ಅಳ್ನಾವರ: ‘ಸಾಹಿತ್ಯ, ವಚನ ಕ್ಷೇತ್ರದ ಜೊತೆಗೆ ಪತ್ರಿಕಾ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದ್ದ ಫ.ಗು. ಹಳಕಟ್ಟಿ ಅವರ ಬದುಕು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು’ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಹೇಳಿದರು.
ಇಲ್ಲಿನ ತಾಲ್ಲೂಕು ಆಡಳಿತ ವತಿಯಿಂದ ಮಂಗಳವಾರ ನಡೆದ ಫ.ಗು.ಹಳಕಟ್ಟಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹಳಕಟ್ಟಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿ, ‘ಸಮಾಜಕ್ಕಾಗಿ ಶ್ರಮಿಸಿದ ಅನೇಕ ಮಹನೀಯರ ಪೈಕಿ ಹಳಕಟ್ಟಿಯವರ ಸೇವೆ ಅನನ್ಯ, ಅವರು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ವಿಶಿಷ್ಟ’ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜ ಸಬನೀಸ್, ‘ಹಳಕಟ್ಟಿ ಅವರು ಕರ್ನಾಟಕ ಏಕೀಕರಣದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಹತ್ತೊಂಬತ್ತನೇ ಶತಮಾನದ ಪ್ರಾರಂಭದಲ್ಲಿಯೇ ಎರಡು ಪತ್ರಿಕೆಗಳನ್ನು ಪ್ರಾರಂಭಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಪತ್ರಿಕಾ ಮಾಧ್ಯಮದ
ಮೂಲಕ ಜನರ ಸಾಮಾಜಿಕ ಜವಾಬ್ದಾರಿಗಳನ್ನು ತಿಳಿಸಿ ಕನ್ನಡ ನೆಲ, ಭಾಷೆ ಉಳಿವಿಗೆ ಶ್ರಮಿಸಿದ್ದರು’ ಎಂದರು.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ನಾಗರಾಜ ಗುರ್ಲಹೊಸುರ, ಕಸಾಪ ಕೋಶಾಧ್ಯಕ್ಷ ಪ್ರವೀಣ ಪವಾರ, ಪಟ್ಟಣ ಪಂಚಾಯ್ತಿ ಸದಸ್ಯ ತಮೀಮಅಹ್ಮದ ತೇರಗಾಂವ, ರಮೇಶ ಕುನ್ನೂರಕರ, ಜೈಲಾನಿ ಸುದರ್ಜಿ, ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಮೂಲ ಗುಂಜೀಕರ, ಸುರೇಶ ಜಗಾಪೂರ, ಎಂ.ಎಸ್. ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.