ಹುಬ್ಬಳ್ಳಿ: ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಸೆಳೆಯಲು ಮತ್ತು ವಿದ್ಯಾಭ್ಯಾಸದ ಅನುಕೂಲ ಕಲ್ಪಿಸಲು 2006–07ರಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಉಚಿತ ಬೈಸಿಕಲ್ ಯೋಜನೆ, ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿತ್ತು. ಅಲ್ಲದೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಆಗುತ್ತಿತ್ತು. ಆದರೆ, ಸದ್ಯ ಯೋಜನೆ ಸ್ಥಗಿತಗೊಂಡಿದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಗ್ರಾಮ ಹಾಗೂ ಕಾಡಂಚಿನ ಪ್ರದೇಶ, ಗುಡ್ಡಗಾಡು ಪ್ರದೇಶಗಳಿಂದ ಶಾಲೆಗೆ ಕಿಲೋ ಮೀಟರ್‌ಗಟ್ಟಲೇ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳ ಪಾಲಿಗೆ ಈ ಯೋಜನೆ ಬಹುದೊಡ್ಡ ಆಸರೆ ಆಗಿತ್ತು. ಪ್ರಾಥಮಿಕ ಹಂತಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದ ವಿದ್ಯಾರ್ಥಿಗಳು, ಪ್ರೌಢಶಿಕ್ಷಣಕ್ಕೂ ಬರುವಂತೆ ಮಾಡಿತ್ತು. ಆದರೆ, ಯೋಜನೆ ಸ್ಥಗಿತಗೊಂಡ ಕಾರಣ ವಿದ್ಯಾರ್ಥಿಗಳು ಮತ್ತೆ ಕಾಲ್ನಡಿಗೆ ಮೂಲಕವೇ ಶಾಲೆಗಳಿಗೆ ತೆರಳುವಂತಾಗಿದೆ.
2006-07ರಿಂದ 2019–20ನೇ ಸಾಲಿನವರೆಗೆ ಈ ಯೋಜನೆ ಜಾರಿಯಲ್ಲಿತ್ತು. ಸಾಂಕ್ರಾಮಿಕ ರೋಗ ಕೋವಿಡ್‌ನಿಂದಾಗಿ 2019ರಲ್ಲಿ ಯೋಜನೆ ಸ್ಥಗಿತಗೊಂಡಿದ್ದು, ಈ ವರೆಗೂ ಪ್ರಾರಂಭವಾಗಿಲ್ಲ. ಪ್ರತಿವರ್ಷವೂ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಾಲಾ ಶಿಕ್ಷಕರ ಸಂಘಗಳು, ಕೆಲ ಸಂಘಟನೆಗಳು ಈ ಯೋಜನೆ ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇವೆ. ಆದರೆ, ಸರ್ಕಾರ ಮಾತ್ರ ಆರ್ಥಿಕ ಕೊರತೆಯ ನೆಪವೊಡ್ಡಿ ಯೋಜನೆ ಜಾರಿಯನ್ನು ಮುಂದೂಡುತ್ತಲೇ ಇದೆ.
ಬೈಸಿಕಲ್ ಯೋಜನೆ ಸ್ಥಗಿತಗೊಳಿಸಿದ್ದು ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳ ಶಿಕ್ಷಣ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಧಾರವಾಡ ನಗರ, ಧಾರವಾಡ ಗ್ರಾಮಾಂತರ, ಹುಬ್ಬಳ್ಳಿ ನಗರ, ಹುಬ್ಬಳ್ಳಿ ಗ್ರಾಮಾಂತರ, ಕಲಘಟಗಿ, ಕುಂದಗೋಳ, ನವಲಗುಂದ ಸೇರಿ ಧಾರವಾಡ ಜಿಲ್ಲೆಯು 7 ತಾಲ್ಲೂಕುಗಳನ್ನು ಒಳಗೊಂಡಿದೆ. ಇಲ್ಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಗಳಿಗೆ ಪ್ರತಿದಿನ ಕಾಲ್ನಡಿಗೆ ಮೂಲಕವೇ ತೆರಳುವಂತಾಗಿದೆ.
ಜಿಲ್ಲೆಯಲ್ಲಿ 519 ಸರ್ಕಾರಿ ಹಿರಿಯ ಪ್ರಾಥಮಿಕ, 221 ಅನುದಾನಿತ, 113 ಸರ್ಕಾರಿ ಪ್ರೌಢಶಾಲೆಗಳಿವೆ. ಅನುದಾನಿತ ಪ್ರೌಢಶಾಲೆಗಳಲ್ಲಿ 9,351 ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ 11,423 ವಿದ್ಯಾರ್ಥಿಗಳು 8 ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
ಸೈಕಲ್ ಅನಿವಾರ್ಯ
‘ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಸಬಲರಾದ ಕುಟುಂಬದ ವಿದ್ಯಾರ್ಥಿಗಳು ಸ್ವಂತ ಸೈಕಲ್ ಖರೀದಿಸಿ ಶಾಲೆಗೆ ಬರುತ್ತಾರೆ. ಆದರೆ, ಬಡ ವಿದ್ಯಾರ್ಥಿಗಳು ನಡೆದುಕೊಂಡೇ ಶಾಲೆಗೆ ಬರುವಂತಾಗಿದೆ. ಅದರಲ್ಲೂ ಬಿಸಿಲು, ಮಳೆ ಸಂದರ್ಭದಲ್ಲಂತೂ ಶಾಲೆಗೆ ಬರಲು ಇವರು ಪರದಾಡುವಂತಾಗಿದೆ. ಬೈಸಿಕಲ್ ಯೋಜನೆ ಮತ್ತೆ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗಲಿದೆ’ ಎನ್ನುವುದು ಶಿಕ್ಷಕರ ಮಾತು.
ಬಳಕೆ ಪೋಷಕರದ್ದು!
ಸರ್ಕಾರ ವಿದ್ಯಾರ್ಥಿಗಳಿಗಾಗಿಯೇ ಈ ಯೋಜನೆ ಜಾರಿಗೆ ತಂದಿತ್ತಾದರೂ, ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಸೈಕಲ್‌ಗಳು ಮಾತ್ರ ವಿದ್ಯಾರ್ಥಿಗಳಿಗೆ ಸರಿಯಾಗಿ ಬಳಕೆ ಆಗುತ್ತಿರಲಿಲ್ಲ. ವಾರದಲ್ಲಿ ಒಂದೆರಡು ಬಾರಿ ಮಾತ್ರ ಸೈಕಲ್‌ಗಳನ್ನು ಶಾಲೆಗೆ ತರುತ್ತಿದ್ದರು. ಉಳಿದಂತೆ ವಿದ್ಯಾರ್ಥಿ ಪೋಷಕರು ತಮ್ಮ ಕೆಲಸಗಳಿಗೆ ಈ ಸೈಕಲ್‌ಗಳನ್ನು ಬಳಕೆ ಮಾಡುತ್ತಿದ್ದರು. ಸೈಕಲ್ ಮೇಲೆ ಮೇವು, ಕಟ್ಟಿಗೆ ತರಲು ತರುತ್ತಿದ್ದರು. ಇಲ್ಲವೇ, ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಹೀಗಾಗಿ ಸರ್ಕಾರ ವಿತರಿಸಿದ ಸೈಕಲ್‌ಗಳು ವಿದ್ಯಾರ್ಥಿಗಳಿಗಿಂತ ಹೆಚ್ಚು ಬಳಕೆಯಾಗಿದ್ದು ಅವರ ಪೋಷಕರಿಗೇ ಎನ್ನುತ್ತಾರೆ ಸಾರ್ವಜನಿಕರು.
‘ಕಳಪೆ ಗುಣಮಟ್ಟದ ಸೈಕಲ್’
‘ಬೈಸಿಕಲ್ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವ ಸೈಕಲ್‌ಗಳು ತೀರಾ ಕಳಪೆಯಾಗಿದ್ದವು. ಕೆಲವೇ ತಿಂಗಳಲ್ಲಿ ಹಾಳಾಗುತ್ತಿದ್ದವು. ಮತ್ತೆ ಬಳಕೆಗೆ ಯೋಗ್ಯವಲ್ಲದ ಕಾರಣಕ್ಕೆ ಗುಜರಿ ಸೇರುತ್ತಿದ್ದವು. ಇದರಿಂದ ಮುಂದಿನ ತರಗತಿಗೆ ವಿದ್ಯಾರ್ಥಿಗಳು ನಡೆದುಕೊಂಡೇ ಬರುವಂತಾಗಿತ್ತು. ಈ ಯೋಜನೆಯನ್ನು ಸರ್ಕಾರ ಮತ್ತೆ ಆರಂಭಿಸಿ ಗುಣಮಟ್ಟದ ಸೈಕಲ್‌ಗಳನ್ನು ವಿತರಿಸಬೇಕು. ಕನಿಷ್ಠ ಮೂರ್ನಾಲ್ಕು ವರ್ಷವಾದರೂ ಈ ಸೈಕಲ್‌ಗಳು ಬಾಳಿಕೆ ಬರುವಂತಿರಲಿ’ ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಕರೊಬ್ಬರು ಅಭಿಪ್ರಾಯ ಹಂಚಿಕೊಂಡರು.
2024ಕ್ಕೆ ಯೋಜನೆ ಆರಂಭ?
ಈ ಹಿಂದಿನ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರಲ್ಲಿ ಬೈಸಿಕಲ್ ಯೋಜನೆಯನ್ನು ಪುನರಾರಂಭ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅದು ವಿದ್ಯಾರ್ಥಿಗಳ ಪಾಲಿಗೆ ಭರವಸೆಯಾಗಿಯೇ ಉಳಿಯಿತು. ಸದ್ಯದ ಕಾಂಗ್ರೆಸ್ ಸರ್ಕಾರವೂ ಈ ವರ್ಷ ಯೋಜನೆ ಜಾರಿಗೆ ಆಸಕ್ತಿ ತೋರುತ್ತಿಲ್ಲ. ವಿಧಾನ ಪರಿಷತ್‌ನಲ್ಲಿ ಶಾಸಕರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮಕ್ಕಳ ವಿದ್ಯಾಭ್ಯಾಸಕ್ಕೆ ಬೈಸಿಕಲ್ ಯೋಜನೆ ಅನುಕೂಲವಾಗುತ್ತದೆ. ಈ ಯೋಜನೆ ಬಗ್ಗೆ ಪರಿಶೀಲಿಸಿ ನಿರ್ಧರಿಸಲಾಗುವುದು’ ಎಂದು ತಿಳಿಸಿದ್ದರು. ‘ಈಗಾಗಲೇ ಶಾಲೆಗಳು ಆರಂಭವಾಗಿ ಐದಾರು ತಿಂಗಳಾಗಿದ್ದು ಈ ಬಾರಿ ಸೈಕಲ್ ವಿತರಣೆ ಮಾಡಲ್ಲ. ಮುಂದಿನ ವರ್ಷದಿಂದ ಸೈಕಲ್ ವಿತರಣೆ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದರು.
ಕಾಡಿನ ರಸ್ತೆ, ಭಯದಲ್ಲೇ ಓಡಾಟ!
ಅಳ್ನಾವರ : ಬೆಳಗಾವಿ ವ್ಯಾಪ್ತಿಯ ಪುರ ಗ್ರಾಮದಿಂದ 3 ಕಿ.ಮೀ ದೂರ ಇರುವ ಅಳ್ನಾವರದ ಪ್ರೌಢಶಾಲೆಗೆ 32 ವಿದ್ಯಾರ್ಥಿಗಳು ನಡೆದುಕೊಂಡೇ ಹೋಗುತ್ತಾರೆ. ರಸ್ತೆಯು ದುರ್ಗಮವಾಗಿದ್ದು ಸಂಜೆಯಾದರೆ ಜನಸಂಚಾರ ಕಡಿಮೆ ಇರುತ್ತದೆ. ಸಮೀಪದ ಬೆಣಚಿ ಸರ್ಕಾರಿ ಪ್ರೌಢಶಾಲೆಗೆ ಕಿವಡೆಬೈಲ್ ಹಾಗೂ ಡೊಪೆನಟ್ಟಿ ಗ್ರಾಮದ ವಿದ್ಯಾರ್ಥಿಗಳು ಕಾಡಿನ ರಸ್ತೆ ಮೂಲಕ ಹೋಗಬೇಗಿದೆ. ಗ್ರಾಮಕ್ಕೆ ಶನಿವಾರದಂದು ಬಸ್ ಬರುವುದಿಲ್ಲ. ಇದರಿಂದಾಗಿ ಕೆಲವರು ಶಾಲೆಗೆ ಅಂದು ರಜೆ ಹಾಕಿದರೆ ಕೆಲ ವಿದ್ಯಾರ್ಥಿಗಳು ಭಯದಲ್ಲೇ ಕಾಡಿನ ರಸ್ತೆ ಮೂಲಕ ಶಾಲೆಗೆ ನಡೆದುಕೊಂಡು ಹೋಗಿಬರಬೇಕಾಗಿದೆ. ಸೈಕಲ್ ಕೊಟ್ಟಿದ್ದರೆ ಅನುಕೂಲ ಆಗುತ್ತಿತ್ತು ಎನ್ನುತ್ತಾರೆ ಗ್ರಾಮಸ್ಥರು.
‘ನಡೆದುಕೊಂಡು ಹೋಗದೆ ವಿಧಿ ಇಲ್ಲ’
ಕುಂದಗೋಳ: ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಹೊಂದಿರುವ ತಾಲ್ಲೂಕು ಕುಂದಗೋಳ. ಇಲ್ಲಿನ ಚಿಕ್ಕನರ್ತಿ ಮುಳ್ಳೊಳ್ಳಿ ಯಾರಿನಾರಾಯಣಪುರ ಬಸಾಪುರ ಬೆನಕನಹಳ್ಳಿ ಚಿಕ್ಕಗುಂಜಳ ಚಿಕ್ಕ ಹರಕುಣಿ ಇನಾಮಕೊಪ್ಪ ನೆಲಗುಡ್ಡ ದೇವನೂರು ಬಿಳೇಬಾಳ ಗ್ರಾಮಗಳಲ್ಲಿ ಪ್ರೌಢಶಾಲೆಗಳಿಲ್ಲ. ಇಲ್ಲಿನ ವಿದ್ಯಾರ್ಥಿಗಳು ಹಿರೇನರ್ತಿ ಹಿರೇಗುಂಜಳ ಮತ್ತಿಗಟ್ಟಿ ಇಂಗಳಗಿ ಬೆಟದೂರಿನ ಪ್ರೌಢಶಾಲೆಗಳಿಗೆ ನಡೆದುಕೊಂಡೇ ಹೋಗುತ್ತಾರೆ. ‘ನಮ್ಮೂರಲ್ಲಿ ಶಾಲೆ ಇಲ್ಲ. ವಿಧಿ ಇಲ್ಲದೆ ಮಕ್ಕಳನ್ನು ಹಿರೇನರ್ತಿ ಶಾಲೆಗೆ ಸೇರಿಸಲಾಗಿದೆ. ಪ್ರತಿದಿನ ಶಾಲೆಗೆ ಬಿಡುವಂತಾಗಿದೆ. ಸೈಕಲ್ ಕೊಟ್ಟಿದ್ದರೆ ಅವರೇ ಶಾಲೆಗೆ ಹೋಗಿಬರುತ್ತಿದ್ದರು’ ಎನ್ನುತ್ತಾರೆ ದೇವನೂರಿನ ಎಂ.ರಮೇಶ.
ಮಳೆ ಬಂದ್ರೆ ಶಾಲೆಗೆ ಗೈರು!
ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನಲ್ಲಿ 48 ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. 49 ಅನುದಾನಿತ ಶಾಲೆಗಳಿವೆ. 8ನೇ ತರಗತಿಯಲ್ಲಿ 3355 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ‘ಶಿಬಾರಗಟ್ಟಿ ಹನುಮನಕೊಪ್ಪ ಹನುಮನಾಳ ಕಲ್ಲೆ ಲಕಮಾಪೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಗಳು ಮಾತ್ರ ಇವೆ. ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಉಪ್ಪಿನಬೆಟಗೇರಿ ಗರಗ ತಡಕೋಡ ಕೊಟಬಾಗಿ ನರೇಂದ್ರ ಯಾದವಾಡ ಕರಡಿಗುಡ್ಡ ಅಮ್ಮಿನಬಾವಿ ಹೆಬ್ಬಳ್ಳಿ ಶಾಲೆಗಳಿಗೆ ನಡೆದುಕೊಂಡೇ ಹೋಗುತ್ತಾರೆ. ಇವರ ಅನುಕೂಲಕ್ಕಾಗಿ ಸೈಕಲ್ ಒದಗಿಸಲು ಆಯಾ ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಯವರು ಒತ್ತಾಯಿಸುತ್ತಿದ್ದು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ’ ಎನ್ನುತ್ತಾರೆ ಧಾರವಾಡ ಗ್ರಾಮೀಣ ಶಿಕ್ಷಣಾಧಿಕಾರಿ ಆರ್.ಎಮ್.ಸದಲಗಿ.
2019–20ರಲ್ಲಿ ಜಿಲ್ಲೆಯ ಎಲ್ಲ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್‌ಗಳನ್ನು ವಿತರಿಸಲಾಗಿದೆ. ಬಳಿಕ ಯೋಜನೆ ಸ್ಥಗಿತಗೊಂಡಿದ್ದು ಪುನರಾರಂಭಿಸುವ ಕುರಿತು ಶಿಕ್ಷಣ ಇಲಾಖೆ ಮಾಹಿತಿ ನೀಡಿಲ್ಲ.ಎಸ್.ಎಸ್.ಕೆಳದಿಮಠ, ಡಿಡಿಪಿಐ, ಧಾರವಾಡ
ಮುಳ್ಳೊಳ್ಳಿಯಿಂದ ಯರಗುಪ್ಪಿ ಶಾಲೆಗೆ ಹೋಗುತ್ತೇನೆ. ನಡುವೆ ಹಳ್ಳ ಇವೆ. ರಸ್ತೆಯೂ ಅಷ್ಟು ಸರಿಯಿಲ್ಲ. ನಡೆದುಕೊಂಡು ಹೋಗಲು ಭಯವಾಗುತ್ತದೆಚಂದನಾ ಹಿರೇಮಠ, ವಿದ್ಯಾರ್ಥಿನಿ
ಪೂರಕ ಮಾಹಿತಿ: ರಾಜಶೇಖರ ಸುಣಗಾರ, ರಮೇಶ ಓರಣಕೆರೆ, ಬಸನಗೌಡ ಪಾಟೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.