ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರ ಅಧಿಕೃತ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ.
ಯಾರೋ ದುಷ್ಕರ್ಮಿಗಳು ಶೆಟ್ಟರ್ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಅದರಲ್ಲಿ ‘ನನಗೆ ಉತ್ತಮ ಹೂಡಿಕೆ ಅನುಭವ ಸಿಕ್ಕಿದೆ. 7.50 ಲಕ್ಷ ಸಂದಾಯವಾಗಿದೆ. ನಿಮಗೂ ಲಾಭ ಆಗಬೇಕಾದರೆ @cristina penate ಸಂಪರ್ಕಿಸಿ’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.
ಅಲ್ಲದೇ ಆ ಪೋಸ್ಟ್‌ನಲ್ಲಿ ಹಣ ಸಂದಾಯವಾಗಿರುವ ಸ್ಕ್ರೀನ್ ಶಾಟ್‌ಗಳನ್ನೂ ಹಂಚಿಕೊಳ್ಳಲಾಗಿದೆ.
ಹ್ಯಾಕ್ ಆಗಿರುವ ಬಗ್ಗೆ ‘ಪ್ರಜಾವಾಣಿ’ಗೆ ಖಚಿತಪಡಿಸಿರುವ ಜಗದೀಶ್ ಶೆಟ್ಟರ್ ಆಪ್ತರು, ನಮ್ಮ ತಾಂತ್ರಿಕ ತಂಡ ಈ ಬಗ್ಗೆ ಪರಿಶೀಲಿಸುತ್ತಿದೆ. ಸೈಬರ್ ಠಾಣೆಗೂ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಅವರೂ ಸಹ ಸ್ಪಷ್ಟನೆ ನೀಡಿದ್ದು, ಯಾರೂ ಲಿಂಕ್ ಕ್ಲಿಕ್ಕಿಸಬೇಡಿ ಎಂದು ಫೇಸ್‌ಬುಕ್‌ನಲ್ಲಿ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.