ADVERTISEMENT

ಆರ್ಕಿಟೆಕ್ಟ್‌ ಮನೆ ಜಾಲಾಡಿದ ತನಿಖಾ ತಂಡ: ದಾಖಲೆಪತ್ರ ವಶ

ಧಾರವಾಡ ಬಹುಮಹಡಿ ಕಟ್ಟಡ ದುರಂತ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 17:11 IST
Last Updated 27 ಮಾರ್ಚ್ 2019, 17:11 IST
ಹುಬ್ಬಳ್ಳಿ ಆದರ್ಶನಗರದಲ್ಲಿರುವ ಆರ್ಕಿಟೆಕ್ಟ್‌ ವಿವೇಕ ಪವಾರ ಮನೆಯಲ್ಲಿ ಬುಧವಾರ ಪರಿಶೀಲನೆ ನಡೆಸಿ ಹೊರಬಂದ ತನಿಖಾ ತಂಡ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ಆದರ್ಶನಗರದಲ್ಲಿರುವ ಆರ್ಕಿಟೆಕ್ಟ್‌ ವಿವೇಕ ಪವಾರ ಮನೆಯಲ್ಲಿ ಬುಧವಾರ ಪರಿಶೀಲನೆ ನಡೆಸಿ ಹೊರಬಂದ ತನಿಖಾ ತಂಡ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಧಾರವಾಡದ ಬಹು ಮಹಡಿ ಕಟ್ಟಡ ದುರಂತಕ್ಕೆ ಸಂಬಂಧಿಸಿದಂತೆ ಆ ಕಟ್ಟಡದ ವಿನ್ಯಾಸಗಾರ (ಆರ್ಕಿಟೆಕ್ಟ್‌ ಎಂಜಿನಿಯರ್‌) ವಿವೇಕ ಪವಾರ ಮನೆಯಲ್ಲಿ ಬುಧವಾರ ಜಾಲಾಡಿದ ತನಿಖಾಧಿಖಾರಿಗಳು ಮಹತ್ವದ ದಾಖಲೆ, ಪತ್ರಗಳನ್ನು ವಶಕ್ಕೆ ಪಡೆದರು.

ಡಿಸಿಪಿ(ಕಾನೂನು, ಸುವ್ಯವಸ್ಥೆ) ಡಿ.ಎಲ್‌.ನಾಗೇಶ್‌ ನೇತೃತ್ವದ ತನಿಖಾ ತಂಡ, ಆರ್ಕಿಟೆಕ್ಟ್‌ ಪವಾರನನ್ನು ಹುಬ್ಬಳ್ಳಿಯ ಆದರ್ಶನಗರದ ಎರಡನೇ ಕ್ರಾಸ್‌ನಲ್ಲಿರುವ ಅವರ ಕರೆತಂದು, ಸುಮಾರು ಅರ್ಧ ತಾಸು ಮನೆಯಲ್ಲಿ ಪರಿಶೀಲನೆ ನಡೆಸಿತು.

ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧೆಡೆ ಪವಾರ್‌ ವಿನ್ಯಾಸಗೊಳಿಸಿರುವ ಕಟ್ಟಡಗಳ ಬಗ್ಗೆ ಇರುವ ದಾಖಲೆ, ಪತ್ರಗಳನ್ನೂ ತನಿಖಾಧಿಕಾರಿಗಳು ಕಲೆ ಹಾಕಿ, ತಮ್ಮ ಜೊತೆ ತೆಗೆದುಕೊಂಡು ಹೋದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಪಿ ಡಿ.ಎಲ್‌. ನಾಗೇಶ್‌, ಪ್ರಕರಣಕ್ಕೆ ಪೂರಕವಾದ ಮಾಹಿತಿ ಸಂಗ್ರಹಕ್ಕಾಗಿ ಆರ್ಕಿಟೆಕ್ಟ್‌ ಮನೆಯಲ್ಲಿ ತಪಾಸಣೆ ನಡೆಸಲಾಯಿತು. ಒಂದಷ್ಟು ದಾಖಲೆ, ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಆರು ದಿನಗಳ ಕಾಲ ತನಿಖಾ ತಂಡದ ವಶದಲ್ಲಿದ್ದ ಆರ್ಕಿಟೆಕ್ಟ್‌ನನ್ನು ಬುಧವಾರ ಸಂಜೆ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರು ‍ಪಡಿಸಲಾಗಿದೆ. ಅಗತ್ಯ ಬಿದ್ದಿರೆ ಮತ್ತೆ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.

ಕಿಮ್ಸ್‌ನಲ್ಲಿ ಮುಂದುವರಿದ ಚಿಕಿತ್ಸೆ: ಕಟ್ಟಡದ ಮಾಲೀಕರಾದ ಗಂಗಣ್ಣ ಶಿಂತ್ರಿ, ಬಸವರಾಜ ನಿಗದಿ ಮತ್ತು ಎಂ.ಎಸ್‌.ಪುರದಗುಡಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ.

‘ನ್ಯಾಯಾಂಗ ಬಂಧನದಲ್ಲಿರುವ ಗಂಗಣ್ಣ ಶಿಂತ್ರಿ ಮತ್ತು ಬಸವರಾಜ ನಿಗದಿ ರಕ್ತದೊತ್ತಡ, ಮಧುಮೇಹದ ಕಾರಣಕ್ಕೆ ಹಾಗೂ ಎಂ.ಎಸ್‌.ಪುರದಗುಡಿಗೆ ಎದೆನೋವಿನ ಕಾರಣ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿಗಳಿಗೆ ಕಿಮ್ಸ್‌ನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಸುಳ್ಳು, ಕ್ಯಾತ್‌ಲ್ಯಾಬ್‌ ಪಕ್ಕದ ಜನರಲ್‌ ವಾರ್ಡ್‌ನಲ್ಲೇ ಸಾಮಾನ್ಯ ಚಿಕಿತ್ಸೆ ನೀಡಲಾಗುತ್ತಿದೆ. ನ್ಯಾಯಂಗ ಬಂಧನದಲ್ಲಿ ಇರುವುದರಿಂದ ಪೊಲೀಸ್‌ ಭದ್ರತೆ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.