ADVERTISEMENT

ಐದು ಎಎಸ್‌ಐಗಳಿಗೆ ಪಿಎಸ್‌ಐ ಬಡ್ತಿ; ಸ್ಥಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 16:17 IST
Last Updated 24 ಜುಲೈ 2024, 16:17 IST

ಹುಬ್ಬಳ್ಳಿ: ಸೇವಾ ಹಿರಿತನದ ಮೇಲೆ ಒಂದೂವರೆ ವರ್ಷದಿಂದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಬಡ್ತಿ ಕನಸು ಕಂಡಿದ್ದ ನಿವೃತ್ತಿ ಅಂಚಿನಲ್ಲಿರುವ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ಗಳ (ಎಎಸ್‌ಐ)  ಕನಸು ಇದೀಗ ನನಸಾಗಿದೆ.

ನಗರ ಪೊಲೀಸ್‌ ಕಮಿಷನರ್‌ ಘಟಕದಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗೋಕುಲ ಠಾಣೆಯ ಎ.ಎಂ. ಪಠಾಣ, ಕಸಬಾ ಠಾಣೆಯ ಎಸ್‌.ಎಂ. ನಾಯಕ, ವಿದ್ಯಾಗಿರಿ ಠಾಣೆಯ ಎ.ಕೆ. ಚಲವಾದಿ, ಕೇಶ್ವಾಪುರ ಠಾಣೆಯ ಜೆ.ಎಸ್‌. ಚಲವಾದಿ ಮತ್ತು ಅಶೋಕನಗರ ಠಾಣೆಯ ಎಸ್‌.ಎಂ. ಮನಿಯಾರ್‌ ಅವರಿಗೆ ನಿಯಮ 2004ರ ಅಡಿ, ಕಮಿಷನರ್‌ ಎನ್‌. ಶಶಿಕುಮಾರ್‌ ಅವರು ಪಿಎಸ್‌ಐ ಹುದ್ದೆಗೆ ಬಡ್ತಿ ನೀಡಿ ಸ್ಥಳ ನಿಯೋಜನೆ ಮಾಡಿದ್ದಾರೆ.

ಎಎಸ್‌ಐ ಹುದ್ದೆಯಲ್ಲಿ ಐದು ವರ್ಷ ಕರ್ತವ್ಯ ಪೂರ್ಣಗೊಳಿಸಿದ್ದು, ಪಿಎಸ್‌ಐ ಹುದ್ದೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಬಡ್ತಿ ನೀಡಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನಮೂದಿಸಿದ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ADVERTISEMENT

ಜ್ಯೇಷ್ಠತಾ ಪಟ್ಟಿಯಲ್ಲಿ ಅರ್ಹರಿದ್ದ ಒಬ್ಬ ಎಎಸ್‌ಐ ಇಲಾಖೆಯ ಶಿಸ್ತು ಕ್ರಮದಲ್ಲಿದ್ದಾರೆ. ಇಬ್ಬರು ಇಲಾಖಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಮತ್ತೊಬ್ಬರು ಬಡ್ತಿ ನಿರಾಕರಿಸಿ ಮನವಿ ಸಲ್ಲಿಸಿದ್ದಾರೆ. ಬಡ್ತಿ ತಾತ್ಕಾಲಿಕವಾಗಿದ್ದು, ನ್ಯಾಯಾಲಯದ ಆದೇಶದ ಮೇಲೆ ಮುನ್ಸೂಚನೆ ಇಲ್ಲದೆ ಹಿಂಬಡ್ತಿ ನೀಡುವ ನಿಬಂಧನೆಗೆ ಒಳಪಟ್ಟಿದೆ ಎಂದು ಸೂಚಿಸಲಾಗಿದೆ.

ಎಸ್ಪಿ ದರ್ಜೆಗೆ ಇಳಿಸಲಾಗಿತ್ತು: ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಹುದ್ದೆಗೆ ಐಜಿಪಿ–ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ಆದರೆ, 2023ರ ಆಗಸ್ಟ್‌ನಲ್ಲಿ 2011ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ, ಎಸ್‌ಪಿ ಶ್ರೇಣಿಯ ರೇಣುಕಾ ಸುಕುಮಾರ್ ಅವರನ್ನು ಪೊಲೀಸ್‌ ಕಮಿಷನರ್‌ ಆಗಿ ಸರ್ಕಾರ ವರ್ಗಾವಣೆ ಮಾಡಿತ್ತು. ಕರ್ನಾಟಕ ಪೋಲಿಸ್‌ ಕಾಯ್ದೆ–1963ರ ಪ್ರಕಾರ ನೇಮಕಾತಿ ಹೊಂದುವ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಕೆಳಗಿನ ವೃಂದದ ಅಧಿಕಾರಿಗಳಿಗೆ ಆಯಾ ವ್ಯಾಪ್ತಿಯ ಮುಖ್ಯಸ್ಥರು ನೇಮಕಾತಿ ಆದೇಶ ನೀಡುವ ಅಧಿಕಾರ ಹೊಂದಿರುತ್ತಾರೆ. ಅಲ್ಲದೆ, ನೇಮಕಾತಿ ಆದೇಶ ನೀಡುವ ಮುಖ್ಯಸ್ಥರು ಎಡಿಜಿಪಿ ಅಥವಾ ಐಜಿಪಿ ಶ್ರೇಣಿಯ ಅಧಿಕಾರಿಗಳಾಗಿರಬೇಕು. ಆದರೆ, ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರ್‌ ಹುದ್ದೆಯಲ್ಲಿದ್ದ ರೇಣುಕಾ ಅವರು ಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿರುವ ಕಾರಣ ನಿಯಮದಂತೆ ನೇಮಕಾತಿ ಆದೇಶ ನೀಡುವ ಅಧಿಕಾರ ಹೊಂದಿರಲಿಲ್ಲ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಕಮಿಷನರೇಟ್‌ ಹೊರತು ಪಡಿಸಿ, ಉಳಿದ ನಾಲ್ಕು ಕಮಿಷನರೇಟ್‌ನಲ್ಲಿನ ಎಸ್‌ಐಗಳಿಗೆ ಒಂದೂವರೆ ವರ್ಷದ ಹಿಂದೆಯೇ, ಅಲ್ಲಿಯ ಎಡಿಜಿಪಿ ದರ್ಜೆಯ ಕಮಿಷನರ್‌ ಪಿಎಸ್‌ಐ ಬಡ್ತಿ ಆದೇಶ ನೀಡಿದ್ದರು. ಆಡಳಿತಾತ್ಮಕ ಸಮಸ್ಯೆ ಪರಿಹರಿಸುವಂತೆ ನಿವೃತ್ತಿ ಅಂಚಿನಲ್ಲಿದ್ದ ಇಲ್ಲಿಯ ಎಎಸ್‌ಐಗಳು ಬೆಂಗಳೂರಿಗೂ ತೆರಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅವರಲ್ಲಿ ಇಬ್ಬರು ನಿವೃತ್ತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.