ಹುಬ್ಬಳ್ಳಿ: ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಧಾರವಾಡದ ಸಿಬಿ ನಗರದ ವಿದ್ಯಾರ್ಥಿನಿ ಪೂಜಾ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ ವ್ಯಕ್ತಿ, ಆನ್‌ಲೈನ್‌ನಲ್ಲಿ ₹3.25 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಪೂಜಾ ಅವರಿಗೆ ಗೂಗಲ್ ರೇಟಿಂಗ್ ನೀಡುವ ಮೂಲಕ ಬಿಡುವಿನ ವೇಳೆ ಕೆಲಸ ಮಾಡಬಹುದು ಎಂದು ನಂಬಿಸಿ, ಹಣ ಹೂಡಿಕೆಗೆ ಉತ್ತೇಜಿಸಿದ್ದಾನೆ. ಹೂಡಿಕೆ ಮಾಡಿದ ಹಣಕ್ಕೆ ಆರಂಭದಲ್ಲಿ ಲಾಭ ನೀಡಿ ನಂಬಿಕೆ ಗಳಿಸಿ, ನಂತರ ಹೆಚ್ಚುವರಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ: ನೂರಾನಿ ಮಾರ್ಕೆಟ್‌ನ ಪ್ರಿನ್ಸ್ ಬಾರ್ ಬಳಿ ನಡೆದುಕೊಂಡು ಹೋಗುತ್ತಿದ್ದ ಕಮರಿಪೇಟೆಯ ಫಯಾಜ್ ಉಂಟವಾಲೆ ಅವರಿಗೆ ನಾಲ್ವರ ಗುಂಪು ಹಲ್ಲೆ ನಡೆಸಿರುವ ಆರೋಪದ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಯಾಜ್ ನಡೆದುಕೊಂಡು ಹೋಗುತ್ತಿದ್ದಾಗ ಸೆಟ್ಲಮೆಂಟ್‌ನ ವಿಜಯ ಬಿಜವಾಡ ಸೇರಿದಂತೆ ನಾಲ್ವರು ಆರೋಪಿಗಳು, ‘ಯಾಕ ಗುರಾಯಿಸಿ ನೋಡಾತಿಲೇ’ ಎಂದು ಒಮ್ಮಿಂದೊಮ್ಮೆಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲು: ದೇಶಪಾಂಡೆನಗರದ ಗುರುದ್ವಾರ ಮಂದಿರದ ಶೆಟರ್ಸ್‌ಗೆ ಶ್ರೀರಾಮ ಇರುವ ಭಾವಚಿತ್ರದ ಕೇಸರಿ ಬಾವುಟ ಕಟ್ಟಿರುವ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಭಾವನಗೆ ಧಕ್ಕೆ ತಂದಿರುವ ಕುರಿತು ಪ್ರಕರಣ ದಾಖಲಾಗಿದೆ.
‘ದುಷ್ಕರ್ಮಿಗಳು ಬಾವುಟ ಕಟ್ಟಿ ಧಾರ್ಮಿಕ ನಂಬಿಕೆಗೆ ಅಪಮಾನ ಮಾಡಿದ್ದಾರೆ’ ಎಂದು ಸಿಖ್ ಧರ್ಮದ ಪ್ರೀತಂಸಿಂಗ್ ಹುಂಡಾಲ ದೂರಿನಲ್ಲಿ ತಿಳಿಸಿದ್ದಾರೆ.
ಕಳವು: ಇಲ್ಲಿಯ ಹೇಮಂತ ನಗರದ ಗಣಪತಿ ಗುಡಿ ಹತ್ತಿರದ ವಿನಯ ಪಾಟೀಲ ಅವರ ಮನೆಯ ಕಪಾಟಿನಲ್ಲಿ ಇಟ್ಟಿದ್ದ ₹2.85 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಕಿತ್ತು ಪರಾರಿ: ಹಾನಗಲ್ಲಿನ ರೈತ ಸುಭಾಷ ಗೋಣಿ ಅವರನ್ನು ಇಬ್ಬರು ಬೆದರಿಸಿ, ಅವರ ಬಳಿಯಿದ್ದ ₹78 ಸಾವಿರ ನಗದು ಕಿತ್ತು ಪರಾರಿಯಾಗಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಭಾಷ ಅವರು ನ. 14ರಂದು ರಾತ್ರಿ ಸಿದ್ಧಾರೂಢ ಮಠದ ದ್ವಾರಬಾಗಿಲ ಬಳಿಯಿರುವ ಕಾಂಪ್ಲೆಕ್ಸ್ ಎದುರು ಮಲಗಿದ್ದರು. ತಡರಾತ್ರಿ ಬಂದ ಇಬ್ಬರು ಅವರನ್ನು ಎಬ್ಬಿಸಿ ತಂಬಾಕು, ಬೀಡಿ ನೀಡುವಂತೆ ಹೇಳಿದ್ದಾರೆ. ಇಲ್ಲ ಎಂದು ಹೇಳಿದ್ದಕ್ಕೆ ಕೊಲೆ ಮಾಡುವುದಾಗಿ ಬೆದರಿಸಿ, ಅವರಲ್ಲಿದ್ದ ಹಣ ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಿನ್ನಾಭರಣ ಕಳವು: ಗೋಕುಲ ರಸ್ತೆಯ ಸಿಲ್ವರ್‌ಟೌನ್‌ನ ಸುನೀಲ ಸೋಳಂಕಿ ಅವರ ಮನೆ ಬಾಗಿಲಿನ ಬೀಗ ಮುರಿದು ₹8.60 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.