ADVERTISEMENT

ಇಂಗ್ಲಿಷ್‌ ವ್ಯಾಮೋಹದಿಂದ ಹೊರಬನ್ನಿ: ನಟ ದೊಡ್ಡಣ್ಣ

ಕನ್ನಡ ಸಂಸ್ಕೃತಿಯ ಸಂಭ್ರಮ ‘ಡಿಂಡಿಮ’ ಸಮಾರೋಪದಲ್ಲಿ ಹಿರಿಯ ನಟ ದೊಡ್ಡಣ್ಣ ಕರೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:53 IST
Last Updated 20 ಜುಲೈ 2024, 15:53 IST
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕನ್ನಡ ಸಂಘದ ಆಶ್ರಯದಲ್ಲಿ ಕಿಮ್ಸ್‌ ಸಭಾಂಗಣದಲ್ಲಿ ಆಯೋಜಿತ ಕನ್ನಡ ಸಂಸ್ಕೃತಿಯ ಸಂಭ್ರಮ ಡಿಂಡಿಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಎಸ್‌.ದೊಡ್ಡಣ್ಣ ಅವರನ್ನು ಸನ್ಮಾನಿಸಲಾಯಿತು   ಪ್ರಜಾವಾಣಿ ಚಿತ್ರ: ಗೋವಿಂದರಾಜ್‌ ಜವಳಿ
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕನ್ನಡ ಸಂಘದ ಆಶ್ರಯದಲ್ಲಿ ಕಿಮ್ಸ್‌ ಸಭಾಂಗಣದಲ್ಲಿ ಆಯೋಜಿತ ಕನ್ನಡ ಸಂಸ್ಕೃತಿಯ ಸಂಭ್ರಮ ಡಿಂಡಿಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ಎಸ್‌.ದೊಡ್ಡಣ್ಣ ಅವರನ್ನು ಸನ್ಮಾನಿಸಲಾಯಿತು   ಪ್ರಜಾವಾಣಿ ಚಿತ್ರ: ಗೋವಿಂದರಾಜ್‌ ಜವಳಿ    

ಹುಬ್ಬಳ್ಳಿ: ‘ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ನಾವೆಲ್ಲ ಇಂಗ್ಲಿಷ್‌ ವ್ಯಾಮೋಹಕ್ಕೊಳಗಾಗಿ ಕನ್ನಡವನ್ನು ಮರೆಯುತ್ತಿದ್ದೇವೆ. ಇಂಗ್ಲಿಷ್‌ ವ್ಯಾಮೋಹದಿಂದ ಹೊರಬಂದು ಕನ್ನಡವನ್ನು ಉಳಿಸಬೇಕಾಗಿದೆ’ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕರೆ ನೀಡಿದರು.

ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕಿಮ್ಸ್‌) ಕನ್ನಡ ಸಂಘದ ಆಶ್ರಯದಲ್ಲಿ ಕಿಮ್ಸ್‌ ಸಭಾಂಗಣದಲ್ಲಿ ಆಯೋಜಿತ ಕನ್ನಡ ಸಂಸ್ಕೃತಿಯ ಸಂಭ್ರಮ ‘ಡಿಂಡಿಮ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಜೀವನದ ಸಾರ್ಥಕ್ಯಕ್ಕೆ ತಾಯಿ ಹಾಕಿಕೊಡುವ ಸಂಸ್ಕಾರ, ತಂದೆಯ ನಿರ್ವಿಭಾವ, ಗುರುವಿನ ಮಾರ್ಗದರ್ಶನ, ದೈವದ ಮೇಲಿನ ನಂಬಿಕೆ ಬಹುಮುಖ್ಯವೆನಿಸಲಿದೆ. ಸಾಧನೆ ಮಾಡಬೇಕೆನ್ನುವವರು ಬದುಕಿನಲ್ಲಿ ಅಹಂಕಾರ ತೊರೆದು, ಭ್ರಮೆಯಿಂದ ಹೊರಬರಬೇಕು. ಕರ್ತವ್ಯ ಮರೆಯದೆ, ನಿಯತ್ತಿನಿಂದ ಬಾಳಿದರೆ ಸುಂದರ ಬದುಕು ಹೊಂದಲು ಸಾಧ್ಯ. ಹೆತ್ತವರು ತಮ್ಮ ಮಕ್ಕಳ ಮೇಲೆ ಕಂಡ ಕನಸು ಈಡೇರಲು ಸಾಧ್ಯ’ ಎಂದರು. 

ADVERTISEMENT

‘ನನ್ನ ತಾಯಿ ನನಗೆ ಒಂದೇ ಒಂದು ಕಪ್‌ ಚಹ, ಕಾಪಿಯನ್ನು ಹೊರಗೆ ಕುಡಿಯಲು ಬಿಟ್ಟವಳಲ್ಲ’ ಎಂಬುದನ್ನು ನೆನಪಿಸಿಕೊಂಡ  ದೊಡ್ಡಣ್ಣ, ಪಿಜ್ಜಾ, ಬರ್ಗರ್‌ ತಿನ್ನೊದನ್ನ ನಿಲ್ಲಿಸಿ, ಆರೋಗ್ಯ ಕಾಯ್ದುಕೊಳ್ಳಿ ಎಂದು ಯುವಸಮೂಹಕ್ಕೆ ಕಿವಿಮಾತು ಹೇಳಿದರು.

45 ನಿಮಿಷದ ಸುದೀರ್ಘ ಮಾತಿನ ನಡುವೆ ಭಾಗವತ ಪುರಾಣ, ಮಹಾಭಾರತದ ಘಟನೆಗಳನ್ನು ಉಲ್ಲೇಖಿಸಿದ ದೊಡ್ಡಣ್ಣ, ಹಳೆಗನ್ನಡವನ್ನು ಉಚ್ಚರಿಸಿದರು. ‘ಹುಲ್ಲಾಗು ಬೆಟ್ಟದಡಿ..’ ಮಂಕುತಿಮ್ಮನ ಕಗ್ಗದೊಂದಿಗೆ ಮಾತನ್ನು ಮುಗಿಸಿದರು.

ಸಮಾರಂಭಕ್ಕೆ ಮೊದಲು ದೊಡ್ಡಣ್ಣ ಅವರನ್ನು ಮಳೆಯಲ್ಲೇ ಮೆರವಣಿಗೆ ಮೂಲಕ ಕರೆತರಲಾಯಿತು. ಅದ್ದೂರಿ ಸನ್ಮಾನ ನೀಡಲಾಯಿತು. ಇದೇ ವೇಳೆ ನಟ, ನಿರ್ದೇಶಕ ಅರುಣ್‌ಕುಮಾರ್‌ ಆರ್.ಟಿ ಹಾಗೂ ಅಶೋಕ ಕಶ್ಯಪ್‌ ಅವರನ್ನೂ ಸನ್ಮಾನಿಸಲಾಯಿತು. 

ಜೀವನದಲ್ಲಿ ನಿಮಗೇನಾದರೂ ಸಾಧನೆ ಮಾಡಬೇಕೆಂದಿದ್ದರೆ ಅಹಂಕಾರವನ್ನು ಇಂದೇ ಸುಟ್ಟು ಬಿಡಿ. ಅಹಂಕಾರದಿಂದ ಯಾರೂ ಬದುಕಿಲ್ಲ.
ದೊಡ್ಡಣ್ಣ, ಕನ್ನಡ ಚಿತ್ರರಂಗದ ಹಿರಿಯ ನಟ

ವೇದಿಕೆಯಲ್ಲಿ ಕಿಮ್ಸ್‌ ನಿರ್ದೇಶಕ ಡಾ.ಎಸ್‌.ಎಫ್‌. ಕಮ್ಮಾರ, ಪ್ರಾಚಾರ್ಯ ಡಾ.ಈಶ್ವರ್ ಹೊಸಮನಿ, ಡಾ.ಕೆ.ಎಫ್.ಕಮ್ಮಾರ, ಕನ್ನಡ ಸಂಘದ ಅಧ್ಯಕ್ಷ ಡಾ.ಶ್ಯಾಮಸುಂದರ್, ಉಪಾಧ್ಯಕ್ಷೆ ವಿಜಯಶ್ರೀ ಬಿ.ಎಚ್‌, ಕಾರ್ಯದರ್ಶಿಗಳಾದ ನಿರ್ಮಲಾ ಕವರಿ, ನಿರಂಜನಕುಮಾರ್‌ ಉಪಸ್ಥಿತರಿದ್ದರು.

ಡಾ.ರಾಜಶೇಖರ ದ್ಯಾಬೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ.ಅಶ್ವಿನಿ ವೆಂಕಟೇಶ, ಡಾ.ಬಸವರಾಜ ಪಾಟೀಲ ಪರಿಚಯಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಹಿರಿಯ ಶುಶ್ರೂಷಕ ಅಧಿಕಾರಿ ಚೆನ್ನಮ್ಮ ಕನ್ನಡಗೀತೆ ಹಾಡಿದರು. ಗೌತಮ್‌ ಶಾನಭಾಗ ಪ್ರಾರ್ಥನೆ ಹಾಡಿದರು. ಸಾಹಿತ್ಯಾ ಕಾದ್ರೊಳ್ಳಿ, ಚಂದನ್‌ ಸಿ ನಿರೂಪಿಸಿದರು. 

ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕನ್ನಡ ಸಂಘದ ಆಶ್ರಯದಲ್ಲಿ ಕಿಮ್ಸ್‌ ಸಭಾಂಗಣದಲ್ಲಿ ಆಯೋಜಿತ ಕನ್ನಡ ಸಂಸ್ಕೃತಿಯ ಸಂಭ್ರಮ ಡಿಂಡಿಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅರುಣ್‌ಕುಮಾರ್ ಆರ್‌.ಟಿ ಎಸ್‌.ದೊಡ್ಡಣ್ಣ ಡಾ.ಈಶ್ವರ್‌ ಹೊಸಮನಿ ದೀಪ ಬೆಳಗಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ್‌ ಜವಳಿ

ಗುರುವನ್ನು ಅರಿಯಲು ಸಿದ್ಧಾರೂಢರ ಚರಿತ್ರೆ ಓದಿ..

‘ಡಾ.ರಾಜ್‌ಕುಮಾರ್‌ ವ್ಯಕ್ತಿಯಲ್ಲ; ಅವರೊಬ್ಬ ಶಕ್ತಿ. ಪರಮಜ್ಞಾನಿ. ಒಂದುಮುತ್ತಿನ ಕಥೆ ಸಿನಿಮಾ ಚಿತ್ರೀಕರಣದ ವೇಳೆ ಡಾ.ರಾಜ್‌ ಅವರಲ್ಲಿ ಗುರು ಎಂದರೇನು ಎಂದು ಕೇಳಿದ ಪ್ರಶ್ನೆಗೆ ಅವರು ಗುರು ಎಂಬುದನ್ನು ತಿಳಿಯಲು ಸಿದ್ಧಾರೂಢರ ಚರಿತ್ರೆ ಓದು ಎಂದು ಸಲಹೆ ನೀಡಿದ್ದರು. ಅವರ ಸಲಹೆಯಂತೆ ಸಿದ್ಧಾರೂಢರ ಚರಿತ್ರೆ ಓದಿದ ಬಳಿಕೆ ಒಂದಷ್ಟು ಪ್ರಶ್ನೆ ಕೇಳಿದರು. ಅದಕ್ಕೆ ಸೂಕ್ತ ಸರಿಯಾದ ಉತ್ತರ ಕೇಳಿದ ನಂತರವೇ ನನ್ನನ್ನು ಡಾ.ರಾಜ್‌ ತಮ್ಮ ಅಂತರಂಗಕ್ಕೆ ತೆಗೆದುಕೊಂಡರು. ಜ್ಞಾನ ಹಂಚಿದ ಗುರುಗಳಲ್ಲಿ ಡಾ.ರಾಜ್‌ಕುಮಾರ್‌ ಒಬ್ಬರು’ ಎಂದು ದೊಡ್ಡಣ್ಣ ಹೇಳಿದರು.

ಸಭಿಕರ ಬೇಡಿಕೆ ಮೇರೆಗೆ ಕನ್ನಡ ಚಿತ್ರರಂಗದ ದಿಗ್ಗಜರ ಜೊತೆಗಿನ ಅನುಭವಗಳನ್ನು ಹಂಚಿಕೊಂಡ ದೊಡ್ಡಣ್ಣ ‘ಶಂಕರ್‌ನಾಗ ಅವರ ಸುಂದರಕಾಂಡ ಸಿನಿಮಾದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಮುಗಿದ ಮಾರನೇ ದಿನ ಶಂಕರ್‌ ಅವರ ಸಾವಿನ ಸುದ್ದಿ ಕೇಳಬೇಕಾಯಿತು. ಅದು ನನ್ನ ಜೀವನದ ಅತ್ಯಂತ ಕೆಟ್ಟ ದಿವಸ’ ಎಂದು ಸ್ಮರಿಸಿಕೊಂಡರು. ರಾತ್ರಿವೇಳೆ ಯಾರೂ ಪ್ರಯಾಣ ಮಾಡದಿರಿ ಎಂದು ವಿನಂತಿಸಿಕೊಂಡರು. ಅಂಬರೀಶ ಹೃದಯವಂತ ಎಂದು ಶ್ಲಾಘಿಸಿದರು. ವಿಷ್ಣುವರ್ಧನ್‌ ಎಸ್‌.ಪಿ.ಬಾಲಸುಬ್ರಮಣ್ಯಂ ಅವರ ಜೊತೆಗಿನ ಅನುಭವನ್ನೂ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.