ADVERTISEMENT

ಹುಬ್ಬಳ್ಳಿ | ಪಾದಚಾರಿ ಮಾರ್ಗ: ಅತಿಕ್ರಮಣಕ್ಕೆ ತಡೆ ಯಾವಾಗ?

ಬೀದಿಬದಿ ವ್ಯಾಪಾರ, ವಾಹನ ನಿಲುಗಡೆ, ಕುಸಿದ ಫುಟ್‌ಪಾತ್‌ಗಳು, ಹಲವು ಅಡೆತಡೆ

ಸ್ಮಿತಾ ಶಿರೂರ
Published 8 ಜುಲೈ 2024, 5:11 IST
Last Updated 8 ಜುಲೈ 2024, 5:11 IST
<div class="paragraphs"><p>ಹುಬ್ಬಳ್ಳಿಯ ಜನತಾ ಬಜಾರ್‌ ಬಳಿ ಸಂಗೊಳ್ಳಿರಾಯಣ್ಣ ವೃತ್ತದಿಂದ ದಾಜಿಬಾನ್‌ ಪೇಟೆಗೆ ಹೋಗುವ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಸ್ಥಳೀಯ ಅಂಗಡಿಗಳವರು ಸಾಮಗ್ರಿಗಳು ಇರಿಸಿರುವುದರಿಂದ ನಡೆದುಹೋಗಲು ದಾರಿ ಇಲ್ಲದಂತಾಗಿದೆ&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;</p></div>

ಹುಬ್ಬಳ್ಳಿಯ ಜನತಾ ಬಜಾರ್‌ ಬಳಿ ಸಂಗೊಳ್ಳಿರಾಯಣ್ಣ ವೃತ್ತದಿಂದ ದಾಜಿಬಾನ್‌ ಪೇಟೆಗೆ ಹೋಗುವ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿ ಸ್ಥಳೀಯ ಅಂಗಡಿಗಳವರು ಸಾಮಗ್ರಿಗಳು ಇರಿಸಿರುವುದರಿಂದ ನಡೆದುಹೋಗಲು ದಾರಿ ಇಲ್ಲದಂತಾಗಿದೆ                  

   

ಪ್ರಜಾವಾಣಿ ಚಿತ್ರ/ ಗುರು ಹಬೀಬ

ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಪಾದಚಾರಿ ಮಾರ್ಗ ಜನರ ಸಂಚಾರಕ್ಕಿಂತ ಸಣ್ಣ–ಪುಟ್ಟ ವ್ಯಾಪಾರಕ್ಕೆ, ವಾಹನ ನಿಲುಗಡೆಗೆ ಬಳಕೆಯಾಗುತ್ತಿರುವುದೇ ಹೆಚ್ಚು. ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಪಾದಚಾರಿ ಮಾರ್ಗ ಹಾಗೂ ಪಾರ್ಕಿಂಗ್‌ ಜಾಗಗಳಲ್ಲೂ ವ್ಯಾಪಾರ ನಡೆಯುವುದರಿಂದ ಅರ್ಧಕ್ಕಿಂತ ಹೆಚ್ಚು ಜಾಗ ಅತಿಕ್ರಮಣವಾಗಿ ನಡೆದು ಹೋಗುವವರಿಗೆ ಕಿರಿ–ಕಿರಿ ಉಂಟಾಗುತ್ತಿದೆ. ಇದು ಬಹಳ ವರ್ಷಗಳಿಂದ ಇರುವ ಸಮಸ್ಯೆಯಾಗಿದ್ದು, ಸೂಕ್ತ ಪರಿಹಾರೋಪಾಯ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

ADVERTISEMENT

ಪಾದಚಾರಿ ರಸ್ತೆಗಳಲ್ಲಿ ತರಕಾರಿ– ಹಣ್ಣು, ಪಾನೀಯ, ಚಾಟ್ಸ್‌, ನಿತ್ಯ ಬಳಕೆಯ ವಸ್ತುಗಳು, ಬಟ್ಟೆ ವ್ಯಾಪಾರ, ಡಬ್ಬಾ ಅಂಗಡಿ, ಅಕ್ಕಪಕ್ಕದ ಅಂಗಡಿಗಳಿಂದ ಅತಿಕ್ರಮಣ, ವಾಹನ ನಿಲುಗಡೆ, ಕುಸಿದ ಪಾದಚಾರಿ ರಸ್ತೆ.. ಹೀಗೆ ಹಲವು ಅಡೆತಡೆಗಳಿಂದ ಬೇಸತ್ತು ಜನರು ಪಾದಚಾರಿ ರಸ್ತೆ ಬಿಟ್ಟು ಕಷ್ಟವಾದರೂ ರಸ್ತೆಯಲ್ಲೇ ನಡೆದು ಹೋಗುವುದೇ ಹೆಚ್ಚು. ಅಕ್ಷಯ ಪಾರ್ಕ್‌, ಲಿಂಗರಾಜ ನಗರ, ಗಾಂಧಿ ನಗರ, ಹಳೇಹುಬ್ಬಳ್ಳಿ, ದುರ್ಗದ ಬಯಲು, ಎಂ.ಜಿ.ಮಾರುಕಟ್ಟೆ, ಸರಾಫ್‌ ಗಟ್ಟಿ, ಬೆಂಗೇರಿ, ಗೋಪನಕೊಪ್ಪ, ಜನತಾ ಬಜಾರ್‌ಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ನೆಮ್ಮದಿಯಾಗಿ ಸಂಚರಿಸುವಂತಿಲ್ಲ ಎಂಬಂತಾಗಿದೆ. ನಗರದಾದ್ಯಂತ ಪಾದಚಾರಿ ಮಾರ್ಗಗಳಲ್ಲಿ ವಿವಿಧ ರೀತಿಯ ಅತಿಕ್ರಮಣ ವ್ಯಾಪಕವಾಗಿ ಕಂಡು ಬಂದಿದೆ.

ಪಾದಚಾರಿ ಮಾರ್ಗದಲ್ಲಿ ವಾಹನಗಳು: ಹೊಸೂರಿನಿಂದ ಬಿವಿಬಿ ಕಾಲೇಜಿನವರೆಗೆ ಬಿಆರ್‌ಟಿಎಸ್‌ ಕಾರಿಡಾರ್‌ ಇರುವ ಕಡೆಗಳಲ್ಲಿ ರಸ್ತೆ ಪಕ್ಕದ ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಜನರ ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ಅವರು ಮತ್ತೆ ರಸ್ತೆಗೆ ಇಳಿದು ವಾಹನಗಳ ಜೊತೆಯೇ ನಡೆದು ಹೋಗಬೇಕಾದ ಪರಿಸ್ಥಿತಿ ಕಂಡು ಬಂದಿದೆ. ಕಿಮ್ಸ್‌ ಬಳಿ ಪಾದಚಾರಿ ಮಾರ್ಗದಲ್ಲೇ ಚಿಕ್ಕ ಗುಡಿಯನ್ನೂ ನಿರ್ಮಾಣ ಮಾಡಲಾಗಿದ್ದು, ಇದಕ್ಕೆ ಹೇಳುವವರು ಕೇಳುವವರು ಯಾರು ಇಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.

ಕುಸಿದ ಮಾರ್ಗ:

ನಗರದ ಹಲವೆಡೆ ಪಾದಚಾರಿ ಮಾರ್ಗವನ್ನು ಕಾಮಗಾರಿಗಾಗಿ ಅಗೆದು ಸರಿಯಾಗಿ ಮುಚ್ಚದೇ ಹಾಗೆಯೇ ಬಿಡಲಾಗಿದೆ. ಇನ್ನೂ ಕೆಲವು ಕಡೆ ಪಾದಚಾರಿ ಮಾರ್ಗವೇ ಕುಸಿದಿದ್ದು ನಡೆಯಲು ಬಾರದಂತೆ ಆಗಿದೆ. ಕೆಲವು ಕಡೆ ಮಾರ್ಗಕ್ಕೆ ಹಾಕಲಾಗಿರುವ ಪೇವರ್ಸ್‌ ಕಿತ್ತು ಬಂದಿವೆ. ಚರಂಡಿಯ ಮೇಲಿರುವ ಪಾದಚಾರಿ ಮಾರ್ಗದ ಹಲವೆಡೆ ಮುಚ್ಚಳ ತೆಗೆದು ಹಾಗೆಯೇ ಬಿಡಲಾಗಿದ್ದು, ನಡೆದುಹೋಗುವವರಿಗೆ ಅಪಾಯಕಾರಿ ಎನಿಸಿದೆ. ಪಾದಚಾರಿ ಮಾರ್ಗದಲ್ಲೇ ಟ್ರಾನ್ಸ್‌ಫಾರ್ಮರ್‌ ಕೈಗೆಟುಕುವಂತೆ ಇರುವ ಅಪಾಯಕಾರಿ ಸ್ಥಳಗಳೂ ಹಲವು ಇವೆ. ಇವುಗಳನ್ನೆಲ್ಲ ತೆರವು ಮಾಡಿ ಪಾದಚಾರಿ ಮಾರ್ಗ ಸುರಕ್ಷಿತಗೊಳಿಸಲು ಸಾಧ್ಯವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

3 ವಲಯಗಳಲ್ಲಿ ಸೌಲಭ್ಯ:

‘ಟ್ರೇಡ್‌ ವೆಂಡಿಂಗ್ ಸಮಿತಿ (ಟಿವಿಸಿ)ಯಲ್ಲಿ ನಿರ್ಧರಿಸಿದಂತೆ ಹು–ಧಾ ಮಹಾನಗರಗಳಲ್ಲಿ 40 ವ್ಯಾಪಾರಿ ವಲಯಗಳನ್ನು (ವೆಂಡಿಂಗ್‌ ಝೋನ್‌) ಗುರುತಿಸಲಾಗಿದೆ. ಮಹಾನಗರ ಪಾಲಿಕೆಯಲ್ಲಿ ಒಟ್ಟು 12  ವಲಯಗಳಿದ್ದು ಅವುಗಳಲ್ಲಿ 2, 4 ಹಾಗೂ 6ನೇ ವಲಯಗಳಲ್ಲಿ ವ್ಯಾಪಾರಿ ಜಾಗ ಗುರುತು ಹಾಕುವ ಹಾಗೂ ಅಭಿವೃದ್ಧಿ ಪಡಿಸುವ ಕಾರ್ಯ ಪೂರ್ಣಗೊಂಡಿದೆ. ಉಳಿದ ಕಡೆಗಳಲ್ಲಿ ಇನ್ನೂ ವ್ಯಾಪಾರಿಗಳು ಎಷ್ಟು ಇದ್ದಾರೆ ಎಂಬ ಸಮೀಕ್ಷೆ ನಡೆಸಬೇಕಿದೆ. ದೀಪದ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಚುನಾವಣೆ ಇದ್ದ ಕಾರಣ ಈ ಕಾರ್ಯ ನನೆಗುದಿಗೆ ಬಿದ್ದಿತ್ತು. ಈಗ ಎಲ್ಲ ವಲಯ ಕಚೇರಿಗಳಿಂದ ವರದಿ ಕೇಳಲಾಗಿದೆ. ವರದಿ ಬಂದ ನಂತರ ಸೂಕ್ತ ಯೋಜನೆ ಸಿದ್ಧ‍ಪಡಿಸಿ ಕಾರ್ಯರೂಪಕ್ಕೆ ತರಲಾಗುವುದು’ ಎಂದು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ (ನಲ್ಮ್‌) ಸಮುದಾಯ ಸಂಘಟನಾಧಿಕಾರಿ ಪ್ರಕಾಶ ದೊಡ್ಡಮನಿ ತಿಳಿಸಿದರು.

ಬೇಗನೇ ಜಾಗ ಗುರುತಿಸಿ:

‘ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿ 10,000 ದಿಂದ 12,000ಗಳಷ್ಟು ಬೀದಿಬದಿ ವ್ಯಾಪಾರಸ್ಥರು ಇದ್ದು, ಅವರಿಗೆ ಇನ್ನೂ ವ್ಯಾಪಾರಕ್ಕಾಗಿ ನಿಗದಿತ ಜಾಗ ಗುರುತಿಸಿಕೊಟ್ಟಿಲ್ಲ. ಮಹಾನಗರ ಪಾಲಿಕೆಯಿಂದ ನಿತ್ಯ ₹ 10–₹ 30 ರಷ್ಟು ಹಣ ವಸೂಲಿ ಮಾಡಲಾಗುತ್ತಿದೆ. ಆದರೆ ಯಾವ ಸೌಲಭ್ಯಗಳನ್ನೂ ನೀಡಿಲ್ಲ. ಹಲವು ಹೋರಾಟಗಳ ನಂತರ ಬೆಂಗೇರಿಯಲ್ಲಿ ಸಂತೆ ಮಾರುಕಟ್ಟೆ ಮಾಡಲಾಗಿದ್ದು, ಅದರಿಂದ ಅನುಕೂಲವಾಗಿದೆ. ಉಳಿದ ಮಾರುಕಟ್ಟೆ ‍ಪ್ರದೇಶದಲ್ಲೂ ಜಾಗ ಗುರುತಿಸಿ, ಮೂಲ ಸೌಲಭ್ಯ ಒದಗಿಸಬೇಕು. ಹಳೇಹುಬ್ಬಳ್ಳಿ ಹಾಗೂ ಜನತಾ ಬಜಾರ್‌ಗಳಲ್ಲಿ ನಿರ್ಮಾಣವಾದ ಮಾರುಕಟ್ಟೆ ಕಟ್ಟಡವನ್ನು ಬೇಗನೇ ವ್ಯಾಪಾರಿಗಳಿಗೆ ಹಸ್ತಾಂತರ ಮಾಡಬೇಕು. ಆಗ ಬೀದಿವ್ಯಾಪಾರದಿಂದ ಆಗುವ ಅತಿಕ್ರಮಣ ಸಮಸ್ಯೆ ಬಗೆಹರಿಯುತ್ತದೆ’ ಎಂದು ಹು–ಧಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವ ಅಧ್ಯಕ್ಷ ಅಮೃತ್‌ ಇಜಾರಿ ತಿಳಿಸಿದರು.

ಯಾವುದೇ ಕ್ರಮ ಆಗಿಲ್ಲ:

ವಾರ್ಡ್‌ ನಂ. 65ರಲ್ಲಿ ಪ್ರಮುಖ ಮಾರುಕಟ್ಟೆ ಪ್ರದೇಶಗಳಿದ್ದು, ಇಲ್ಲಿ ಫುಟ್‌ಪಾತ್‌ ಅತಿಕ್ರಮಣ ಸಮಸ್ಯೆ ತೀವ್ರವಾಗಿದೆ. ಜನರಿಗೆ ಇದರಿಂದ ತುಂಬಾ ಸಮಸ್ಯೆಯೂ ಉಂಟಾಗಿದೆ. ಫುಟ್‌ಪಾತ್‌ ಅತಿಕ್ರಮಣ ತೆರವಿಗಾಗಿ ಹಲವು ಬಾರಿ ಕಂದಾಯ ಇಲಾಖೆ, ಪಾಲಿಕೆಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲ. ಜನತಾ ಬಜಾರ್‌ನ ಹೊಸ ಕಟ್ಟಡ ಬಳಕೆಗೆ ಲಭಿಸಿದರೆ ಫುಟ್‌ಪಾತ್‌ನಲ್ಲಿ ಕುಳಿತು ವ್ಯಾಪಾರ ಮಾಡುವವರಿಗೆ ಒಳಗೆ ಅವಕಾಶ ಮಾಡಬಹುದು’ ಎಂದು ವಾರ್ಡ್‌ 65ರ ಮಹಾನಗರ ಪಾಲಿಕೆ ಸದಸ್ಯೆ ಸುನೀತಾ ಬುರಬುರೆ ಅಭಿಪ್ರಾಯಪಟ್ಟರು.

ಪಾದಚಾರಿ ಮಾರ್ಗದಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿ, ವ್ಯವಸ್ಥಿತ ದಾರಿ ನಿರ್ಮಿಸಿದರೆ ಹಲವು ಅಪಘಾತ ತಪ್ಪಿಸಬಹುದು. ವಾಹನ ದಟ್ಟಣೆಯೂ ಕಡಿಮೆ ಆಗುತ್ತದೆ. ಬೀದಿಬದಿ ವ್ಯಾಪಾರಕ್ಕೆ ಸೂಕ್ತ ಜಾಗ ಗುರುತಿಸಿದಲ್ಲಿ ಜನರಿಗೂ ಕೊಳ್ಳಲು ಅನುಕೂಲವಾಗುತ್ತದೆ. ಎಲ್ಲರಿಗೂ ಅನುಕೂಲವಾಗುವಂತೆ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಲಿ ಎಂಬುದು ನಾಗರಿಕರ ಆಶಯ.

ಹುಬ್ಬಳ್ಳಿಯ ಜನತಾ ಬಜಾರ್‌ನ ತರಕಾರಿ ಮಾರುಕಟ್ಟೆ ಬಳಿ ಡಬ್ಬಾ ಅಂಗಡಿ ಹಾಗೂ ಬೀದಿಬದಿ ವ್ಯಾಪಾರಿಗಳಿಂದ ಪಾದಚಾರಿ ಮಾರ್ಗ ಸಂಪೂರ್ಣ ಬಂದ್‌ ಆಗಿರುವುದು

ಹುಬ್ಬಳ್ಳಿಯ ದುರ್ಗದ ಬೈಲ್‌ನಲ್ಲಿ ವಾಹನಗಳು ಹಾಗೂ ಬೀದಿಬದಿ ವ್ಯಾಪಾರದಿಂದಾಗಿ ಪಾದಚಾರಿ ಮಾರ್ಗವೇ ಕಾಣದಂತಾಗಿದೆ

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಕಿಮ್ಸ್‌ ನಿಲ್ದಾಣದ ಬಳಿಯ ಪಾದಚಾರಿ ಮಾರ್ಗದಲ್ಲಿ ಚಿಕ್ಕ ಗುಡಿ ನಿರ್ಮಿಸಿರುವುದು

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಕೆನರಾ ಬ್ಯಾಂಕ್‌ ಎದುರು ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿರುವುದು

ಅಧಿಕಾರಿಗಳ ಜಾಣ ಕುರುಡುತನ

ಧಾರವಾಡ: ನಗರ ಬಸ್‌ ನಿಲ್ದಾಣದ (ಸಿಬಿಟಿ) ಸುತ್ತಲಿನ ಪ್ರದೇಶಗಳ ರಸ್ತೆಗಳ ವಿವಿಧೆಡೆಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ಅತಿಕ್ರಮಣವಾಗಿದ್ದು ಓಡಾಟ ಪಡಿಪಾಟಲಾಗಿದೆ. ವ್ಯಾಪಾರಿಗಳು (ಪಾನಿಪುರಿ ಹಣ್ಣು ತರಕಾರಿ ಎಳನೀರು ಐಸ್‌ಕ್ರೀಂ ಬೀಗ ಪಾದರಕ್ಷೆ...) ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡುತ್ತಾರೆ. ಕೆಲವರು ತಳ್ಳುಗಾಡಿಗಳಲ್ಲಿ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವು ಕಡೆ ಗೂಡಂಗಡಿಗಳು ತಲೆ ಎತ್ತಿವೆ. ಪಾದಚಾರಿ ಮಾರ್ಗಗಳ ಬದಿಗಳ ಅಂಗಡಿಗಳವರೂ ಕೆಲವು ವಸ್ತುಗಳನ್ನು ಹೊರಗೆ ಇಟ್ಟಿರುತ್ತಾರೆ. ಕೆಲವು ಮಳಿಗೆಗಳವರು ಶೀಟ್‌ ಅಳವಡಿಸಿ ವಿಸ್ತರಿಸಿಕೊಂಡಿದ್ದಾರೆ. ಕೆಲವು ಬೀದಿ ಬದಿ ವ್ಯಾಪಾರಿ ದೊಡ್ಡ ಛತ್ರಿಗಳನ್ನು (ಬಿಸಿಲು ಮಳೆಯಿಂದ ರಕ್ಷಣೆಗೆ) ರಸ್ತೆ ಬದಿ ಅಳವಡಿಸಿ ನೆರಳಿನಲ್ಲಿ ವ್ಯಾಪಾರ ಮಾಡುತ್ತಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಒತ್ತುವರಿ ಕಂಡರೂ ‘ಜಾಣ ಕುರುಡು’ ಮತ್ತು ‘ಜಾಣ ಮೌನ’ ವಹಿಸಿದ್ದಾರೆ.

ಅತಿಕ್ರಮಣದಿಂದಾಗಿ ಕೆಲವೆಡೆ ‘ಟ್ರಾಫಿಕ್‌ ಜಾಮ್‌’ ನಿತ್ಯದ ಸಮಸ್ಯೆಯಾಗಿದೆ. ಸಿಬಿಟಿ ಅಕ್ಕಿಪೇಟೆ ವಿಜಯಾ ರಸ್ತೆ ಸುಭಾಸ ರಸ್ತೆ ಶಿವಾಜಿ ವೃತ್ತ ಸಪ್ತಾಪುರ ಸಹಿತ ಜನದಟ್ಟಣೆಯ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ಸಮಸ್ಯೆ ಇದೆ. ಕೆಲವು ಕಡೆ ಪಾದಚಾರಿ ಮಾರ್ಗ ಇದ್ದರೂ ವ್ಯಾಪಾರಿಗಳ ಕರಾಮತ್ತಿನಿಂದ ‘ಕಣ್ಮರೆ’ಯಾಗಿವೆ. ಇಂಥ ಕಡೆ ಪಾದಚಾರಿಗಳು ರಸ್ತೆ ಬದಿಯಲ್ಲೇ ಓಡಾಡಬೇಕಾದ ಅನಿವಾರ್ಯತೆ ಇದೆ.

‘ಪಾದಚಾರಿ ಮಾರ್ಗದ ಅತಿಕ್ರಮಣ ತೆರವಿಗೆ ಪಾಲಿಕೆಯವರು ಕ್ರಮ ವಹಿಸಬೇಕು. ಈ ಮಾರ್ಗದಲ್ಲಿ ವ್ಯಾಪಾರಕ್ಕೆ ಪೊಲೀಸರು ಅವಕಾಶ ನೀಡಬಾರದು. ಬೀದಿ ವ್ಯಾಪಾರಿಗಳಿಂದ ಶುಲ್ಕ ವಸೂಲಿ ಮಾಡುತ್ತಾರೆ. ಸಂಚಾರಕ್ಕೆ ತೊಂದರೆಯಾಗದ ಖಾಲಿ ಪ್ರದೇಶಗಳಲ್ಲಿ ಅವರಿಗೆ ವ್ಯಾಪಾರಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಪರಿಸರಾಸಕ್ತ ಶಂಕರ ಕುಂಬಿ ಒತ್ತಾಯಿಸುತ್ತಾರೆ.

ಕೆಲವು ಕಡೆ ರಸ್ತೆ (ಸುಭಾಸ್‌ ರಸ್ತೆ) ಬದಿ ವಾಹನ ನಿಲಗಡೆ ಜಾಗದಲ್ಲೂ ಐಸ್‌ ಕ್ರೀಂ ತರಕಾರಿ ವ್ಯಾಪಾರ ಮಾಡುತ್ತಾರೆ. ವಾಹನ ಸವಾರರು ವಾಹನಗಳ ನಿಲುಗಡೆಗೆ ಪರದಾಡಬೇಕಾದ ಸ್ಥಿತಿ ಇದೆ. ಮಾರುಕಟ್ಟೆ ಭಾಗದಲ್ಲಿ ರಸ್ತೆ ಬದಿ ವ್ಯಾಪಾರ ವಾಹನ ದಟ್ಟಣೆ ಜನಜಂಗುಳಿಯ ನಡುವೆ ವೃದ್ಧರು ಅಶಕ್ತರು ಅಂಗವಿಕಲರು ಮಕ್ಕಳು ಓಡಾಡುವುದೇ ಸವಾಲಾಗಿದೆ. ಜೋರಾಗಿ ಮಳೆಯಾದಾಗ ಹಲವೆಡೆ ರಸ್ತೆ ಪಾದಚಾರಿ ಮಾರ್ಗದಲ್ಲಿ ನೀರು ಆವರಿಸುತ್ತದೆ. ಈ ನೀರು‌ ಕೆಸರಿನಲ್ಲಿ ಸಾಗುವುದಕ್ಕೆ ಪ್ರಯಾಸಪಡಬೇಕಿದೆ. ಪಾದಚಾರಿ ಮಾರ್ಗದ ಅತಿಕ್ರಮಣ ತೆರವುಗೊಳಿಸಿ ಸುಗಮ ಓಡಾಟಕ್ಕೆ ವ್ಯವಸ್ಥೆ ಮಾಡಬೇಕು ಎಂಬುದೇ ನಾಗರಿಕರ ಆಗ್ರಹ.

ಬೃಹತ್‌ ಕಾರ್ಯಾಚರಣೆ ಶೀಘ್ರ

ಫುಟ್‌ಪಾತ್‌ ಹಾಗೂ ಪಾರ್ಕಿಂಗ್‌ ಅತಿಕ್ರಮಣ ತೆರವಿಗೆ ಮಹಾನಗರ ಪಾಲಿಕೆಯು ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ಶೀಘ್ರದಲ್ಲೇ ‘ಬೃಹತ್‌ ಕಾರ್ಯಾಚರಣೆ ಅಭಿಯಾನ’ ಹಮ್ಮಿಕೊಳ್ಳಲಿದೆ. ಈ ಬಗ್ಗೆ ಪೊಲೀಸ್ ಆಯುಕ್ತರ ಬಳಿ ಚರ್ಚಿಸಿ ಯೋಜನೆಯ ರೂಪುರೇಷೆ ನಿರ್ಧರಿಸಲಾಗುವುದು ಎಂದು ಹು–ಧಾ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

‘ವೆಂಡಿಂಗ್‌ ಝೋನ್‌ ಹೊರತು ಪಡಿಸಿ ಬೇರೆಲ್ಲಿಯೂ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದಿಲ್ಲ. ಪಾದಚಾರಿ ಮಾರ್ಗ ಹಾಗೂ ಪಾರ್ಕಿಂಗ್‌ ಪ್ರದೇಶದಲ್ಲಿ ಇರುವ ಎಲ್ಲ ರೀತಿಯ ಅತಿಕ್ರಮಣ ತೆರವುಗೊಳಿಸುತ್ತೇವೆ. ಅವರಾಗಿಯೇ ತೆರವು ಮಾಡಲು ಸಮಯ ನೀಡಲಾಗುತ್ತದೆ. ಆ ಸಮಯ ಮೀರಿದ ನಂತರ ಅಂಥ ಜಾಗದಲ್ಲಿ ಇರುವ ಎಲ್ಲ ಸಾಮಗ್ರಿ ವಾಹನಗಳನ್ನೂ ಜಪ್ತು ಮಾಡುತ್ತೇವೆ. ತೆರವಿನ ನಂತರವೂ ಅತಿಕ್ರಮಣವಾಗದಂತೆ ತಡೆಯಲು ‘ವಿಕ್ರಂ’ ವಾಹನದ ಗಸ್ತು ಆರಂಭಿಸಲಾಗುವುದು. ಈಗಾಗಲೇ 2 ವಿಕ್ರಂ ವಾಹನಗಳಿದ್ದು ಇನ್ನೂ 2 ವಾಹನಗಳು ಬರಲಿವೆ’ ಎಂದು ಅವರು ತಿಳಿಸಿದರು.

‘ಮಾರಾಟ ವಲಯಗಳು ರೂಪುಗೊಂಡಾಗ ಬೀದಿ ಬದಿ ವ್ಯಾಪಾರಸ್ಥರಿಗೆ ಎಲ್ಲ ಸೌಕರ್ಯಗಳೂ ಸಿಗುತ್ತವೆ. ಈಗಾಗಲೇ ಇರುವ ಮಾರಾಟ ವಲಯಗಳಲ್ಲಿ ಮಾತ್ರ ವ್ಯಾಪಾರಿಗಳಿಂದ ಶುಲ್ಕ ಸಂಗ್ರಹಿಸಲಾಗುತ್ತಿದೆ. ಉಳಿದವರಿಂದ ಹಣ ಸಂಗ್ರಹ ಮಾಡುತ್ತಿಲ್ಲ’ ಎಂದು ಅವರು ಸ್ಪಷ್ಟನೆ ನೀಡಿದರು.

ಜನತಾ ಬಜಾರ್‌ ಹಾಗೂ ಹಳೇ ಹುಬ್ಬಳ್ಳಿಗಳಲ್ಲಿ ಸ್ಮಾರ್ಟ್‌ ಸಿಟಿ ಅಡಿ ನಿರ್ಮಾಣವಾಗಿರುವ ವಾಣಿಜ್ಯ ಸಂಕೀರ್ಣಗಳ ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಸ್ತಾಂತರ ಮಾಡುವ ಕುರಿತು ಮುಂಬರುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪೂರಕ ಮಾಹಿತಿ: ಧನ್ಯಪ್ರಸಾದ್‌ ಬಿ.ಜೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.