ಹುಬ್ಬಳ್ಳಿ: ಇಲ್ಲಿನ ಅಪರಾಧ ತನಿಖಾ ವಿಭಾಗದ ವಿಶೇಷ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬುಧವಾರ ಕಾರ್ಯಾಚರಣೆ ನಡೆಸಿ ಆನೆ ದಂತಗಳಿಂದ ತಯಾರಿಸಿದ ಬೆಲೆಬಾಳುವ ಕಲಾಕೃತಿಗಳನ್ನು ವಶಪಡಿಸಿಕೊಂಡಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಕೊಲ್ಹಾಪುರದಿಂದ ತಂದ ಕಲಾಕೃತಿಗಳನ್ನು ಹೊಸ ಬಸ್ ನಿಲ್ದಾಣದ ಬಳಿ ಮಾರಾಟ ಮಾಡುವ ಯತ್ನದಲ್ಲಿದ್ದಾಗ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆನೆ ದಂತಗಳಿಂದ ತಯಾರಿಸಿದ 384 ಗ್ರಾಂ ಆಲಂಕಾರಿಕ ಪೆಟ್ಟಿಗೆ, ಕೆಂಪು ಹರಳು ಇರುವ 112 ಗ್ರಾಂ ತೂಕದ ಒಂದು ಖಡ್ಗ, 350 ಗ್ರಾಂ ತೂಕದ ಆಯತಾಕಾರದ ಒಂದು ಪೆಟ್ಟೆಗೆ ಹಾಗೂ 279 ಗ್ರಾಂ ತೂಕದ ಮೊಟ್ಟೆಯಾಕಾರದ ಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.
ಕೊಲ್ಹಾಪುರದ ಸಾತ್ ಶಹಜಾನ ಜಮಾದಾರ, ವಿಜಯ್ ರಾಜಾರಾಂ ಕುಂಬಾರ, ಸಾಗರ ಸುಭಾಷ ಪರಾಣಿಕ, ನಿಪ್ಪಾಣಿಯ ವಿನಾಯಕ ನಾಮದೇವ ಕಾಂಬ್ಲೆ ಮತ್ತು ದಾನಜೀ ಪಾಂಡುರಂಗ ಪಾಟೀಲ ಬಂಧಿತರು. ಇವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ನೇತೃತ್ವದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಪ್ರಸಾದ ಪಣೇಕರ್ ಹಾಗೂ ಸಿಬ್ಬಂದಿ ಎಲ್.ಎ. ಪಾಠಕ, ಅಶೋಕ ನಾಗರಳ್ಳಿ, ರವೀಂದ್ರ ಗೋಣೆನವರ, ಎಸ್.ಎಚ್.ಹುಲಗೇರ, ದಿವ್ಯ ಎಸ್. ನಾಯ್ಕ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.