ADVERTISEMENT

ಬಿತ್ತನೆಗೆ ರೈತರಿಂದ ಕೃಷಿ ಜಮೀನು ಸಿದ್ಧತೆ: ಬೀಜ, ರಸಗೊಬ್ಬರ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 28 ಮೇ 2024, 6:05 IST
Last Updated 28 ಮೇ 2024, 6:05 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಉಪ್ಪಿನಬೆಟಗೇರಿ: ಕಳೆದೆರಡು ವಾರಗಳಿಂದ ಉತ್ತಮ ಮಳೆಯಾಗುತ್ತಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳಿಗೆ ಭರದಿಂದ ಸಿದ್ಧತೆ ನಡೆದಿದೆ.

ಬಿತ್ತನೆಗೆ ಈಗಾಗಲೇ ಕೃಷಿ ಜಮೀನು ಸಜ್ಜುಗೊಳಿಸಿರುವ ರೈತರು, ಮತ್ತೊಂದು ಮಳೆಗೆ ಕಾದು ಕುಳಿತಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘ, ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

‘ಅಮ್ಮಿನಬಾವಿ ಹೋಬಳಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಗೆ 25 ಗ್ರಾಮಗಳು ಬರುತ್ತವೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 26 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು, ಉದ್ದು, ಸೋಯಾಬೀನ್ ಮೊದಲಾದ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ ಕೆಲವೆಡೆ ಬಿತ್ತನೆ ಆರಂಭವಾಗಿದೆ. ತೇವಾಂಶ ಪರೀಕ್ಷಿಸಿ ಬಿತ್ತನೆ ಮಾಡಬೇಕು’ ಎಂದು ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರೇಖಾ ಬೆಳ್ಳಟ್ಟಿ ಸಲಹೆ ನೀಡಿದ್ದಾರೆ.

‘ಗರಗ ಹೋಬಳಿಯ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ 37 ಗ್ರಾಮಗಳಲ್ಲಿ ಮುಂಗಾರು ಹಂಗಾಮಿನಲ್ಲಿ 17,735 ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾಬೀನ್, ಹೆಸರು, ಉದ್ದು ಇನ್ನಿತರ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ’ ಎಂದು ಗರಗ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹಾದೇವ ಸುರಶೆಟ್ಟಿ ತಿಳಿಸಿದ್ದಾರೆ.

ಬಹುತೇಕ ಕಡೆ ರಸಗೊಬ್ಬರ ಸರಿಯಾಗಿ ಪೂರೈಕೆಯಾಗಿಲ್ಲ. ಕೆಲವೆಡೆ ಪೂರೈಕೆಯಾಗಿದ್ದರೂ ದರದಲ್ಲಿ ಈ ಬಾರಿ ಹೆಚ್ಚಳವಾಗಿದ್ದರಿಂದ ರಸಗೊಬ್ಬರು ಖರೀದಿಗೆ ರೈತರು ಚೌಕಾಸಿ ಮಾಡುತ್ತಿದ್ದಾರೆ.

‘ಉಪ್ಪಿನಬೆಟಗೇರಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಸಗೊಬ್ಬರ ದಾಸ್ತಾನು ಇಲ್ಲ. ಅನಿವಾರ್ಯವಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ದಲ್ಲಿ ರಸಗೊಬ್ಬರ ಖರೀದಿಸಿ ಬಾಡಿಗೆ ವಾಹನದಲ್ಲಿ ತರುವ ಸ್ಥಿತಿ ನಿರ್ಮಾಣ ವಾಗಿದೆ’ ಎನ್ನುತ್ತಾರೆ ಹನುಮನಾಳ ಗ್ರಾಮದ ರೈತ ಬಾಬುಸಾಬ ಶಾನವಾಡ.

‘ಡಿಎಪಿ ರಸಗೊಬ್ಬರವನ್ನು ನೇರವಾಗಿ ಖರೀದಿಸಿ ಕೃಷಿ ಪತ್ತಿನ ಸಹಕಾರ ಸಂಘದಿಂದ 50 ಕೆ.ಜಿ. ಪೊಟ್ಟಣವೊಂದಕ್ಕೆ ₹1,350ರಂತೆ ರೈತರಿಗೆ ವಿತರಿಸಲಾಗುತ್ತಿದೆ. ಈಗ ಗೂಡ್ಸ್ ತೆರಿಗೆ ಭರಿಸಿ ಮಾರುಕಟ್ಟೆಯಿಂದ ಗೊಬ್ಬರ ಖರೀದಿಸಬೇಕಾಗಿದ್ದು, ದರದಲ್ಲಿ ₹20 ಹೆಚ್ಚಳವಾಗಿದೆ. ರೈತರು ಮೊದಲಿನ ದರದಲ್ಲಿ ತಂದು ರಸಗೊಬ್ಬರ ವಿತರಿಸಿ ಎಂದು ಆಗ್ರಹಿಸುತ್ತಿದ್ದಾರೆ’ ಎಂದು ಉಪ್ಪಿನಬೆಟಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ ಮಾಹಿತಿ ನೀಡಿದರು.

‘ತೇವಾಂಶ ಗಮನಿಸಿ ಬಿತ್ತನೆ ಮಾಡಿ’

ರೈತರು ಬಿತ್ತನೆ ಬೀಜಗಳ ಬೀಜೋಪಚಾರ ಮಾಡಿ ಮತ್ತು ಕೃಷಿ ಭೂಮಿಯ ತೇವಾಂಶ ನೋಡಿ ಬಿತ್ತನೆ ಮಾಡಬೇಕು. ಉಪ್ಪಿನಬೆಟಗೇರಿಯ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಹೆಸರು, ಉದ್ದು, ತೊಗರಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಆಧಾರ್ ಕಾರ್ಡ್ ಇರುವ ರೈತರಿಗೆ ಬೀಜ ವಿತರಿಸಲಾಗುತ್ತಿದೆ. ಸದ್ಯ ಬಿತ್ತನೆ ಬೀಜಗಳ ಕೊರತೆ ಇಲ್ಲ. ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರಗಳ ಬಳಕೆ ಮಾಡಬಹುದು’ ಎಂದು ಅಮ್ಮಿನಬಾವಿ ಸಹಾಯಕ ಕೃಷಿ ಅಧಿಕಾರಿ ಎಚ್.ಎಂ.ಬದಾಮಿ ಸಲಹೆ ನೀಡಿದ್ದಾರೆ.

ಬೇಸಿಗೆಯ ಅಡ್ಡ ಮಳೆ, ಮುಂಗಾರು ಮಳೆ ಸರಿಯಾಗಿಲ್ಲ. ಬಿತ್ತನೆಗಾಗಿ ಮತ್ತೊಂದು ಮಳೆಯ ನಿರೀಕ್ಷೆಯಲ್ಲಿದ್ದೇವೆ. ರಸಗೊಬ್ಬರ, ಬಿತ್ತನೆ ಬೀಜದ ದರದಲ್ಲಿ ಹೆಚ್ಚಳವಾಗಿದ್ದು, ಸಾಕಷ್ಟು ಖರ್ಚು ಮಾಡಿ ಖರೀದಿಸಿದ್ದೇವೆ
ರವೀಂದ್ರ ಅಷ್ಟೇಕರ ಉಪ್ಪಿನಬೆಟಗೇರಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.