬಳ್ಳಿ: ನಗರದಲ್ಲಿ ಕಳೆದ ಮೂರು ದಿನಗಳಿಂದ ನಡೆದ ‘12ನೇ ಒಣಮೆಣಸಿನಕಾಯಿ ಮೇಳ’ವು ಭಾನುವಾರ ಮುಕ್ತಾಯಗೊಂಡಿದ್ದು, ಒಟ್ಟು ₹1.37ಕೋಟಿ ವಹಿವಾಟು ನಡೆಸಿದೆ. 

‘ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವತಿಯಿಂದ ಫೆ.2ರಿಂದ ಫೆ.4 ರವರೆಗೆ ಒಣ ಮೆಣಸಿನಕಾಯಿ ಮಾರಾಟ ಮೇಳ ಆಯೋಜಿಸಲಾಗಿತ್ತು. ಮೂರು ದಿನ ನಡೆದ ಮೇಳದಲ್ಲಿ ಬ್ಯಾಡಗಿ ಡಬ್ಬಿ, ಕಡ್ಡಿ, ಗುಂಟೂರು, ದೇವನೂರು ಲೋಕಲ್‌, ಹಳಿಯಾಳ ಲೋಕಲ್‌ ಸೇರಿ ವಿವಿಧ ತಳಿಯ ಒಟ್ಟು 447 ಕ್ವಿಂಟಲ್‌ ಒಣ ಮೆಣಸಿನಕಾಯಿ ಬಂದಿತ್ತು. ಇದರಲ್ಲಿ 305 ಕ್ವಿಂಟಲ್‌ ಮಾರಾಟವಾಗುವ ಮೂಲಕ ಒಟ್ಟು ₹1.37ಕೋಟಿ ವಹಿವಾಟು ನಡೆದಿದೆ’ ಎಂದು ಮಂಡಳಿಯ ಪ್ರಧಾನ ವ್ಯವಸ್ಥಾಪಕ ಸಿದ್ದರಾಮಯ್ಯ ಬರಗಿಮಠ ತಿಳಿಸಿದರು. 

‘ಮೇಳದಲ್ಲಿ ಶೇಂಗಾ ಚಟ್ನಿ ಪುಡಿ, ಗುರೇಳು ಚಟ್ನಿ ಪುಡಿ, ಮಸಾಲೆ ಚಟ್ನಿ ಪುಡಿ, ಒಣ ಮೆಣಸಿನಕಾಯಿ ಪೌಡರ್‌ ಹಾಗೂ ಅರಿಸಿನ ಪುಡಿಯ ಮಾರಾಟವೂ ನಡೆಯಿತು. ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಯಿಂದ 100ಕ್ಕೂ ಅಧಿಕ ರೈತರು ಮೇಳದಲ್ಲಿ ಭಾಗವಹಿಸಿದ್ದರು. ಮೇಳಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರೈತರಿಗೂ ಉತ್ತಮ ವ್ಯಾಪಾರವಾಗಿದೆ’ ಎಂದು ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.