ADVERTISEMENT

ಧಾರವಾಡ | ಅರಣ್ಯ, ಫಲ ಕೃಷಿಯಲ್ಲಿ ಯಶ ಕಂಡ ರೈತ: ಇಳಿ ವಯಸ್ಸಿನಲ್ಲೂ ಬತ್ತದ ಉತ್ಸಾಹ

ಯುವಕರಿಗೆ ಮಾದರಿಯಾದ ಹಳ್ಳಿಗೇರಿಯ ರೈತ ಆರ್‌.ಜಿ.ತಿಮ್ಮಾಪುರ

ಕಲಾವತಿ ಬೈಚಬಾಳ
Published 24 ಮೇ 2024, 5:38 IST
Last Updated 24 ಮೇ 2024, 5:38 IST
ಬೂದುಗುಂಬಳ ಫಸಲಿನೊಂದೊಗೆ ಧಾರವಾಡದ ಹಳ್ಳಿಗೇರಿಯ ರೈತ ಆರ್‌.ಜಿ.ತಿಮ್ಮಾಪುರ
ಬೂದುಗುಂಬಳ ಫಸಲಿನೊಂದೊಗೆ ಧಾರವಾಡದ ಹಳ್ಳಿಗೇರಿಯ ರೈತ ಆರ್‌.ಜಿ.ತಿಮ್ಮಾಪುರ   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯು ಪಶ್ಚಿಮಘಟ್ಟದ ಕಾಡು ಮತ್ತು ಅರೆ ಬಯಲುಸೀಮೆಯಿಂದ ಕೂಡಿದ ಪ್ರದೇಶ. ಈ ವಾತಾವರಣವನ್ನು ಸದ್ಬಳಕೆ ಮಾಡಿಕೊಳ್ಳುವ ಕಾರ್ಯದಲ್ಲಿ  ಧಾರವಾಡದ ಹಳ್ಳಿಗೇರಿಯ ನಿವೃತ್ತ ಶಿಕ್ಷಕ ಹಾಗೂ ರೈತ ಆರ್‌.ಜಿ.ತಿಮ್ಮಾಪುರ ಕಾರ್ಯನಿರತರಾಗಿದ್ದಾರೆ.

ಅರಣ್ಯ ಪ್ರದೇಶದ ವಿಸ್ತರಣೆ ಪ್ರಮಾಣ ಕಡಿಮೆಯಾಗುತ್ತಿದ್ದು, ಶೇ 21ರಿಂದ ಶೇ 8.8ಕ್ಕೆ ಕುಸಿದಿದೆ. ಇಂತಹ ಹೊತ್ತಲ್ಲಿ ಮರಗಳನ್ನು ಬೆಳೆಸುವತ್ತ ಒಲವು ಹೆಚ್ಚಿಸಿಕೊಂಡ ಅವರು 5 ಎಕರೆ ಜಮೀನಿನಲ್ಲಿ 1200 ಮರ, ಗಿಡಗಳನ್ನು ಬೆಳೆಸಿದ್ದಾರೆ.

ಶ್ರೀಗಂಧ 200, ಮಾವು (ಅಪ್ಪೆಮಿಡಿ, ಬಾಂಗಂಪಲ್ಲಿ, ಬಾದಾಮಿ, ಆಪೂಸ್‌ ಇತ್ಯಾದಿ) 160, ಗೋಡಂಬಿ 120, ನೇರಳೆ 50, ಜಂಬುನೇರಳೆ 50, ಬೆಟ್ಟದನೆಲ್ಲಿಕಾಯಿ 40, ಹುಣಸೆ (ಕೆಂಪು, ಸಿಹಿ, ಹುಳಿ) 40, ಹಲಸು (ರುದ್ರಾಕ್ಷಿ, ಸಿದ್ದು, ಅಂಟು ರಹಿತ) 30, ಬೇಲದಹಣ್ಣಿನ ಮರ 25, ನಿಂಬೆ, ಕಂಚಿಕಾಯಿ 20, ಬಕುಳಪುಷ್ಪ 10 ಗಿಡಗಳು, ಅಂಟವಾಳ, ದಾಲ್ಚಿನಿ, ಕಿತ್ತಳೆ, ಸೇಬು ತಲಾ ಹತ್ತು, ಕೋಕಂ, ವಾಟೆಹುಳಿ, ಸಣ್ಣನೆಲ್ಲಿ ತಲಾ ಎರಡು, ಸೀತಾ ಅಶೋಕ ಗಿಡ, ಕದಂಬ ತಲಾ ಒಂದು ಮರ, ಕರಿಮೆಣಸು, ಏಲಕ್ಕಿ, ಬೂದುಗುಂಬಳ ಸೇರಿ ಹಲವು ಬಗೆಯ ಮರ, ಬಳ್ಳಿಗಳನ್ನು ಬೆಳೆಸಿದ್ದಾರೆ. 

ADVERTISEMENT

ಔಷಧೀಯ ಗುಣ ಯಥೇಚ್ಛವಾಗಿರುವ ಅರುಣಾಚಲ ಪ್ರದೇಶದ ‘ಲಕ್‌ಡಾಂಗ್‌’ ತಳಿಯ ಅರಿಸಿನ ಮತ್ತು ಕಪ್ಪು ಅರಿಸಿನ ಬೆಳೆಯುತ್ತಾರೆ. ಮನೆಗೆ ಆಗುವಷ್ಟು ರಾಗಿ, ಊದಲು, ಭತ್ತ ಸಹ ಬೆಳೆಯುತ್ತಿದ್ದು, ಬೀಜ ಸಂರಕ್ಷಣೆ ಜೊತೆಗೆ ಸ್ವಾವಲಂಬನೆ ಸಾಧಿಸಿದ್ದಾರೆ. 

‘ಸಾಮಾನ್ಯ ಅರಿಸಿನ ಪುಡಿ ಕೆಜಿಗೆ ₹200 ರಂತೆ ಸಿಗುತ್ತದೆ. ಆದರೆ, ಲಕ್‌ಡಾಂಗ್‌ ತಳಿಯ ಅರಿಸಿನಕ್ಕೆ ಕೆಜಿಗೆ ₹800 ದರವಿದೆ. ವರ್ಷಕ್ಕೆ 40 ಕೆಜಿ ಅರಿಸಿನ ಪುಡಿ ಉತ್ಪಾದನೆ ಮಾಡುತ್ತಿರುವೆ. ಐದಾರು ಕೆಜಿ ಕಪ್ಪು ಅರಿಸಿನವನ್ನೂ ಬೆಳೆಯುತ್ತಿರುವೆ’ ಎಂದು ರೈತ ಆರ್‌.ಜಿ.ತಿಮ್ಮಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ತೋಟದ ಕೆಲಸಕ್ಕೆಂದೆ ಐದಾರು ಜನರಿದ್ದಾರೆ. ಸುಬಾಬುಲ್‌, ಹೊಂಗೆ ಇತ್ಯಾದಿ ಮರಗಳ ಟೊಂಗೆಗಳನ್ನೇ ಕಡಿದು ನೀರಿನ ಕಾಲುವೆಗಳಲ್ಲಿ ಹಾಕುತ್ತೇವೆ. ರೋಗ, ಹಳೆ ನಿರ್ವಹಣೆಗೆ ರಾಸಾಯನಿಕ ಬಳಕೆ ಮಾಡದೆ ಸಾಂಪ್ರದಾಯಿಕ ಪದ್ಧತಿ ಅನುಸರಿಸುತ್ತಿರುವೆ. ಹೀಗಾಗಿ ಇಲ್ಲಿನ ಮಣ್ಣಿನಲ್ಲಿ ಎರೆಹುಳುಗಳು ಯಥೇಚ್ಛವಾಗಿವೆ’ ಎಂದೂ ಹೇಳಿದರು.

ಭರ್ಜರಿ ಆದಾಯ ತಂದ ಮಾವು: ಮಾವಿನ ಸೀಜನ್‌ನಲ್ಲಿ ಮಾವು ಇಳುವರಿ ಕಡಿಮೆ ಇದ್ದರೂ ಬೆಲೆ ಉತ್ತಮವಾಗಿತ್ತು. ಬೆಂಗಳೂರಿಗೆ ಕೆ.ಜಿಗೆ ₹650 ರಂತೆ ರಫ್ತು ಮಾಡಿದ್ದೆ’ ಎಂದು ಸಂತಸ ಹಂಚಿಕೊಂಡರು.  

ಸುವರ್ಣಗಡ್ಡೆಯೊಂದಿಗೆ ಹಳ್ಳಿಗೇರಿಯ ರೈತ ಆರ್‌.ಜಿ.ತಿಮ್ಮಾಪುರ
ಮಾವು ಫಸಲಿನೊಂದಿಗೆ ಹಳ್ಳಿಗೇರಿಯ ರೈತ ಆರ್‌.ಜಿ.ತಿಮ್ಮಾಪುರ

ಮಳೆ ನೀರು ಕೊಯ್ಲಿಗೆ ಒತ್ತು

‘2 ದಶಕಗಳ ಹಿಂದೆಲ್ಲ ವರ್ಷದ ನಾಲ್ಕು ತಿಂಗಳೂ ಬೀಳುತ್ತಿದ್ದ ಮಳೆ ಇತ್ತೀಚಿನ ವರ್ಷಗಳಲ್ಲಿ 21 ದಿನಗಳಿಗೆ ಸೀಮಿತವಾಗುತ್ತಿದೆ. 28 ರಿಂದ 32 ಡಿಗ್ರಿಯಷ್ಟಿದ್ದ ಉಷ್ಣಾಂಶ 39ರಿಂದ 42 ಡಿಗ್ರಿಗೆ ಏರಿದೆ ಎಂದು ತಜ್ಞರು ಹೇಳುತ್ತಾರೆ. ಇದನ್ನರಿತೇ 8 ವರ್ಷಗಳ ಹಿಂದೆ ಮಳೆ ನೀರಿನ ಕೊಯ್ಲು ಮಾಡಿಕೊಳ್ಳಲು ಮುಂದಾದೆ’ ಎಂದು ಎಪ್ಪತ್ಮೂರು ವರ್ಷದ ರೈತ ಆರ್‌.ಜಿ.ತಿಮ್ಮಾಪುರ ತಿಳಿಸಿದರು.

‘ನಮ್ಮ ಜಮೀನು ಇಳಿಜಾರು ಪ್ರದೇಶದಲ್ಲಿರುವುದರಿಂದ ಮಳೆ ನೀರಿನ ಕೊಯ್ಲು ಮಾಡಿಕೊಳ್ಳಲು ಹೆಚ್ಚು ಅನುಕೂಲವಾಯಿತು. ತಜ್ಞರ ಸಲಹೆ ಮೇರೆಗೆ ಭೂಮಿಯ ಮೇಲ್ಮೈಗನುಗುಣವಾಗಿ ನೀರು ನಿಲ್ಲುವಂತೆ ಕಾಲುವೆ ಒಡ್ಡುಗಳನ್ನು ನಿರ್ಮಿಸಿಕೊಂಡೆ. ಸುಮ್ಮನೇ ಹರಿದು ಹೋಗುವ ಮಳೆ ನೀರನ್ನು ಹೀಗೆ ನಿಲ್ಲುವಂತೆ ಮಾಡಿ ಅಲ್ಲಿಯೇ ಇಂಗಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ವಾತಾವರಣವೂ ತಂಪಾಗಿರುತ್ತದೆ. ಈ ಕಾರ್ಯಕ್ಕಾಗಿ ಅಂದಾಜು ₹40000 ಖರ್ಚು ಮಾಡಿದ್ದೆ’ ಎಂದು ವಿವರಿಸಿದರು. 

‘ಅಲ್ಲದೇ 180 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದ್ದು 5 ಇಂಚು ನೀರು ಸಿಕ್ಕಿದೆ. ಕೃಷಿ ಇಲಾಖೆ ನೆರವಿನಿಂದ 1 ಲಕ್ಷಕ್ಕೂ ಅಧಿಕ ಸಂಗ್ರಹ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿಕೊಂಡಿರುವೆ’ ಎಂದರು.

ಹಣಕ್ಕಾಗಿ ಕೃಷಿ ಮಾಡದೇ ಉತ್ತಮ ಆಹಾರ ಸ್ವಾವಲಂಬನೆಗಾಗಿ ಕೃಷಿ ಮಾಡುವುದು ಇಂದಿನ ಅಗತ್ಯ. ಬೀಜ ಸಂರಕ್ಷಣೆ ಜೊತೆಗೆ ಸಾವಯವ ಕೃಷಿ ಮಾಡಿ.
-ಆರ್‌.ಜಿ.ತಿಮ್ಮಾಪುರ, ರೈತ ಹಳ್ಳಿಗೇರಿ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.