ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ, ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಮೇಳದಲ್ಲಿ ಒಂದು ಎಕರೆಗಿಂತ ಹೆಚ್ಚು ವಿಶಾಲವಾಗಿರುವ ಕೈಗಾರಿಕಾ ವಲಯದ ಉದ್ಯಾನ ಸ್ಪರ್ಧೆಯಲ್ಲಿ ಧಾರವಾಡದ ಬೇಲೂರು ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ‘ಪ್ರಜಾವಾಣಿ’ ಮುದ್ರಣ ಘಟಕದ ಉದ್ಯಾನಕ್ಕೆ ಪ್ರಥಮ ಬಹುಮಾನ ದೊರಕಿದೆ.
ಸೋಮವಾರ ಇಂದಿರಾ ಗಾಜಿನಮನೆ ಉದ್ಯಾನದಲ್ಲಿ ನಡೆದ ಫಲಪುಷ್ಪ ಪ್ರದರ್ಶನದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ‘ಪ್ರಜಾವಾಣಿ’ ಮುದ್ರಣಾಲಯ ಘಟಕದ ವ್ಯವಸ್ಥಾಪಕ ಪ್ರಲ್ಹಾದ ಸೂಳಿಬಾವಿ ಮತ್ತು ಉದ್ಯಾನ ನಿರ್ವಾಹಕ ಭೀಮರಾಯ ಪಾರಿತೋಷಕ ಮತ್ತು ಪ್ರಶಸ್ತಿ ಪ್ರಮಾಣಪತ್ರ ಪಡೆದರು.
ಫಲಪುಷ್ಪ ಪ್ರದರ್ಶನ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಚಾಂಪಿಯನ್, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ರನ್ನರ್ ಅಪ್ ಸ್ಥಾನ ಪಡೆಯಿತು. ಉದ್ಯಾನ ಸ್ಪರ್ಧೆಯಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚಾಂಪಿಯನ್ ಆದರೆ, ಕರ್ನಾಟಕ ವಿಶ್ವವಿದ್ಯಾಲಯ ರನ್ನರ್ ಅಪ್ ಆಯಿತು. ಸಾರ್ವಜನಿಕ ಚಿಕ್ಕ ಉದ್ಯಾನ, ಮಧ್ಯಮ ಉದ್ಯಾನ, ದೊಡ್ಡ ಉದ್ಯಾನ, ಸಹಕಾರಿ ಸಂಸ್ಥೆ ಉದ್ಯಾನ, ಸರ್ಕಾರಿ ಉದ್ಯಾನ, ಖಾಸಗಿ ಸಂಸ್ಥೆ ಉದ್ಯಾನ, ಕಾರ್ಖಾನೆ ಉದ್ಯಾನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು.
ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಡೀನ್ ವಿ.ಎಸ್. ಪಾಟೀಲ ಮಾತನಾಡಿ, ‘ಉದ್ಯಾನ ಮತ್ತು ಗಿಡ–ಮರಗಳು ಶ್ವಾಸಕೋಶ ಇದ್ದಂತೆ. ಉತ್ತಮ ಆರೋಗ್ಯಕ್ಕೆ ಅವುಗಳ ಪಾತ್ರ ಬಹುಮುಖ್ಯವಾಗಿದ್ದು, ವಾತಾವರಣದಲ್ಲಿರುವ ಮಾಲಿನ್ಯ ನಿಯಂತ್ರಿಸುತ್ತದೆ. ಮನೆಯ ಸುತ್ತಮುತ್ತ ಖಾಲಿ ಜಾಗಗಳಲ್ಲಿ ಗಿಡಗಳನ್ನು ಬೆಳೆಸಿ ಹಸಿರು ಪರಿಸರ ನಿರ್ಮಿಸಬೇಕು. ಇಲ್ಲದಿದ್ದರೆ, ದೆಹಲಿಯ ಪರಿಸ್ಥಿತಿ ಇಲ್ಲಿಯೂ ಎದುರಾಗಿ, ಶಾಲಾ ಕಾಲೇಜಿಗೆ ರಜೆ ಘೋಷಿಸಿ, ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕಾಗಬಹುದು. ನಗರೀಕರಣ, ಕೈಗಾರಿಕೀಕರಣ ಮತ್ತು ಅಭಿವೃದ್ಧಿ ಯೋಜನೆಗಳಿಂದ ಉದ್ಯಾನ ಬೆಳೆಸಲು ಆಗುತ್ತಿಲ್ಲ. ಬಾಲ್ಕನಿ, ಒಳಾಂಗಣ ಮತ್ತು ಚಾವಣಿಯಲ್ಲಾದರೂ ಉದ್ಯಾನ ಮಾಡಲು ಮುಂದಾಗಬೇಕು’ ಎಂದರು.
‘ದೆಹಲಿಯಲ್ಲಿ ವಾತಾವರಣ ತೀವ್ರ ಹದಗೆಟ್ಟಿದ್ದು, ವಾಸಿಸಲು ಸಾಧ್ಯವಾಗುತ್ತಿಲ್ಲ. ನಾಲ್ಕು ತಿಂಗಳು ಖಾಲಿಮಾಡಿದರೆ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ವೃಕ್ಷ ಸಂಕುಲ ನಾಶ ಮತ್ತು ಗಿಡ– ಮರಗಳನ್ನು ಬೆಳೆಸಿ ಪೋಷಿಸಲು ಆಸಕ್ತಿಯಿಲ್ಲದಿರುವುದು ಇದಕ್ಕೆಲ್ಲ ಕಾರಣ. ಅಲ್ಲಿಗೆ ಬಂದ ಸಂಕಷ್ಟ ನಮಗೆ ಬೇಡವೆಂದಾದರೆ, ಹೆಚ್ಚುಹೆಚ್ಚು ಗಿಡಗಳನ್ನು ಬೆಳೆಸಬೇಕು’ ಎಂದು ಕೆವಿಜಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಉಲ್ಲಾಸ ಗುನಗ ಹೇಳಿದರು.
ಕೆಎಂಸಿ–ಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ, ತೋಟಗಾರಿಕೆ ಇಲಾಖೆ ನಿವೃತ್ತ ಉಪನಿರ್ದೇಶಕ ಸಿ.ಕೆ. ಹೆರಕಲ್, ನಿವೃತ್ತ ಪ್ರಾಧ್ಯಾಪಕ ಬಿ.ಡಿ. ಹುದ್ದಾರ, ಪಾಲಿಕೆ ಮುಖ್ಯ ಎಂಜಿನಿಯರ್ ಮಹ್ಮದ್ ಫಿರೋಜ್, ಕೆವಿಜಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ದಿಲೀಪಕುಮಾರ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಯೋಗೀಶ ಕಿಲಾರಿ ಮತ್ತು ಎ.ಜಿ. ದೇಶಪಾಂಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.