ADVERTISEMENT

ಹುಬ್ಬಳ್ಳಿ| ಗ್ರಾಹಕರಿಗೆ ತಲೆನೋವಾದ ‘ಮನೆ ಮನೆಗೆ ಅನಿಲ ಸಂಪರ್ಕ’

ಪೈಪ್ ಮೂಲಕ ಪೂರೈಕೆ: ಮೀಟರ್ ದೋಷ, ಅಸಮರ್ಪಕ ನಿರ್ವಹಣೆ ಸಮಸ್ಯೆ

ಗಣೇಶ ವೈದ್ಯ
Published 16 ಫೆಬ್ರುವರಿ 2023, 19:30 IST
Last Updated 16 ಫೆಬ್ರುವರಿ 2023, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹುಬ್ಬಳ್ಳಿ: ಸಾಮಾನ್ಯ ಅನಿಲ ಸಿಲಿಂಡರ್‌ಗಿಂತಲೂ ಖರ್ಚು ಕಡಿಮೆ ಆಗಲಿದೆ, ಪದೇಪದೇ ಆರ್ಡರ್ ಮಾಡುವುದು, ಭಾರ ಎತ್ತುವ ಜಂಜಾಟ ಇಲ್ಲ ಎಂಬ ಭರವಸೆಯಿಂದ ಇಂಡಿಯನ್ ಆಯಿಲ್– ಅದಾನಿ ಗ್ಯಾಸ್ ಪ್ರೈವೇಟ್ ಲಿಮಿಟೆಡ್ (ಐಒ–ಎಜಿಪಿಎಲ್) ಪೈಪ್‌ಲೈನ್ ಮೂಲಕ ಪೂರೈಸುವ ಅನಿಲ ಸಂಪರ್ಕ ಪಡೆದ ಗ್ರಾಹಕರಿಗೆ ಅದು ತಲೆನೋವಾಗಿ ಪರಿಣಮಿಸಿದೆ. ನಿಯಮಿತವಾಗಿ ಬಿಲ್ ನೀಡದಿರುವುದು, ಬಳಕೆಗಿಂತ ಹೆಚ್ಚಾಗಿ ಬಿಲ್ ಬರುತ್ತಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ.

ನಗರದ ತೋಳನಕೆರೆ ಹಿಂಭಾಗದ ಮಾನಸಗಿರಿ ಲೇಔಟ್‌ನಲ್ಲಿ ಅನಿಲ ಸಂಪರ್ಕ ನೀಡಿ 8–9 ತಿಂಗಳಾದರೂ ಮೀಟರ್ ರೀಡಿಂಗ್‌ಗೆ ಬರದಿರುವುದರಿಂದ ಒಮ್ಮೆಲೇ ಎಷ್ಟು ಬಿಲ್ ಬರುತ್ತದೆ ಎಂದು ಅಂದಾಜು ಸಿಗದೆ ಅಲ್ಲಿನ ನಿವಾಸಿಗಳು ಚಿಂತೆಗೀಡಾಗಿದ್ದರು. ಬರೋಬ್ಬರಿ 9 ತಿಂಗಳ ನಂತರ ಬಿಲ್ ಬಂದಾಗ ದಂಗಾಗಿದ್ದಾರೆ.

ಕೆಲವರಿಗೆ 8–9 ತಿಂಗಳ ಬಳಕೆಗೆ ₹ 5 ಸಾವಿರದಿಂದ ₹ 6 ಸಾವಿರದವರೆಗೆ ಬಿಲ್ ಬಂದಿದೆ. ಅಷ್ಟು ದೀರ್ಘಾವಧಿಯ ಬಳಕೆಗೆ ಇದು ಸರಿ ಇರಬಹುದು ಎಂದು ಅವರು ಸುಮ್ಮನಾಗಿದ್ದರೆ, ಇನ್ನು ಕೆಲವರಿಗೆ ₹ 22 ಸಾವಿರ, ₹ 52 ಸಾವಿರ ಹೀಗೆ ನಿರೀಕ್ಷೆ ಮೀರಿ ಬಿಲ್ ಬಂದಿದೆ. ಇದನ್ನು ಸರಿಪಡಿಸಿಕೊಡುವಂತೆ ಕೆಲಸ ಕಾರ್ಯ ಬಿಟ್ಟು, ಕಂಪನಿಯ ಕಚೇರಿಗೆ ಅಲೆದಾಡುವಂತಾಗಿದೆ.

ADVERTISEMENT

‘ಒಮ್ಮೆಲೆ 8–9 ತಿಂಗಳುಗಳಿಗೆ ಸೇರಿಸಿ ಬಿಲ್ ಕೊಟ್ಟರೆ ಅದನ್ನು ಭರಿಸುವುದು ನಮಗೆ ಕಷ್ಟವಾಗುತ್ತದೆ. ಮೀಟರ್ ದೋಷದಿಂದಾಗಿ ಬಳಸಿದ್ದಕ್ಕಿಂತ ಹೆಚ್ಚು ಬಿಲ್ ಬಂದಿದೆ. ಅದನ್ನು ಸರಿಪಡಿಸುವಂತೆ ಲಿಖಿತವಾಗಿ ದೂರು ನೀಡಿ ತಿಂಗಳಾದರೂ ಕಂಪನಿಯವರು ಸರಿಯಾಗಿ ಸ್ಪಂದಿಸುತ್ತಿಲ್ಲ. ನಿಯಮಿತವಾಗಿ ನಿರ್ವಹಣೆ, ಮೇಲುಸ್ತುವಾರಿ ನಡೆಸುತ್ತಿಲ್ಲ’ ಎಂದು ಮಾನಸಗಿರಿ ಲೇಔಟ್ ನಿವಾಸಿ ಕೇಶವರಾವ್ ದೇಶಪಾಂಡೆ ಆರೋಪಿಸಿದರು.

‘ಲೀಕೇಜ್ ಕಾರಣ ನಮ್ಮ ಮನೆಯ ಬಾಡಿಗೆದಾರರಿಗೆ ₹ 20 ಸಾವಿರಕ್ಕಿಂತ ಹೆಚ್ಚಿನ ಬಿಲ್ ಬಂದಿದೆ. ದೂರು ನೀಡಿದಾಗ ಬಂದು ಲೀಕೇಜ್ ಸರಿಪಡಿಸಿದ್ದಾರೆ. ಅದಾಗಿ ತಿಂಗಳಾದರೂ ಸರಿಯಾದ ಬಿಲ್ ನೀಡಿಲ್ಲ. ಸುದೀರ್ಘ ಅವಧಿಗೆ ಬಿಲ್ ಕೊಡದೇ ಇದ್ದರೆ, ಬಾಡಿಗೆದಾರರು ಬದಲಾಗುವ ಸಂದರ್ಭದಲ್ಲಿ ಅವರಿಂದ ಎಷ್ಟು ಹಣ ಪಡೆಯಬೇಕು ಎಂಬುದು ಗೊಂದಲವಾಗುತ್ತದೆ’ ಎಂದರು.

ಇದೇ ಪ್ರದೇಶದಲ್ಲಿ ಅನಿಲ ಸಂಪರ್ಕ ಪಡೆದ ಇನ್ನೊಬ್ಬ ಗ್ರಾಹಕರದ್ದು ಮತ್ತೊಂದು ಸಮಸ್ಯೆ. ಅವರು ಅನಿಲ ಸಂಪರ್ಕ ಪಡೆದಿದ್ದರೂ ಬಳಸುತ್ತಿಲ್ಲ. ಅವರು ದೆಹಲಿಯಲ್ಲಿ ಇರುತ್ತಾರೆ. ಇಲ್ಲಿ ಮನೆ ಖಾಲಿ ಇದೆ. ಆದರೆ ಮನೆಗೆ ಬಂದು ಮೀಟರ್ ರೀಡ್ ಮಾಡದೆಯೇ ಅಂದಾಜಿನ ಮೇಲೆ ₹ 10 ಸಾವಿರ ಮೊತ್ತಕ್ಕೆ ಬಿಲ್ ನೀಡಿದ್ದಾರೆ. ನಂತರ ಕಚೇರಿಗೆ ಹೋಗಿ ವಿಚಾರಿಸಿದಾಗ ಸಮಜಾಯಿಷಿ ನೀಡಿ, ₹ 2 ಸಾವಿರದ ಬಿಲ್ ಕೊಟ್ಟು ಕಳುಹಿಸಿದ್ದಾರೆ. ಬಿಲ್ ಮಾಡಲು ಏಜೆನ್ಸಿಗಳಿಗೆ ಹೊರಗುತ್ತಿಗೆ ನೀಡಲಾಗಿದೆ. ಆದರೆ ಏಜೆನ್ಸಿಯ ಸಿಬ್ಬಂದಿಗೆ ಕೆಲವು ಮೀಟರ್‌ಗಳು ಎಲ್ಲಿವೆ ಎಂಬ ಮಾಹಿತಿಯೇ ಇಲ್ಲ.

***

‘ಗ್ರಾಹಕರಿಗೆ ಹಣ ವಾಪಸ್’

‘ನಮ್ಮ ಸಿಸ್ಟಂನಲ್ಲಿ ಮೀಟರ್ ಸಂಖ್ಯೆ ದಾಖಲಾಗದ ಕಾರಣ ಬಿಲ್ ಕೊಟ್ಟಿರಲಿಲ್ಲ. ಒಮ್ಮೆ ಬಿಲ್ ಬಂದ ನಂತರ, ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ತಪ್ಪದೇ ಬಿಲ್ ಬರುತ್ತದೆ. ಎಷ್ಟು ಯೂನಿಟ್ ಬಳಕೆ ಆಗಿದೆ ಎಂದು ನಮೂದಿಸುವ ಮೂಲಕ ಸ್ವತಃ ಗ್ರಾಹಕರೇ ಬಿಲ್ ಪಡೆದುಕೊಂಡು, ಭರಿಸುವ ವ್ಯವಸ್ಥೆಯೂ ಮುಂದೆ ಬರಲಿದೆ’ ಎಂದು ಯೋಜನೆಯ ಉಪ ಪ್ರಧಾನ ವ್ಯವಸ್ಥಾಪಕ ವಿನೋದ್ ಪಾಪಲ್ ಮಾಹಿತಿ ನೀಡಿದರು.

‘ಒಂದು ವೇಳೆ ನಿಗದಿಗಿಂತ ಹೆಚ್ಚು ಬಿಲ್ ಬಂದಿದ್ದರೆ, ಮುಂದಿನ ಬಿಲ್ ನೀಡುವ ವೇಳೆ ಅದನ್ನು ಸರಿಪಡಿಸಲಾಗುವುದು ಮತ್ತು ಹೆಚ್ಚುವರಿ ಭರಿಸಿದ್ದ ಹಣವನ್ನು ಗ್ರಾಹಕರಿಗೆ ಮರಳಿಸಲಾಗುವುದು. ಗ್ರಾಹಕರಲ್ಲಿ ಆತಂಕ ಬೇಡ’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.