ADVERTISEMENT

ಹುಬ್ಬಳ್ಳಿ | ಕಾಮಗಾರಿಗಳ ಎಡವಟ್ಟಿಗೆ ಸಂಚಾರ ಕಷ್ಟ

ಶಕ್ತಿ ಕಾಲೊನಿ, ವಿನಾಯಕ ನಗರದ ನಿವಾಸಿಗರಿಗೆ ದೂಳಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 5:01 IST
Last Updated 16 ಫೆಬ್ರುವರಿ 2024, 5:01 IST
ಹುಬ್ಬಳ್ಳಿಯ ಶಕ್ತಿ ಕಾಲೊನಿಯ ರಸ್ತೆಯನ್ನು ಪೈಪ್‌ಲೈನ್‌ ಅಳವಡಿಕೆಗೆ ಅಗೆದಿರುವುದು
ಹುಬ್ಬಳ್ಳಿಯ ಶಕ್ತಿ ಕಾಲೊನಿಯ ರಸ್ತೆಯನ್ನು ಪೈಪ್‌ಲೈನ್‌ ಅಳವಡಿಕೆಗೆ ಅಗೆದಿರುವುದು   

ಹುಬ್ಬಳ್ಳಿ: ಮಳೆ ಬಂದಾಗ ಕೆಸರಿನ ಸಮಸ್ಯೆ, ಮಳೆ ಇಲ್ಲದಿದ್ದರೆ ದೂಳಿನ ಮಜ್ಜನ. ವಾಹನಗಳು ವೇಗವಾಗಿ ಸಾಗಿದರೆ ಅಪಘಾತದ ಭೀತಿ, ಪಾದಚಾರಿಗಳಿಗಂತೂ ನಿತ್ಯ ಕಿರಿಕಿರಿ....ಇದು ಹುಬ್ಬಳ್ಳಿಯ ಸದ್ಯದ ಚಿತ್ರಣ.

ನಗರದ ಪ್ರಮುಖ ಬಡಾವಣೆಗಳಿಗೆ ಅದರಲ್ಲೂ ಶಕ್ತಿ ಕಾಲೊನಿ, ವಿನಾಯಕನಗರದಂತಹ ಸ್ಥಳಗಳಿಗೆ ಹೋದರಂತೂ ದೂಳುಮಯ ಪ್ರದೇಶಕ್ಕೆ ಭೇಟಿ ನೀಡಿದಂತೆ ಭಾಸವಾಗುತ್ತದೆ. ಅಲ್ಲಿಂದ ಹೊರಬರುವಷ್ಟರಲ್ಲಿ ತೊಟ್ಟ ಬಟ್ಟೆಗಳು ಕೂಡ ಮಲಿನ ಆಗಿರುತ್ತವೆ. ಶುಚಿತ್ವ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ.

ಸ್ಮಾರ್ಟ್‌ ಸಿಟಿ ಹುಬ್ಬಳ್ಳಿಯ ಪ್ರತಿಯೊಂದು ಬೀದಿಯಲ್ಲಿ 24*7 ನೀರು ಪೂರೈಕೆಗೆಂದು ಪೈಪ್‌ಲೈನ್‌ ಅಳವಡಿಕೆ ಕಾರ್ಯ  ಸಾಗಿದೆ. ಆದರೆ, ಈ ಕಾರಣಕ್ಕೆ ರಸ್ತೆ ಅಗೆದು ಮಣ್ಣು ಮುಚ್ಚಲಾಗಿದೆ. ಇದರ ಪರಿಣಾಮ ಚೆನ್ನಾಗಿರುವ ರಸ್ತೆಯೂ ಹದಗೆಟ್ಟು, ವಾಹನ ಸವಾರರು ಮತ್ತು ಆಯಾ ಬಡಾವಣೆಯ ನಿವಾಸಿಗಳು ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ.

ADVERTISEMENT

‘ಶಕ್ತಿ ಕಾಲೊನಿ, ವಿನಾಯಕ ನಗರ, ಶಿರೂರ ಪಾರ್ಕ್‌ ಸೇರಿ ವಿವಿಧ ಬೀದಿಗಳ ಒಳ ರಸ್ತೆಗಳಲ್ಲಿ ಗ್ಯಾಸ್‌ ಮತ್ತು ನೀರಿನ ಪೈಪ್‌ಲೈನ್‌  ಅಳವಡಿಕೆಗಾಗಿ ರಸ್ತೆ ತಗ್ಗು ತೆಗೆದು ಪೈಪ್‌ ಅಳವಡಿಸಲಾಗಿದೆ. ಆದರೆ, ನಂತರದ ಅವಧಿಯಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳದಿರುವ ಕಾರಣ ಸಮಸ್ಯೆಯಾಗಿದೆ’ ಎಂದು ಆಯಾ ಬಡಾವಣೆಗಳ ನಿವಾಸಿಗಳು ದೂರುತ್ತಾರೆ.

‘ಶಕ್ತಿ ಕಾಲೊನಿಯ ರಸ್ತೆಯಲ್ಲಿ ಸಾಕಷ್ಟು ಸಮಸ್ಯೆಯಿದೆ. 6 ತಿಂಗಳಿನಿಂದ ಸಂಕಷ್ಟ ಇನ್ನೂ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಈ ಕಾಲೊನಿಯಲ್ಲಿ ಸುಮಾರು 130 ಮನೆಗಳಿವೆ’ ಎಂದು ಅವರು ಹೇಳುತ್ತಾರೆ.

‘ನೃಪತುಂಗ ಬೆಟ್ಟ, ಶಕ್ತಿ ಕಾಲೊನಿ, ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯ, ಸಾಯಿ ನಗರ, ಪ್ರೆಸಿಡೆಂಟ್‌ ಹೋಟೆಲ್‌ ಮೂಲಕ ಧಾರವಾಡಕ್ಕೆ ಓಡಾಡಲು ಸಹಕಾರಿ ಆಗಿದೆ. ಆದ್ದರಿಂದ ಈ ರಸ್ತೆ ಮೂಲಕ ನಿತ್ಯ ನೂರಾರು ವಾಹನ ಸವಾರರ ಓಡಾಡುತ್ತಾರೆ. ಅಷ್ಟೇ ಅಲ್ಲದೆ, ಅನೇಕ ಶಾಲೆಗಳು ಸುತ್ತಮುತ್ತ ಇರುವುದರಿಂದ ಹೆಚ್ಚು ಮಕ್ಕಳ, ವೃದ್ಧರು ಓಡಾಡದಂತ ಸಮಸ್ಯೆ ಉಂಟಾಗಿದೆ’ ಎಂದು ಶಕ್ತಿ ಕಾಲೊನಿ ನಿವಾಸಿ ಎಸ್‌.ವಿ. ಹೆಗಡೆ ಹೇಳುತ್ತಾರೆ.

‘ನೀರಿನ ಪೈಪ್‌ಲೈನ್ ಅಳವಡಿಕೆಗೆಂದು ರಸ್ತೆ ಮಧ್ಯೆ ತಗ್ಗು ತೆಗೆಯಲಾಗಿದೆ. ಯಾವುದೇ ಮಾಹಿತಿ ನೀಡದೆ ರಸ್ತೆ ಅಗೆದು ಮುಚ್ಚಿದ್ದಾರೆ. ತುಂಬಾ ಹಳೆಯ ಕಾಲೊನಿ ಆಗಿದ್ದರಿಂದ ರಸ್ತೆ ಅಗೆಯುವಾಗ ಕೆಬಲ್‌ಗಳ ಬಗ್ಗೆ ಗಮನ ಹರಿಸದ ಕಾರಣ ಇಲ್ಲಿರುವ ಪ್ರತಿಯೊಬ್ಬರ ಮನೆಯ ಕೇಬಲ್‌ಗಳು ತುಂಡಾಗಿವೆ. ಅರೆಬರೆ ಕಾಮಗಾರಿ ಕೈಗೊಂಡು ಅಷ್ಟಕ್ಕೆ ಬಿಟ್ಟಿರುವ ಕಾರಣ ಇಷ್ಟೆಲ್ಲ ಸಮಸ್ಯೆಯಾಗಿದೆ. ಕಾಮಗಾರಿ ಪೂರ್ಣಗೊಳಿಸುವ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ’ ಎಂದ ಅವರು ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ಶಕ್ತಿ ಕಾಲೊನಿಯ ರಸ್ತೆಯನ್ನು ಪೈಪ್‌ಲೈನ್‌ ಅಳವಡಿಕೆಗೆ ಅಗೆದಿರುವುದು
ಗುರುಸಿದ್ದಪ್ಪ
ಎಸ್‌.ವಿ. ಹೆಗಡೆ

ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ರಸ್ತೆ ದುರಸ್ತಿಗೆ ತಗಲುವ ವೆಚ್ಚ ಭರಿಸುವುದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು. ಲೋಪವಾದ ಕಡೆ ಪರಿಶೀಲಿಸಲಾಗುವುದು. ಡಾ.ಈಶ್ವರ ಉಳ್ಳಾಗಡ್ಡಿ ಕಮಿಷನರ್ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ

ರಸ್ತೆ ಸರಿಪಡಿಸುವಂತೆ ಸಾಕಷ್ಟು ಬಾರಿ ತಿಳಿಸಿದ ಮೇಲೆ ಅಧಿಕಾರಿಗಳು ಭೇಟಿ ನೀಡಿ ರಸ್ತೆ ದುರಸ್ತಿ ಮಾಡಿಸುವುದಾಗಿ ಹೇಳಿ ಹೋಗುತ್ತಾರೆ. ಆದರೆ ಇಲ್ಲಿವರೆಗೂ ರಸ್ತೆ ದುರಸ್ತಿಗೆ ಮುಂದಾಗಿಲ್ಲ.- ಎಸ್‌.ವಿ. ಹೆಗಡೆ ಶಕ್ತಿ ಕಾಲೊನಿ ನಿವಾಸಿ

ಈ ರಸ್ತೆ ಅಗೆದಿದ್ದರಿಂದ ದೂಳಿನ ಸಮಸ್ಯೆ ಉಂಟಾಗಿದ್ದು ದೂಳಿನಿಂದ ಬೇಸತ್ತು ಹೋಗಿದ್ದೇವೆ. ಮನೆ ಬಾಗಿಲು ತೆಗೆಯದಂತ ಸ್ಥಿತಿ ನಿರ್ಮಾಣವಾಗಿದೆ.- ಗುರಸಿದ್ದಪ್ಪ ಶಕ್ತಿ ಕಾಲೊನಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.