ಹುಬ್ಬಳ್ಳಿ: ದೇಶದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಅಗತ್ಯ ಸೌಕರ್ಯಗಳನ್ನು ವಿವಿಧ ಮೂಲಗಳಿಂದ ಕಲ್ಪಿಸಲು ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಕಿಮ್ಸ್‌ನಲ್ಲಿ ಶನಿವಾರ ನಡೆದ ಕೋಲ್ ಇಂಡಿಯಾ ಮತ್ತು ಐಒಸಿಎಲ್ ಕಂಪನಿಗಳು ಸಿಎಸ್‌ಆರ್ ನಿಧಿಯಲ್ಲಿ ನೀಡಿದ ₹5.5 ಕೋಟಿ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಕಿಮ್ಸ್‌ಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 19ರಷ್ಟು ಜನ ಮಾತ್ರ ಖಾಸಗಿ ಆರೋಗ್ಯ ವಿಮಾ ಸೌಲಭ್ಯ ಹೊಂದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಆಯುಷ್ಮಾನ್ ಆರೋಗ್ಯ ಭಾರತ ಯೋಜನೆಯಡಿ 55 ಕೋಟಿ ಜನರಿಗೆ ಆರೋಗ್ಯ ವಿಮೆ ಒದಗಿಸಿದೆ’ ಎಂದರು.
‘ಕಿಮ್ಸ್ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ವೇಗವಾಗಿ ಪ್ರಸ್ತಾವ ಸಲ್ಲಿಸಿದ್ದರಿಂದ ಕೋಲ್ ಇಂಡಿಯಾ ಹಾಗೂ ಐಒಸಿಎಲ್‌ನಿಂದ ನೆರವು ಕೊಡಿಸಲು ಸಾಧ್ಯವಾಯಿತು. ಕೋವಿಡ್ ಸಂದರ್ಭದಲ್ಲಿ ಕಿಮ್ಸ್ ವೈದ್ಯರು ತೋರಿದ ವೃತ್ತಿ ಸಮರ್ಪಣಾ ಮನೋಭಾವ ಮತ್ತು ಬದ್ಧತೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು ಮುಂದೆ ಕಿಮ್ಸ್‌ನಲ್ಲಿ ದಾಖಲಾಗುವ ರೋಗಿಗಳು ನಗುಮೊಗದಿಂದ ಹೋಗುವಂತಾಗಬೇಕು. ಇದಕ್ಕಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಿಮ್ಸ್ ಬಗ್ಗೆ ಈಗಿರುವ ಹೆಮ್ಮೆಯ ಭಾವ ಮುಂದೆಯೂ ಉಳಿಯುವಂತೆ ವೈದ್ಯರು ಕೆಲಸ ಮಾಡಬೇಕು’ ಎಂದರು.
ಐಒಸಿಎಲ್ ಕಂಪನಿಯ ರಾಜ್ಯದ ಮುಖ್ಯಸ್ಥ ಡಿ.ಎಲ್. ಪ್ರಮೋದ್ ವಿಡಿಯೊ ಸಂವಾದ ಮೂಲಕ ಮಾತನಾಡಿ ‘ಜನರ ಆರೋಗ್ಯ ಕಾಪಾಡುವ ಕಿಮ್ಸ್ ಆಸ್ಪತ್ರೆಗೆ ಸೌಲಭ್ಯಗಳನ್ನು ಒದಗಿಸಲು ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟವೆಂದೇ ಭಾವಿಸಿದ್ದೇವೆ’ ಎಂದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಶಾಸಕ ಅರವಿಂದ ಬೆಲ್ಲದ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಪ್ರಾಂಶುಪಾಲ ಡಾ.ಎಂ.ಸಿ.ಚಂದ್ರ, ಕಿಮ್ಸ್ ಆಡಳಿತ ಮಂಡಳಿ ಸದಸ್ಯ ಜಿ.ಬಿ.ಸತ್ತೂರ, ಕೋಲ್ ಇಂಡಿಯಾ ಹಾಗೂ ಐಒಸಿಎಲ್ ಪ್ರತಿನಿಧಿಗಳಾದ ರಮೇಶ ಬಾಬು ಹಾಗೂ ಗೌಸ್ ಭಾಷಾ ಇದ್ದರು.
ಹುಬ್ಬಳ್ಳಿ–ಧಾರವಾಡ ಷಟ್ಪಥ ರಸ್ತೆಗೆ ಒಪ್ಪಿಗೆ
ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಬೈಪಾಸ್ ರಸ್ತೆಯನ್ನು ಆರು ಪಥಗಳ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದೆ ಎಂದು ಜೋಶಿ ತಿಳಿಸಿದರು.
‘ಈ ಕುರಿತು ಶನಿವಾರ ನಡೆದ ಸಭೆಯಲ್ಲಿ ನಂದಿ ಇನ್‌ಫ್ರಾಸ್ಟ್ರಕ್ಟರ್ ಕಂಪನಿ ಜೊತೆ ಚರ್ಚಿಸಲಾಗಿದೆ. 2024ರ ವರೆಗೆ ನಂದಿ ಕಂಪನಿ ಟೋಲ್ ಸಂಗ್ರಹಿಸಲಿದೆ. ಈಗಿರುವ ರಸ್ತೆಯ ಪಕ್ಕದಲ್ಲಿ ಕೆಲ ತಿಂಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಜಿಲ್ಲಾಧಿಕಾರಿಗಳು ಆದಷ್ಟು ಬೇಗನೆ ಭೂ ಸ್ವಾಧೀನ ಪ್ರಕ್ರಿಯೆ ಮಾಡಬೇಕು’ ಎಂದರು.
‘ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಿಸಲು ಜನವರಿಯಲ್ಲಿ ಚಾಲನೆ ನೀಡಲಾಗುವುದು. ಎನ್‌ಟಿಪಿಸಿಎಲ್ ಅವಳಿ ನಗರದಲ್ಲಿ ಕಲ್ಲಿದ್ದಲು ಆಧರಿತ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಮುಂದಾಗಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘಟಕ ನಿರ್ಮಾಣವಾಗಲಿದೆ. ಅಭಿವೃದ್ಧಿ ಹೊಂದಿರುವ ನಾಗಪುರಕ್ಕೆ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಬೇಕು’ ಎಂದರು.
ಲಲಿತಾ ಕಲಾ ಅಕಾಡೆಮಿಗೆ ಅನುಮೋದನೆ
ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಲಲಿತಾ ಕಲಾ ಅಕಾಡೆಮಿಯ ಪ್ರಾದೇಶಿಕ ಕಚೇರಿ ಆರಂಭಿಸಲು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಲ್ಹಾದ ಸಿಂಗ್ ಪಟೇಲ್ ಅನುಮತಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಆದಷ್ಟು ಬೇಗನೆ ಜಾಗ ಗುರುತಿಸಿ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವ ಸಲ್ಲಿಸಿದರೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜೋಶಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.