ADVERTISEMENT

ಎಫ್‌ಎಂಸಿಜಿ: ಬೆಂಗಳೂರು ಮೀರಿಸಲಿದೆ ಹುಬ್ಬಳ್ಳಿ

ಜಿಲ್ಲಾ ವಾಣಿಜ್ಯೋದ್ಯಮ ಸಂಘ– ಸಂಸ್ಥೆಗಳ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಕಾಮತ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 16:41 IST
Last Updated 17 ಜುಲೈ 2022, 16:41 IST
ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನಲ್ಲಿ ಭಾನುವಾರ ನಡೆದ ಜಿಲ್ಲಾ ವಾಣಿಜ್ಯೋದ್ಯಮ ಸಂಘ– ಸಂಸ್ಥೆಗಳ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಎಫ್‌ಐಸಿಸಿಐ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್ ಮಾತನಾಡಿದರು
ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನಲ್ಲಿ ಭಾನುವಾರ ನಡೆದ ಜಿಲ್ಲಾ ವಾಣಿಜ್ಯೋದ್ಯಮ ಸಂಘ– ಸಂಸ್ಥೆಗಳ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಎಫ್‌ಐಸಿಸಿಐ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್ ಮಾತನಾಡಿದರು   

ಹುಬ್ಬಳ್ಳಿ: ‘ತ್ವರಿತವಾಗಿ ಬಿಕರಿಯಾಗುವ ಉತ್ಪನ್ನಗಳ (ಎಫ್‌ಎಂಸಿಜಿ) ತಯಾರಿಕೆಯಲ್ಲಿ ಹುಬ್ಬಳ್ಳಿಯು ಮುಂದೊಂದು ದಿನ ಬೆಂಗಳೂರನ್ನು ಮೀರಿಸಲಿದೆ. ದಕ್ಷಿಣ ಭಾರತದ ಪ್ರಮುಖ ವ್ಯಾಪಾರ ಕೇಂದ್ರವಾಗುವ ಎಲ್ಲಾ ಅವಕಾಶಗಳು ಈ ನಗರಕ್ಕಿದೆ’ ಎಂದುಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಐಸಿಸಿಐ) ರಾಜ್ಯ ಘಟಕದ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್ ಹೇಳಿದರು.

ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ಭಾನುವಾರ ನಡೆದ ಜಿಲ್ಲಾ ವಾಣಿಜ್ಯೋದ್ಯಮ ಸಂಘ– ಸಂಸ್ಥೆಗಳ ರಾಜ್ಯ ಮಟ್ಟದ ಎರಡು ದಿನಗಳ ಸಮ್ಮೇಳನದಲ್ಲಿ ‘ಎಫ್‌ಎಂಸಿಜಿ ಮತ್ತು ಆಹಾರ ಪಾರ್ಕ್‌ಗಳ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಉಪಕ್ರಮಗಳ’ ಕುರಿತು ಮಾತನಾಡಿದ ಅವರು, ‘ಹುಬ್ಬಳ್ಳಿಯಲ್ಲಿ ಎಫ್‌ಎಂಸಿಜಿ ಉದ್ಯಮದ ಬೆಳವಣಿಗೆಗೆ ಬೇಕಾದ ವಿಮಾನ, ರೈಲು, ರಸ್ತೆ ಮಾರ್ಗ, ಮಾನವ ಸಂಪನ್ಮೂಲ ಸೇರಿದಂತೆಎಲ್ಲಾ ರೀತಿಯ ಮೂಲಸೌಕರ್ಯಗಳು ಇಲ್ಲಿವೆ’ ಎಂದರು.

‘ಈ ಭಾಗದ ಕಾರ್ಮಿಕರು ಶ್ರಮಜೀವಿಗಳು. ಅದಕ್ಕಾಗಿಯೇ ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಎಫ್‌ಎಂಸಿಜಿ ಕ್ಲಸ್ಟರ್ ಸ್ಥಾಪನೆಗಾಗಿ ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ 280 ಎಕರೆ ಭೂಮಿ ನೀಡಿದೆ. ಸ್ಥಳೀಯರು ಹೆಚ್ಚಾಗಿ ಬಳಸುವ ಉತ್ಪನ್ನಗಳನ್ನು ತಯಾರಿಸಲು ಈ ಭಾಗದ ಉದ್ಯಮಿಗಳು ಮುಂದೆ ಬರಬೇಕು. ಉದ್ಯಮಿಗಳು ₹100 ಹೂಡಿಕೆ ಮಾಡಿದರೆ, ₹120 ಲಾಭ ಪಡೆಯಬಹುದು. ಸರ್ಕಾರದಿಂದ ಸಬ್ಸಿಡಿಯೂ ಸಿಗಲಿದೆ. ಹಾಗಾಗಿ, ದೂರದೃಷ್ಟಿ ಇಟ್ಟುಕೊಂಡು ಹೂಡಿಕೆ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಅಮೆಜಾನ್ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮಿ ಎಸ್. ಮತ್ತು ಹಿತೇಶ್ ಚಿಪರಿಚೆಟ್ಟಿ, ಇ–ಮಾರುಕಟ್ಟೆ ಮತ್ತು ಅಮೆಜಾನ್‌ನಲ್ಲಿ ಸ್ಥಳೀಯ ಅಂಗಡಿಗಳ ಕುರಿತು ಮಾತನಾಡಿದರು.ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಗುಣಮಟ್ಟದ ಉತ್ಪನ್ನಗಳ ಕುರಿತು ಭಾರತೀಯ ಗುಣಮಟ್ಟ ನಿಯಂತ್ರಣ ಸಂಸ್ಥೆಯ ನಿರ್ದೇಶಕ ಇಂದ್ರಜಿತ್ ಭಟ್ಟಾಚಾರ್ಯ ಹಾಗೂ ಜಂಟಿ ನಿರ್ದೇಶಕ ಅಜಯ ಶರ್ಮಾ ಮಾಹಿತಿ ನೀಡಿದರು.

ಸಚಿವ, ಶಾಸಕ ಗೈರು: ಬೆಳಿಗ್ಗೆ 10ಕ್ಕೆ ನಡೆಯಬೇಕಿದ್ದ ವಿಶೇಷ ಗೋಷ್ಠಿಗೆ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಶಾಸಕ ಜಗದೀಶ ಶೆಟ್ಟರ್ ಗೈರಾದರು. ಅತಿಥಿಗಳು ಬಾರದಿದ್ದರಿಂದ ಬೇಸರಗೊಂಡ ಆಯೋಜಕರು, ಆ ಸಮಯದಲ್ಲಿ ಜಿಲ್ಲಾ ಮಟ್ಟದ ಅಧ್ಯಕ್ಷರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು.

ಗದುಗಿನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಎಫ್‌ಕೆಸಿಸಿಐ ಅಧ್ಯಕ್ಷ ಡಾ.ಐ.ಎಸ್. ಪ್ರಸಾದ, ಕೆಸಿಸಿಐ ಅಧ್ಯಕ್ಷ ವಿನಯ ಜವಳಿ ಸೇರಿದಂತೆ ವಾಣಿಜ್ಯೋದ್ಯಮ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

‘ಕೇಂದ್ರ, ರಾಜ್ಯದಿಂದ ಸಬ್ಸಿಡಿ’
‘ಆಹಾರ ಸಂಸ್ಕರಣ ಘಟಕ ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಬ್ಸಿಡಿ ನೀಡುತ್ತಿದ್ದು, ಉದ್ಯಮಿಗಳು ಇದರ ಪ್ರಯೋಜನ ಪಡೆದು ತಮ್ಮ ವ್ಯಾಪಾರ ಅಭಿವೃದ್ಧಿಪಡಿಸಿಕೊಳ್ಳಬೇಕು’ ಎಂದು ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್. ಬಂತನಾಳ ಹೇಳಿದರು.

‘ರೊಟ್ಟಿ, ಜೋಳ, ಖಾರಾ ಕುಟ್ಟುವ ಯಂತ್ರ ಸೇರಿದಂತೆ ₹50 ಸಾವಿರದ ಘಟಕಗಳಿಂದ ₹10 ಕೋಟಿವರೆಗಿನ ಆಹಾರ ಸಂಸ್ಕರಣ ಘಟಕ ಆರಂಭಿಸಲು ಮುಂದೆ ಬರುವವರಿಗೆ ಶೇ 30ರಷ್ಟು ಸಬ್ಸಿಡಿ ಸಿಗಲಿದೆ. ಅಲ್ಲದೆ, ಯೋಜನೆಯ ವರದಿ ತಯಾರಿಸಲು ಸಹ ₹50 ಸಾವಿರ ನೀಡಲಾಗುತ್ತದೆ’ ಎಂದರು.

‘ಉದ್ಯಮಿಗಳ ಉತ್ಪನ್ನವನ್ನು ಬ್ರಾಂಡಿಂಗ್ ಮಾಡಲು, ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ನಿಗಮ ತರಬೇತಿ ನೀಡುತ್ತದೆ. ಯುವಜನರನ್ನು ಉತ್ತೇಜಿಸುವ ಸಲುವಾಗಿ2024-25ರವರೆಗೆ ಮಾತ್ರ ಈ ಯೋಜನೆ ಜಾರಿಯಲ್ಲಿರುತ್ತದೆ. ಈ ಸಬ್ಸಿಡಿ ಲಾಭಗಳು ಹೆಚ್ಚಾಗಿ ಬೆಂಗಳೂರು ಪಾಲಾಗುತ್ತಿದ್ದು, ಉತ್ತರ ಕರ್ನಾಟಕ ತೀರಾ ಹಿಂದುಳಿದಿದೆ’ ಎಂದು ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.