ADVERTISEMENT

ಜೀವನ ಮೌಲ್ಯ ವೃದ್ಧಿಸುವ ಮಾನಸಿಕ ಆರೋಗ್ಯ

ಮಾನಸಿಕ ಸಮಸ್ಯೆ ಗುರುತಿಸಿ ಚಿಕಿತ್ಸೆ ಕೊಡಿಸಿ: ಡಾ. ಆನಂದ ಪಾಂಡುರಂಗಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 6:29 IST
Last Updated 8 ಅಕ್ಟೋಬರ್ 2022, 6:29 IST
ಡಾ.ಆನಂದ ಪಾಂಡುರಂಗಿ
ಡಾ.ಆನಂದ ಪಾಂಡುರಂಗಿ   

ಹುಬ್ಬಳ್ಳಿ: ‘ದೈಹಿಕ ಮತ್ತು ಮಾನಸಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳು. ಮಾನಸಿಕ ಆರೋಗ್ಯ ಕಾಪಾಡಿಕೊಂಡರೆ ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ’ ಎಂದು ಮನೋವೈದ್ಯ ಧಾರವಾಡದ ಡಾ. ಆನಂದ ಪಾಂಡುರಂಗಿ ಅಭಿಪ್ರಾಯಪಟ್ಟರು.

ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಶುಕ್ರವಾರ ‘ಪ್ರಜಾವಾಣಿ’ ಫೇಸ್‌ಬುಕ್ ಸಂವಾದದಲ್ಲಿ ಅವರು ಮಾತನಾಡಿದರು.

‘ದೈಹಿಕ ನ್ಯೂನತೆ ಇದ್ದರೆ ಸಾಮಾನ್ಯರಂತೆಯೇ ಬದುಕಬಹುದು. ಆದರೆ, ಮಾನಸಿಕ ಆರೋಗ್ಯ ಸಮಸ್ಯೆಯಿಂದ ತೊಂದರೆ ಹೆಚ್ಚು ಎಂಬುದನ್ನು ಮರೆಯಬಾರದು. ಮಾನಸಿಕ ಅನಾರೋಗ್ಯವನ್ನು ಆದಷ್ಟು ಬೇಗ ಗುರುತಿಸಿ ಕೂಡಲೇ ಚಿಕಿತ್ಸೆ ಪಡೆದರೆ ಸಮಸ್ಯೆ ನಿವಾರಣೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಹಿಂಜರಿಕೆ ಬೇಡ’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಮಕ್ಕಳಲ್ಲಿ ಮೊಬೈಲ್‌ ಗೀಳು ಸಾಮಾನ್ಯ ಎಂಬಂತಾಗಿದೆ. ಈ ವಿಷಯವನ್ನು ಪೋಷಕರು ಗಂಭೀರವಾಗಿ ಪರಿಗಣಿಸಬೇಕು. ಮಕ್ಕಳಿಗೂ ತಜ್ಞರ ಸಲಹೆ ಮತ್ತು ಆಪ್ತ ಸಮಾಲೋಚನೆ ಅಗತ್ಯ ಎಂಬುದನ್ನು ಮರೆಯಬಾರದು. ತಂದೆ– ತಾಯಿ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಹಾಗೂ ತಾವೂ ಮೊಬೈಲ್‌ ಬಳಕೆ ಕಡಿಮೆ ಮಾಡುವುದು ಗೀಳಿನಿಂದ ಹೊರತರುವ ದೊಡ್ಡ ಸಾಧನ. ಯಾವುದೇ ಕಾರಣಕ್ಕೂ ಚಿಣ್ಣರ ಮೇಲೆ ಒತ್ತಡ ಹೇರದಿರಿ, ಇನ್ನೊಂದು ಮಗುವಿನೊಂದಿಗೆ ಅವರನ್ನು ಹೋಲಿಸಬೇಡಿ. ಹದಿಹರೆಯದವರಿಗೆ ಹೆತ್ತವರ ಮಾರ್ಗದರ್ಶನದ ಅಗತ್ಯವಿರುತ್ತದೆ’ ಎನ್ನುತ್ತಾರೆ ಅವರು.

ತಪ್ಪು ಕಲ್ಪ‍ನೆ ಬೇಡ: ‘ಮಾನಸಿಕ ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಬಗ್ಗೆ ಯಾವುದೇ ತಪ್ಪು ಕಲ್ಪನೆ ಬೇಡ. ವೈದ್ಯರ ಬಳಿ ಹೋದರೆ ನಿದ್ರೆ ಗುಳಿಗೆ ಕೊಡುತ್ತಾರೆ ಎಂಬ ಭಾವನೆ ಹೆಚ್ಚಿನವರಲ್ಲಿದೆ. ರಕ್ತದೊತ್ತಡ ಹಾಗೂ ಮಧುಮೇಹಕ್ಕೂ ವೈದ್ಯರು ಗುಳಿಗೆ ನೀಡುತ್ತಾರೆ. ಆದರೆ, ಅದನ್ನು ಯಾರೂ ಪ್ರಶ್ನಿಸುವುದಿಲ್ಲ’ ಎಂದರು.

ಆರೋಗ್ಯಕರ ಒತ್ತಡ ಅಗತ್ಯ: ‘ಆಧುನಿಕ ಯುಗದಲ್ಲಿ ಒತ್ತಡ ಎಂಬುದು ಸಾಮಾನ್ಯವಾಗಿದೆ. ವ್ಯಕ್ತಿಯೊಬ್ಬನ ಬೆಳವಣಿಗೆಗೆ ಒತ್ತಡ ಎಂಬುದು ಬಹಳ ಮುಖ್ಯ. ಅದೇ ಉತ್ಪಾದಕತೆ ಹಾಗೂ ಸಾಧನೆಯ ಚಾಲಕ ಶಕ್ತಿ. ಈ ಸತ್ಯವನ್ನು ಒಪ್ಪಿಕೊಂಡು ಜೀವನ ಶೈಲಿ ಬದಲಾಯಿಸಿಕೊಳ್ಳಿ’ ಎಂದು ತಿಳಿಸಿದರು.

‘ಎಲೆಕ್ಟ್ರಾನಿಕ್ ಸಾಧನಗಳ (ಗ್ಯಾಜೆಟ್‌) ಗೀಳು ಗಂಭೀರ ಸಮಸ್ಯೆಯಾಗಿದೆ. ವ್ಯಸನ ಮುಕ್ತಿ ಕೇಂದ್ರಗಳ ಹಾಗೆ ಗ್ಯಾಜೆಟ್‌ ವ್ಯಸನ ಮುಕ್ತಿ ಕೇಂದ್ರ ತೆರೆಯಬೇಕಾದ ಅವಶ್ಯಕತೆ ಕಾಣಿಸುತ್ತಿದೆ. ಇವುಗಳನ್ನು ಅಗತ್ಯದಷ್ಟು ಹಾಗೂ ಹಿತಮಿತವಾಗಿ ಬಳಸಿದರೆ ಒಳ್ಳೆಯದು’ ಎನ್ನುತ್ತಾರೆ ಡಾ. ಆನಂದ ಪಾಂಡುರಂಗಿ.

ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅವರ ಜೊತೆ ಪ್ರಜಾವಾಣಿ ಫೇಸ್‌ಬುಕ್‌ ಸಂವಾದವನ್ನು ವೀಕ್ಷಿಸಲು https://fb.watch/f-QLxhH8I7/ ಲಿಂಕ್ ಕ್ಲಿಕ್ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.