ADVERTISEMENT

ಕನಿಷ್ಠ ಸೌಲಭ್ಯ; ಗರಿಷ್ಠ ಫಲಿತಾಂಶ, ಮೆಚ್ಚುಗೆಗೆ ಪಾತ್ರವಾದ ರಕ್ಷಣಾ ತಂಡ

ಕೈಗವಸೂ ಇಲ್ಲದೇ ಕಾರ್ಯಾಚರಣೆ

ಇ.ಎಸ್.ಸುಧೀಂದ್ರ ಪ್ರಸಾದ್
Published 23 ಮಾರ್ಚ್ 2019, 20:24 IST
Last Updated 23 ಮಾರ್ಚ್ 2019, 20:24 IST
ಮೃತದೇಹ ಹೊರಕ್ಕೆ ತೆಗೆಯಲು ಕೈಗವಸು ಇಲ್ಲದೆ ಕೈಗೆ ಬಟ್ಟೆ ಚೀಲ ಹಾಕಿಕೊಂಡು ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದ–ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಮೃತದೇಹ ಹೊರಕ್ಕೆ ತೆಗೆಯಲು ಕೈಗವಸು ಇಲ್ಲದೆ ಕೈಗೆ ಬಟ್ಟೆ ಚೀಲ ಹಾಕಿಕೊಂಡು ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದ–ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ   

ಧಾರವಾಡ: ತಮಗಿರುವ ಕನಿಷ್ಠ ಸೌಲಭ್ಯದಲ್ಲೇ, ಇಲ್ಲಿನ ಕುಸಿದ ಕಟ್ಟಡದ ಅವಶೇಷದಡಿ ಸಿಲುಕಿದ್ದ 53 ಜನರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಯಶಸ್ವಿಯಾಗಿರುವ ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆಯೇ ಬಂದ 45 ಜನರ ತಂಡ, ಸ್ಥಳೀಯ ತಂಡದೊಂದಿಗೆ ರಕ್ಷಣಾ ಕಾರ್ಯಕ್ಕೆ ಮುಂದಾಯಿತು. ಮೊದಲ ದಿನವೇ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 27 ಜನರನ್ನು ಹೊರತಂದಿತು. ನಂತರದ ದಿನಗಳಲ್ಲಿ 26 ಜನರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿತು.

ಆದರೆ, ವಿಪತ್ತು ನಿರ್ವಹಣೆಗೆ ತೀರಾ ಅಗತ್ಯ ಇರುವ ಸೌಲಭ್ಯಗಳು ಕೂಡ ಈ ತಂಡಕ್ಕೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ನಾಲ್ಕನೇ ದಿನದ ಕಾರ್ಯಾಚರಣೆ ವೇಳೆ, ಮೃತದೇಹವನ್ನು ಹೊರಕ್ಕೆ ತೆಗೆಯಲು ಸೂಕ್ತ ಕೈಗವಸು ಇಲ್ಲದೇ, ಈ ತಂಡ ಕೈಗೆ ಬಟ್ಟೆಯ ಕೈಚೀಲಗಳನ್ನು ಹಾಕಿಕೊಂಡಿದ್ದು ಇಲಾಖೆಯ ಪರಿಸ್ಥಿತಿಯನ್ನು ಸಾರುವಂತಿತ್ತು.

ADVERTISEMENT

ಕನಿಷ್ಠ ಅವಧಿ ವಿಶ್ರಾಂತಿ ಪಡೆಯುತ್ತಿರುವ ಈ ಸಿಬ್ಬಂದಿ, ಅಲ್ಲೇ ಇರುವ ಅಗ್ನಿಶಾಮಕ ವಾಹನದ ಒಳಗೆ ಅಥವಾ ಸಮೀಪದಲ್ಲೇ ರಟ್ಟಿನ ತುಂಡುಗಳನ್ನು ಹಾಕಿಕೊಂಡು ಮಲಗುತ್ತಿದ್ದಾರೆ. ಕಾಂಕ್ರೀಟ್ ಹಾಸಿನಲ್ಲಿ 15ರಿಂದ 20 ಅಡಿವರೆಗಿನ ಆಳ ಮತ್ತು ಅಷ್ಟೇ ಉದ್ದದ ಕಂದರದಲ್ಲಿ ಹೆಲ್ಮೆಟ್ ಒಂದನ್ನೇ ಧರಿಸಿ ಒಳನುಗ್ಗಿ ಹಲವರನ್ನು ರಕ್ಷಿಸಿದ ಈ ತಂಡ ಒಂದು ಹಂತದಲ್ಲಿ ಅವಮಾನವನ್ನೂ ಅನುಭವಿಸಿತ್ತು.

ಮಂಗಳವಾರ ರಾತ್ರಿ 2 ತಂಡಗಳಲ್ಲಿ ಬಂದಿಳಿದ, ಕೇಂದ್ರ ವಿಪತ್ತು ನಿರ್ವಹಣಾ ಘಟಕದ 110 ಸದಸ್ಯರಿಗೆ ಕಾರ್ಯಾಚರಣೆಯ ಜವಾಬ್ದಾರಿ ವಹಿಸಿ, ‘ನೀವು ಸುಮ್ಮನಿದ್ದುಬಿಡಿ’ ಎಂದು ಜಿಲ್ಲಾಡಳಿತ ಹೇಳಿದಾಗ, ‘ನಮಗೂ ಅವಕಾಶ ನೀಡಿ. ನಾವೇನು ಇಲ್ಲಿ ಸುಮ್ಮನೆ ಕೂರಲು ಬಂದಿಲ್ಲ’ ಎಂದು ಬೇಸರದಿಂದಲೇ ಈ ಸಿಬ್ಬಂದಿ ಹೇಳಿದ್ದರು. ನಂತರ, ಸಿಕ್ಕ ಅವಕಾಶವನ್ನು ಸವಾಲಾಗಿ ಸ್ವೀಕರಿಸಿದ ಇವರು ಜೀವದ ಹಂಗನ್ನೂ ತೊರೆದು ಸತತ 100 ಗಂಟೆಗಳಿಂದ ಅವಿರತ ಶ್ರಮ‌ ಹಾಕಿದ್ದಾರೆ.

ಆದರೆ ಮತ್ತೊಂದೆಡೆ, ವಿಶೇಷ ವಿಮಾನದಲ್ಲಿ ಬಂದಿಳಿದ ಕೇಂದ್ರ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಗೆ ಟಾರ್ಚ್‌ ಇರುವ, ಕಿವಿ ಮತ್ತು ತಲೆಗೆ ರಕ್ಷಣೆ ಒದಗಿಸುವ ಹೆಲ್ಮೆಟ್‌, ಅಗ್ನಿ ನಿರೋಧಕ ಉಡುಪು, ಮಂಡಿ ಚಿಪ್ಪಿಗೆ ರಬ್ಬರ್‌ ಕ್ಯಾಪ್‌ಗಳು, ವಿಶೇಷ ಶೂಗಳು, ವಾಕಿಟಾಕಿ ನೀಡಲಾಗಿತ್ತು. ಇದರೊಂದಿಗೆ ಶ್ವಾನ ದಳಕ್ಕೂಹಲವು ಸೌಲಭ್ಯ ನೀಡಲಾಗಿತ್ತು. ಈ ತಂಡಕ್ಕೆ ಕೃಷಿ ವಿಶ್ವವಿದ್ಯಾಲಯದಲ್ಲಿ ಉಳಿದುಕೊಳ್ಳಲು ವಿಶೇಷ ವ್ಯವಸ್ಥೆ, ಊಟೋಪಚಾರ, ಬಂದು ಹೋಗಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ತಂಡ ಶನಿವಾರದವರೆಗೂ ಮೂವರನ್ನು ಸುರಕ್ಷಿತವಾಗಿ ಹೊರತೆಗೆದಿದೆ.

* ಸಿಬ್ಬಂದಿಗೆ ಸೌಲಭ್ಯ ಒದಗಿಸಲು ₹20 ಕೋಟಿ ಪ್ರಸ್ತಾವ ಸಲ್ಲಿಸಲಾಗಿತ್ತು. ಬಜೆಟ್‌ನಲ್ಲಿ ₹10 ಕೋಟಿ ಮೀಸಲಿಡಲಾಗಿದೆ. ಶೀಘ್ರದಲ್ಲಿ ಸಲಕರಣೆ ವಿತರಿಸಲಾಗುವುದು.

-ಸುನೀಲ್ ಅಗರವಾಲ, ಎಡಿಜಿಪಿ, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ

* ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಈವರೆಗೂ 53 ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದಿದ್ದಾರೆ. ಅವರ ಛಲ ನಿಜಕ್ಕೂ ಮೆಚ್ಚುವಂತಹದ್ದು

-ರವಿಕಾಂತೇಗೌಡ, ಡಿಐಜಿ, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.