ADVERTISEMENT

ಆರ್ಥಿಕ ಸ್ಥಿತಿ ಸುಧಾರಿಸಿದ ಸ್ವಸಹಾಯ ಸಂಘ: ಸೂರ್ಯಕಾಂತ ಅರಳಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 12:48 IST
Last Updated 16 ಡಿಸೆಂಬರ್ 2022, 12:48 IST
ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ  ಮಾತನಾಡಿದರು – ಪ್ರಜಾವಾಣಿ ಚಿತ್ರ
ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿದರು – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ದೇಶದಲ್ಲಿ 1.95 ಲಕ್ಷ ಮಹಿಳಾ ಸ್ವಸಹಾಯ ಗುಂಪುಗಳಿವೆ. 10 ಲಕ್ಷ ಮಹಿಳೆಯರು ತೊಡಗಿಸಿಕೊಂಡಿದ್ದು, ಅವರ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್. ಸೂರ್ಯಕಾಂತ ಅರಳಿ ಹೇಳಿದರು.

ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಜಿಲ್ಲಾ ಸಹಕಾರ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ನಡೆದ ಬೆಳಗಾವಿ ವಿಭಾಗ ಮಟ್ಟದ ಆಯ್ದ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿರುವ 68 ಕೋಟಿ ಮಹಿಳಾ ಜನಸಂಖ್ಯೆಯಲ್ಲಿ ಶೇ 2ರಷ್ಟು ಮಂದಿಯಿಂದ ಮಾತ್ರ ಸಹಕಾರ ಕ್ಷೇತ್ರಕ್ಕೆ ಕೊಡುಗೆ ಸಿಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಕ್ಷೇತ್ರಕ್ಕೆಬಜೆಟ್‌ನಲ್ಲಿ ₹1,75,000 ಕೋಟಿ ಅನುದಾನ ಮೀಸಲಿಟ್ಟಿವೆ. ಮಹಿಳಾ ಸಹಕಾರ ಸಂಘಗಳು ಇದನ್ನೇ ದುಡಿಯುವ ಬಂಡವಾಳ ಮಾಡಿಕೊಂಡು ಬೆಳೆಯಬೇಕಿದೆ’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕಿ‌ ಕುಸುಮಾವತಿ ಶಿವಳ್ಳಿ, ‘ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕಾದರೆ, ಸಹಕಾರ ಕ್ಷೇತ್ರದಲ್ಲಿ ಅವರ ಸಹಭಾಗಿತ್ವ ಹೆಚ್ಚಬೇಕು’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಜಿ.ಪಿ. ಪಾಟೀಲ ಮಾತನಾಡಿ, ‘ಸಹಕಾರ ಕ್ಷೇತ್ರದಲ್ಲಿ ಕಾಲಕ್ಕೆ ತಕ್ಕಂತೆ ಆಗುವ ಮಾರ್ಪಾಡುಗಳ ಬಗ್ಗೆ ಮಹಿಳಾ ಸಹಕಾರ ಸಂಘಗಳಿಗೆ ತರಬೇತಿ ನೀಡಬೇಕು’ ಎಂದು ಸಲಹೆ ನೀಡಿದರು.

ಆಧುನಿಕ ಜೀವನಶೈಲಿ ಮತ್ತು ಒತ್ತಡ ನಿರ್ವಹಣೆ ಕುರಿತು ಮಾತನಾಡಿದ ಪ್ರಸೂತಿ ತಜ್ಞೆ ಡಾ.‌ ಪದ್ಮಾ ಕೃಷ್ಣಮೂರ್ತಿ, ‘ಮನುಷ್ಯ ಆಧುನಿಕನಾದಂತೆ ಆರೋಗ್ಯಯುತ ಆಹಾರ ಪದಾರ್ಥಗಳನ್ನು ತೊರೆದು ಕೊಲೆಸ್ಟ್ರಾಲ್ ಆಹಾರಗಳನ್ನು ಅವಲಂಬಿಸಿದ್ದಾನೆ. ಮನುಷ್ಯರ ನಡುವೆ ಪರಸ್ಪರ ಮಾತುಕತೆ ಕಡಿಮೆಯಾಗುತ್ತಿದ್ದು, ತೋರಿಕೆಯ ಜೀವನಕ್ಕೆ ಜೋತು ಬೀಳುತ್ತಿದ್ದಾರೆ. ಮೊಬೈಲ್ ಬಳಕೆ ಹೆಚ್ಚಾಗಿದ್ದು, ನಿದ್ರೆ ಪ್ರಮಾಣ ತಗ್ಗಿದೆ. ಆರೋಗ್ಯದ ಏರುಪೇರಿಗೆ ಇವೆಲ್ಲವೂ ಕಾರಣ. ಯಾವುದೂ ಅತಿಯಾಗದಂತೆ ನೋಡಿಕೊಂಡಾಗ, ಒತ್ತಡರಹಿತ ಜೀವನ ನಡೆಸಬಹುದು’ ಎಂದರು.

ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಂಕ್ರಪ್ಪ ರಾಯನಾಳ, ಉಪಾಧ್ಯಕ್ಷೆ ಗೀತಾ ಕುಂಬಿ,ಮಹಾಮಂಡಳ ನಿರ್ದೇಶಕ ಬಾಪುಗೌಡ ಪಾಟೀಲ, ಕೆಲಗೇರಿಯ ಶಿವಶಕ್ತಿ ಮಹಿಳಾ ವಿವಿದೋದ್ದೇಶಗಳ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಲೂತಿಮಠ,ರತ್ನಾ ಶೆಟ್ಟರ, ಗಿರಿಜಾ ಪಾಟೀಲ ಹಾಗೂ ಪಿ.ಪಿ. ಗಾಯಕವಾಡ ಇದ್ದರು. ಶೋಭಾ ಹಂಪಿಹೊಳಿ ಪ್ರಾರ್ಥನೆ ಹಾಡಿದರು. ಸವಿತಾ ಹಿರೇಮಠ ನಿರೂಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.