ADVERTISEMENT

ಉಪ್ಪಿನಬೆಟಗೇರಿ: ಗೌರಿ ಹುಣ್ಣಿಮೆ ಸಂಭ್ರಮ ಇಂದು

ಸಕ್ಕರೆ ಆರತಿ ಬೆಳಗುವ ಹೆಣ್ಣ ಮಕ್ಕಳಿಗೆ ಉಡುಗೋರೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 4:40 IST
Last Updated 15 ನವೆಂಬರ್ 2024, 4:40 IST
ಉಪ್ಪಿನಬೆಟಗೇರಿ ಗ್ರಾಮದ ಗೌರಿಮಠದವರ ಮನೆಯಲ್ಲಿ ಪ್ರತಿಷ್ಠಾಪಿಸುವ ನಂದೀಶ, ಪರಮೇಶ್ವರ, ಗೌರಮ್ಮನ ಮೂರ್ತಿ (ಸಂಗ್ರಹ ಚಿತ್ರ)
ಉಪ್ಪಿನಬೆಟಗೇರಿ ಗ್ರಾಮದ ಗೌರಿಮಠದವರ ಮನೆಯಲ್ಲಿ ಪ್ರತಿಷ್ಠಾಪಿಸುವ ನಂದೀಶ, ಪರಮೇಶ್ವರ, ಗೌರಮ್ಮನ ಮೂರ್ತಿ (ಸಂಗ್ರಹ ಚಿತ್ರ)   

ಉಪ್ಪಿನಬೆಟಗೇರಿ: ಗ್ರಾಮದಲ್ಲಿ ಗೌರಿ ಹುಣ್ಣಿಮೆಯನ್ನು ಶುಕ್ರವಾರ ಆಚರಿಸಲು ಹೆಣ್ಣುಮಕ್ಕಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಶೀಗೆ ಹುಣ್ಣಿಮೆಯಂದು ಸಣ್ಣ ಗೌರಿ ಹಬ್ಬ, ಗೌರಿ ಹುಣ್ಣಿಮೆಗೆ ದೊಡ್ಡ ಗೌರಿ ಹಬ್ಬವೆಂದು ಎರಡು ಬಾರಿ ಆಚರಿಸುವುದು ಇಲ್ಲಿಯ ವಾಡಿಕೆ. ಹೆಣ್ಣು ಮಕ್ಕಳು ಸಕ್ಕರೆ ಆರತಿ ತಟ್ಟೆಯಲ್ಲಿಟ್ಟುಕೊಂಡು ಗೌರಿಗೆ ಬೆಳಗುತ್ತಾರೆ. ಆರತಿ ಬೆಳಗಿದ ಹೆಣ್ಣು ಮಕ್ಕಳಿಗೆ ಅಣ್ಣ-ತಮ್ಮಂದಿರು, ಮಾವಂದಿರು ಕಾಣಿಕೆಯಾಗಿ ಹಣ, ಉಡುಗೊರೆಯನ್ನು ನೀಡುವ ಸಂಪ್ರದಾಯ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಇದೆ.

ಸಕ್ಕರೆ ಪಾಕದಿಂದ ವಿವಿಧ ರೀತಿಯ ಅಚ್ಚುಗಳಿಂದ ತಯಾರಿಸಿದ ನವಿಲು, ಆನೆ, ಒಂಟೆ, ಗೋಪುರ, ಬಸವ, ರಥ, ಶಿವ ಪಾರ್ವತಿ, ಕೃಷ್ಣನ ಆಕಾರಗಳ ಬಣ್ಣ ಬಣ್ಣದ ಬೊಂಬೆಗಳನ್ನು ವ್ಯಾಪಾರಿಗಳು ಅಂಗಡಿಯಲ್ಲಿ ಮಾರಾಟ ಮಾಡುವುದು ಕಂಡು ಬರುತ್ತದೆ.

ADVERTISEMENT

ಗೌರಿ ಹುಣ್ಣಿಮೆಯ ದಿನದಂದು ಗೌರಿಮಠ, ತಿಗಡಿಮಠ, ವಿರಕ್ತಮಠ, ಗಣಪತಿ ಗುಡಿ ಹಾಗೂ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗೌರಮ್ಮಳ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಮೂರು, ಐದು, ಏಳು ದಿನಗಳವರೆಗೆ ಗೌರಿಗೆ ಸೀರೆ ಉಡಿಸಿ ಸಿಂಗರಿಸಿ, ಹೂವು, ಹಣ್ಣು, ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಗೌರಿಯು ಹೊಳೆಗೆ ಹೋಗುವ ದಿನ ಓಣಿಯ ಮನೆಗಳಿಗೆ ಹೇಳಿ ಬರುತ್ತಾರೆ. ಅಂದೇ ಮನೆ, ಅಂಗಡಿಗೆ ಹೋಗಿ ಹಣ ಹಾಗೂ ಕಾಳು–ಕಡಿಗಳನ್ನು ಸಂಗ್ರಹಿಸುತ್ತಾರೆ.

ಭಜನಾ ಮಂಡಳಿಯವರು ಪೂಜಾ ಸಾಮಗ್ರಿ, ಗುಗ್ಗಳ ಕೊಡ, ಬಟ್ಟೆ ಹಾಗೂ ಪೂಜಾ ಸಾಮಗ್ರಿ ಖರೀದಿಸುತ್ತಾರೆ. ಓಣಿಯ ಮನೆಯವರು ನೈವೇದ್ಯ ಮಾಡಿ ಗೌರಿಗೆ ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡು ಹೋಗುತ್ತಾರೆ.

ರಾತ್ರಿ ವೇಳೆ ಓಣಿಯ ಜನರು ಗುಗ್ಗಳ ಕೊಡ ಹೊತ್ತುಕೊಂಡು ಭಜನೆ ಮಾಡುತ್ತ ಹೊಳೆಗೆ ತೆರಳಿ ಪೂಜೆ ಸಲ್ಲಿಸಿ ಬಿಟ್ಟು ಬರುವ ಸಂಪ್ರದಾಯವಿದೆ. ನಂತರ ಪಳಾರ ರೂಪದಲ್ಲಿ ಮನೆ, ಅಂಗಡಿಗಳಿಗೆ ಪ್ರಸಾದ ಹಂಚುವ ಪದ್ದತಿ ಇದೆ ಎಂದು ಮಡಿವಾಳಪ್ಪ ಹೊಸುರ ಹೇಳಿದರು.
 
ಉಪ್ಪಿನಬೆಟಗೇರಿ ಗ್ರಾಮದ ಅಪ್ಪಯ್ಯ ಎಂಬುವವರು ಹೊಳೆಗೆ ಹೋಗಿದ್ದಾಗ ಗೌರಿ, ಪರಮೇಶ್ವರ, ನಂದಿ ಮೂರ್ತಿಗಳು ದೊರಕಿದ್ದವು. ಅಂದಿನಿಂದ ಅವರು ಮನೆಯಲ್ಲಿ ಗೌರಿ ಹುಣ್ಣಿಮೆ ದಿನ ಗೌರಮ್ಮನ ಮೂರ್ತಿಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತ ಬಂದಿದ್ದರಿಂದ ಅವರ ಮನೆತನಕ್ಕೆ ಗೌರಿಮಠ ಎಂಬ ಹೆಸರು ಬರಲು ಕಾರಣವಾಯಿತು ಎಂದು ಬಸಲಿಂಗಯ್ಯ ಗೌರಿಮಠ ಹೇಳಿದರು.

ಉಪ್ಪಿನಬೆಟಗೇರಿ ಗ್ರಾಮದ ಗಣಪತಿ ಗುಡಿಯಲ್ಲಿ ಪ್ರತಿಷ್ಠಾಪಿಸುವ ಪರಮೇಶ್ವರ ಪಾರ್ವತಿ ಗೌರಮ್ಮನ ಮೂರ್ತಿಗಳು (ಸಂಗ್ರಹ ಚಿತ್ರ)   
ಉಪ್ಪಿನಬೆಟಗೇರಿ ಗ್ರಾಮದ ವಿರಕ್ತಮಠದ ಸಭಾ ಭವನದಲ್ಲಿ ಪ್ರತಿಷ್ಠಾಪಿಸುವ ಗೌರಮ್ಮನ ಮೂರ್ತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.