ADVERTISEMENT

ಹುಬ್ಬಳ್ಳಿ: ‘ಈದ್ಗಾ’ದಲ್ಲಿ 11 ದಿನ ಉತ್ಸವ, ಎರಡು ಪೆಂಡಾಲ್‌’

ಪೂರ್ವಭಾವಿ ಸಭೆ: ಆ. 12ರಂದು ಪಾಲಿಕೆಗೆ ಮನವಿ, ಗಣಹೋಮ ನಡೆಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2023, 16:14 IST
Last Updated 16 ಆಗಸ್ಟ್ 2023, 16:14 IST
ಹುಬ್ಬಳ್ಳಿಯ ಮೂರುಸಾವಿರಮಠದ ಮೂಜಗಂ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಹನುಮಂತ ನಿರಂಜನ ಮಾತನಾಡಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಮೂರುಸಾವಿರಮಠದ ಮೂಜಗಂ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಹನುಮಂತ ನಿರಂಜನ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ಗಾ ಮೈದಾನ) 11 ದಿನ ಗಣೇಶೋತ್ಸವ ಆಚರಣೆ, ಎರಡು ಪೆಂಡಾಲ್‌ಗಳ ನಿರ್ಮಾಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಮಹಾನಗರ ಪಾಲಿಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲು ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ನಿರ್ಣಯ ತೆಗೆದುಕೊಂಡಿತು.

ನಗರದ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಉತ್ಸವ ಸಮಿತಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಪೂರ್ವಭಾವಿ ಸಭೆ ಆಯೋಜಿಸಿತ್ತು. ಈ ಮೈದಾನದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಮೂರು ದಿನ ಅವಕಾಶ ದೊರಕಿತ್ತು. ಪ್ರಸ್ತುತ ವರ್ಷ 11 ದಿನ ಅವಕಾಶಕ್ಕೆ ಅನುಮತಿ ಪಡೆದು, ಪ್ರತಿದಿನ ಸಂಜೆ ಎರಡರಿಂದ ಮೂರು ತಾಸು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಬೇಕು. ಎರಡು ಪೆಂಡಾಲ್‌ಗಳನ್ನು ಹಾಕಿ, ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಬೇಕು. ಇದಕ್ಕೆ ಅನುಮತಿ ಪಡೆಯಲು ಆ. 21ರಂದು ಬೆಳಿಗ್ಗೆ 11ಕ್ಕೆ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಮಿತಿ ಸಂಚಾಲಕ ಹನುಮಂತ ನಿರಂಜನ, ‘ಈ ಸ್ಥಳದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು ಎಂದು ನಾವು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದೆವು. ಕಳೆದ ವರ್ಷ ನಮ್ಮ ಹೋರಾಟಕ್ಕೆ ಜಯ ಸಿಕ್ಕಿತು’ ಎಂದರು.

ADVERTISEMENT

‘ಮೊದಲ ವರ್ಷ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಕೋರಿ ಐದು ಅರ್ಜಿಗಳು ಸಲ್ಲಿಕೆಯಾಗಿದ್ದವು. ಗಜಾನನ ಉತ್ಸವ ಮಹಾಮಂಡಳಿಗೆ ಅವಕಾಶ ನೀಡಲಾಗಿತ್ತು. ಎಲ್ಲ ಸಮಿತಿಗಳು ಒಂದುಗೂಡಿ ಮೂರುದಿನ ಸಂಭ್ರಮದಿಂದ ಉತ್ಸವ ಆಚರಿಸಿದ್ದವು. ಈ ಬಾರಿಯೂ ನಾವು ಮನವಿ ಸಲ್ಲಿಸೋಣ. ಯಾರಿಗೇ ಅನುಮತಿ ನೀಡಿದರೂ, ಒಂದುಗೂಡಿ ಕಳೆದ ವರ್ಷಕ್ಕಿಂತ ಅದ್ಧೂರಿಯಾಗಿ ಹಬ್ಬ ಆಚರಿಸಬೇಕು. ಸಾಧ್ಯವಾದರೆ ಐದು ಸಮಿತಿಗಳನ್ನು ಸೇರಿಸಿ ಒಂದೇ ಒಕ್ಕೂಟ ಮಾಡಿಕೊಂಡು ಸೌಹಾರ್ದಯುತವಾಗಿ ಹಬ್ಬ ಆಚರಿಸೋಣ. ಗಣಹೋಮ, ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ, ಪ್ರತಿಭಾವಂತರಿಗೆ ಸನ್ಮಾನ ಮಾಡುವ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಬೇಕು’ ಎಂದು ತಿಳಿಸಿದರು.

ಸಮಿತಿ ಸದಸ್ಯೆ ರಾಜಶ್ರೀ ಜಡಿ, ‘ಕಳೆದ ವರ್ಷದಂತೆ ಈ ವರ್ಷವೂ ಉತ್ಸವ ಶಾಂತಿಯಿಂದ ನಡೆಯಬೇಕು. ಹತ್ತಾರು ವಿಷಯಗಳನ್ನು ಉಲ್ಲೇಖಿಸಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸುವ ಬದಲು, ಸ್ಪಷ್ಟವಾಗಿ ಒದೇ ವಿಷಯ ನಮೂದಿಸಬೇಕು. ಒಂದು ಪೆಂಡಾಲ್‌ಗೆ ಅನುಮತಿ ಕೇಳಿದರೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಎರಡು ಪೆಂಡಾಲ್‌ ಹಾಕಲು ಅನುಮತಿ ನೀಡುವಂತೆ ಆಗ್ರಹಿಸಬೇಕು. ಮನವಿ ಸಲ್ಲಿಕೆ ಸಂದರ್ಭದಲ್ಲಿ ಎಲ್ಲ ಉತ್ಸವ ಸಮಿತಿಗಳನ್ನು ಆಹ್ವಾನಿಸಬೇಕು’ ಎಂದು ಹೇಳಿದರು.

ಚಂದ್ರಕಾಂತ ಬಸವ, ಸಾಗರ ಪವಾರ, ಪವನ ಕಾಟವೆ, ಅರುಣ ಲದ್ವಾ, ಹರೀಶ ಜರತಾರಘರ, ಸಾಯಿಪ್ರಸಾದ ಕಲಬುರ್ಗಿ, ವಿಜಯ ಕಬಾಡಿ, ಶ್ರೀನಿವಾಸ ಡಿ., ಕೃಷ್ಣರಾಜ ಕಾಟವೆ, ವಿನಾಯಕ ಪವಾರ ಪಾಲ್ಗೊಂಡಿದ್ದರು.

ಆ.22ರಂದು ಮತ್ತೊಮ್ಮೆ ಸಭೆ

ಕಳೆದ ವರ್ಷ ಗಣೇಶ ಹಬ್ಬದ ಮುನ್ನಾದಿನದ ರಾತ್ರಿ 11.30ಕ್ಕೆ ಪಾಲಿಕೆಯಿಂದ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ದೊರಕಿತ್ತು. ಪೂರ್ವಸಿದ್ಧತೆಯಿಲ್ಲದೆ ಗಡಿಬಿಡಿಯಲ್ಲಿ ಹಬ್ಬವನ್ನು ಆಚರಿಸಲಾಗಿತ್ತು. ಈ ವರ್ಷ ಪಾಲಿಕೆ 15 ದಿನ ಮೊದಲೇ ಯಾರಿಗೆ ಎಂದು ಅನುಮತಿ ನೀಡಿದರೆ ಸಿದ್ಧತೆ ಮಾಡಿಕೊಳ್ಳಬಹುದು. ಮನವಿ ಸಲ್ಲಿಸುವ ಸಂದರ್ಭ 100 ರಿಂದ 150 ಮಂದಿಯಾದರೂ ಇರಬೇಕು. ಒಂದೇ ವಿನ್ಯಾಸದ ಕರಪತ್ರ ಸಿದ್ಧಪಡಿಸಿ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಬೇಕು. ಆ. 22ರಂದು ಮತ್ತೊಮ್ಮೆ ಸಭೆ ನಡೆಸಿ ಕಾರ್ಯಕ್ರಮದ ರೂಪರೇಷೆ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.