ಹುಬ್ಬಳ್ಳಿ: ‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಿಗ್ಗಾವಿ ಕ್ಷೇತ್ರಕ್ಕೆ ಯಾವ ಕೊಡುಗೆಯೂ ನೀಡಿಲ್ಲ. ಹೀಗಿದ್ದಾಗ ಯಾವ ಮುಖ ಇಟ್ಟುಕೊಂಡು ಅವರು ಅಲ್ಲಿ ಮತ ಯಾಚಿಸುತ್ತಾರೆ’ ಎಂದು ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿಗ್ಗಾವಿಯಲ್ಲಿ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಒಂದು ಕ್ರೀಡಾಂಗಣ ನಿರ್ಮಿಸಿಕೊಡಿ ಎಂದು ಅಲ್ಲಿಯ ಯುವಕರು ವಿನಂತಿಸಿದ್ದರೂ, ಅವರಿಂದ ಅದು ಸಾಧ್ಯವಾಗಿಲ್ಲ. ಯಾವ ಅಭಿವೃದ್ಧಿ ಕೆಲಸಗಳನ್ನೂ ಮಾಡದೆ, ಯುವಕರಿಂದ ಮತ್ತು ರೈತರಿಂದ ಮತ ಯಾಚಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಉಪ ಚುನಾವಣೆಯ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಪರ ಅಲೆ ಇದೆ. ಸ್ಪಷ್ಟ ಬಹುಮತ ಪಡೆದು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಯಾವುದೇ ಭ್ರಷ್ಟಾಚಾರ ನಡೆಸದೆ ನಾವು ಅಭಿವೃದ್ದಿ ಮಾಡಿ ತೋರಿಸಿದ್ದೇವೆ. ಬಿಜೆಪಿಯವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು, ಏನೂ ಮಾಡದೆ ಮೋಸ ಮಾಡಿದ್ದಾರೆ. ನಾವು ಮಧ್ಯವರ್ತಿ ಇಲ್ಲದೆ ಪಂಚಗ್ಯಾರಂಟಿ ಯೋಜನೆ ನೀಡಿ, ನುಡಿದಂತೆ ನಡೆದಿದ್ದೇವೆ. ಹೀಗಾಗಿ ಬಿಜೆಪಿಯವರ ಮಾತಿಗೆ ಮತದಾರರು ಮರುಳಾಗುವುದಿಲ್ಲ’ ಎಂದರು.
‘ಶಿಗ್ಗಾವಿ ಕ್ಷೇತ್ರದ ಜನತೆಗೆ ಪ್ರಗತಿ ಬೇಕಾಗಿದ್ದು, ಕಾಂಗ್ರೆಸ್‌ಗೆ ಬೆಂಬಲ ಸೂಚಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿ ಯಾಸಿರಖಾನ್ ಪಠಾಣ್ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಹಿಟ್ಲರ್ ಆಡಳಿತ’: ‘ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಕೇಂದ್ರ ಸರ್ಕಾರದಿಂದ ಸುತ್ತೋಲೆ ಬಂದಿದೆ ಎಂದು, ಹಿಂದುಳಿದ ವರ್ಗದ ಮಕ್ಕಳ ಶಿಷ್ಯವೇತನ ಬಂದ್ ಮಾಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ದೇಶದಲ್ಲಿ ಅವರದ್ದು ಹಿಟ್ಲರ್ ಶಾಹಿ ಆಡಳಿತ’ ಎಂದು ಸಚಿವ ಖಂಡ್ರೆ ಅಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.