ಧಾರವಾಡ: ‘ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಸರ್ಕಾರ ನೆರವಾಗಬೇಕು. ಇದಕ್ಕೆ ಸಾಕಷ್ಟು ವೆಚ್ಚವಾಗುವ ಕಾರಣ ಸಾಲ ಸೌಲಭ್ಯ, ಸಹಾಯಧನ ನೀಡಬೇಕು’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಒತ್ತಾಯಿಸಿದರು.
‘ಜರ್ಮನಿಯಲ್ಲಿ ತೃತೀಯ ಲಿಂಗಿಗಳು ಇಲ್ಲ. ಅಲ್ಲಿ ಗಂಡು, ಹೆಣ್ಣು ಎರಡೇ ಲಿಂಗ. ಲಿಂಗ ಪರಿವರ್ತನೆ ಅಲ್ಲಿ ಸಹಜವಾಗಿದೆ. ಅಲ್ಲಿ ಶಸ್ತ್ರಚಿಕಿತ್ಸೆಗೆ ಸಾಲ, ಸಹಾಯಧನ ನೀಡುವ ಮಾದರಿ ವ್ಯವಸ್ಥೆ ಭಾರತದಲ್ಲೂ ಜಾರಿಗೊಳಿಸಬೇಕು’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
‘ಲಿಂಗತ್ವ ಅಲ್ಪಸಂಖ್ಯಾತರು ಶಿಕ್ಷಣ ಪಡೆಯುವುದು ಕಷ್ಟ. ಅವರನ್ನು ದ್ವೇಷಿಸಲಾಗುತ್ತದೆ. ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸೇರಿ ಕೆಲ ವಿಶ್ವವಿದ್ಯಾಲಯಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಅವಕಾಶವಿದೆ. ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ 1 ಮೀಸಲಾತಿ ಕಲ್ಪಿಸಿದೆ. ಅದು ಎಲ್ಲರಿಗೂ ತಲುಪುತ್ತಿಲ್ಲ. ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು’ ಎಂದು ಅವರು ಕೋರಿದರು.
‘ಲಿಂಗತ್ವ ಅಲ್ಪಸಂಖ್ಯಾತರಿಗೆ ಮದುವೆಗೆ ಅವಕಾಶ ನೀಡಬೇಕು. ಅವರಿಗೆ ಸಮಾನ ಹಕ್ಕುಗಳನ್ನು ನೀಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.