ಹುಬ್ಬಳ್ಳಿ: ರೈತರು ಉತ್ತಮ ಇಳುವರಿ ಪಡೆಯಲು ಹಾಗೂ ಹವಾಮಾನ ವೈಪರೀತ್ಯಗಳನ್ನು ಮುಂಚಿತವಾಗಿ ತಿಳಿದುಕೊಳ್ಳಲು ‘ಫಸಲ್ ಸ್ಮಾರ್ಟ್ ಫಾರ್ಮಿಂಗ್’ ಕೃಷಿಯಂತ್ರ ನೆರವಾಗಿದೆ.
ಹೊಲದಲ್ಲಿ ಬೆಳೆಯುವ ನಿರ್ದಿಷ್ಟವಾದ ಒಂದು ಬೆಳೆಯ ಬಗ್ಗೆ ನಿಖರವಾದ ಎಲ್ಲ ರೀತಿಯ ಮಾಹಿತಿಯನ್ನು ‘ಫಸಲ್’ ನೀಡುತ್ತದೆ. ಇದನ್ನು ರೈತರು ತಮ್ಮ ಹೊಲದಲ್ಲಿ ಅಳವಡಿಸಿಕೊಂಡರೆ ಕೀಟ ನಿಯಂತ್ರಣ ಮತ್ತು ಮುಂಬರುವ ಬೆಳೆರೋಗಗಳ ಬಗ್ಗೆ ಮುನ್ನೆಚ್ಚರಿಕೆ, ಬೆಳೆಗೆ ಬೇಕಾದ ನೀರಿನ ಪ್ರಮಾಣ, ಮಳೆ ಮುನ್ಸೂಚನೆ, ಬೆಳೆ ಯಾವ ಹಂತದಲ್ಲಿ ಎಂಬ ಮಾಹಿತಿ ಹಾಗೂ ಕೀಟನಾಶಕ ಸಿಂಪಡಣೆ ಮಾಡುವ ಪ್ರಮಾಣವನ್ನು ತಿಳಿಸುತ್ತದೆ.
ಇದರಿಂದ ರೈತರು ಅಗತ್ಯವಿದ್ದಷ್ಟು ನೀರು, ಕೀಟನಾಶಕ ಬಳಸಿ ಉತ್ತಮ ಇಳುವರಿ ಪಡೆಯಬಹುದು ಹಾಗೂ ಬೆಳೆಗೆ ತಗುಲುವ ರೋಗದ ಬಗ್ಗೆ ಮೊದಲೇ ಮಾಹಿತಿ ತಿಳಿದುಕೊಂಡು ತಮ್ಮ ಬೆಳೆ ರಕ್ಷಿಸಿಕೊಳ್ಳಬಹುದು.
‘ಫಸಲ್ ಸೋಲಾರ್ ಆಧಾರಿತ ಯಂತ್ರವಾಗಿದ್ದು, ಗಾಳಿಯ ವೇಗ, ದಿಕ್ಕು, ತಾಪಮಾನ ಸಂದೇಶ, ಎಲೆಯ ತೇವಾಂಶ ಬಗ್ಗೆ ತಿಳಿಸುತ್ತದೆ. ಇದು 12 ಸೆನ್ಸಾರ್, 12 ಪ್ಯಾರಾಮೀಟರ್ ಹಾಗೂ ಹೈವೊಟಿನ್ ಸಿಮ್ ಹೊಂದಿದ್ದು, ಬೆಳೆಯ ಬಗ್ಗೆ ಗಂಟೆಗೊಮ್ಮೆ ಮಾಹಿತಿ ಸಂಗ್ರಹಿಸಿ ರೈತರಿಗೆ ರವಾನಿಸುತ್ತದೆ’ಎಂದು ಕರ್ನಾಟಕ ಏರಿಯಾ ಮ್ಯಾನೇಜರ್ ಪುಟ್ಟ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇದರಿಂದ ಮಣ್ಣಿನ ತೇವಾಂಶ, ತಾಪಮಾನ ಹಾಗೂ ಸಂವೇದಕವನ್ನು ತಿಳಿದುಕೊಳ್ಳಬಹುದು. ಹೊಲದಲ್ಲಿ ಯಂತ್ರವನ್ನು ಅಳವಡಿಸಿದ ನಂತರ ಮೊಬೈಲ್‌ನಲ್ಲಿ ’ಫಸಲ್‘ ಆ್ಯಪ್ ಹಾಕಿಕೊಳ್ಳಬೇಕು. ಇದು 14 ದಿನಗಳ ಹವಾಮಾನ ಮುನ್ಸೂಚನೆಯನ್ನು ನಿತ್ಯ ಪಾಡ್‌ಕಾಸ್ಟ್ ರೂಪದಲ್ಲಿ ರೈತರಿಗೆ ತಿಳಿಸುತ್ತದೆ. ಇದು ಪ್ರತಿ ಗಂಟೆಗೊಮ್ಮೆ ಬೆಳೆ ಬಗ್ಗೆ ಮಾಹಿತಿ ನೀಡುತ್ತದೆ’ ಎಂದು ಅವರು ಮಾಹಿತಿ ನೀಡಿದರು.
‘ಎಲ್ಲ ರೀತಿಯ ಬೆಳೆಗೂ ಇದು ಸಹಕಾರಿಯಾಗಿದೆ. ಒಂದು ವೇಳೆ ಬೆಳೆ ಬದಲಾಯಿಸಿದ್ದಲ್ಲಿ ಇದೇ ಯಂತ್ರದಲ್ಲಿ ಸಾಫ್ಟ್‌ವೇರ್ ಅಪ್ಡೇಟ್ ಮಾಡಲಾಗುವುದು. ಇದಕ್ಕಾಗಿ ರೈತರು ಹಣ ವ್ಯಯಿಸಬೇಕಿಲ್ಲ. ಒಂದು ವರ್ಷದವರೆಗೆ ಉಚಿತ ಸರ್ವಿಸ್ ಇರುತ್ತದೆ. ಸಾಮಾನ್ಯವಾಗಿ ಆರು ತಿಂಗಳಿಗೊಮ್ಮೆ ಬೆಳೆ ಬರುವುದರಿಂದ ರೈತರು ಒಂದು ಬೆಳೆಯ ನಂತರ ಬಿಡುವು ಕೊಟ್ಟು, ಪುನಃ ಬೆಳೆ ಬಂದಾಗ ಸರ್ವಿಸ್ ಮಾಡಿಸಿಕೊಳ್ಳಬಹುದು’ ಎಂದು ಅವರು ತಿಳಿಸಿದರು.
ನಿತ್ಯ ಪಾಡ್‌ಕಾಸ್ಟ್ ಮೂಲಕ ರೈತರಿಗೆ ಮಾಹಿತಿ ಬೆಳೆಯ ವಿವಿಧ ಹಂತ ತಿಳಿಯಲು ನೆರವು ನೀರು, ಕೀಟನಾಶಕ ಉಳಿಕೆ
₹ 47 ಸಾವಿರ ಬೆಲೆ ನಿಗದಿ ‘2018ರಲ್ಲಿ ಬೆಂಗಳೂರಿನಲ್ಲಿ ‘ಫಸಲ್ ಸ್ಮಾರ್ಟ್ ಫಾರ್ಮಿಂಗ್’ ಯಂತ್ರ ಪರಿಚಯಿಸಲಾಯಿತು. ಪ್ರಸ್ತುತ ಇಡೀ ದೇಶದಾದ್ಯಂತ ಮಾರಾಟ ಮಾಡಲಾಗುತ್ತಿದೆ. ₹47 ಸಾವಿರ ಇದರ ಬೆಲೆಯಾಗಿದ್ದು ಕೃಷಿಮೇಳದಲ್ಲಿ ಬುಕ್ಕಿಂಗ್ ಮಾಡುವವರಿಗೆ ₹40ಸಾವಿರಕ್ಕೆ ನೀಡಲಾಗುತ್ತಿದೆ’ ಎಂದು ಕೃಷಿಮೇಳದಲ್ಲಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಮನೋಜ್.ಕೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.