ಹುಬ್ಬಳ್ಳಿ: ‘ವಾರಾಣಸಿಯ ಕಾಶಿ ವಿಶ್ವನಾಥ ಮಂದಿರ ಸಮೀಪ ಇರುವ ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು, ಮಸೀದಿಯ ಒಂದು ಭಾಗ ಮುಚ್ಚಲು ಹೇಳಿರುವುದು ಆರಾಧನಾ ಸ್ಥಳಗಳ ಕಾಯ್ದೆ 1991ರ ಉಲ್ಲಂಘನೆಯಾಗಿದೆ’ ಎಂದು ಎಸ್‌ಡಿಪಿಐ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಇರ್ಷಾದ್‌ಅಹ್ಮದ್ ಅತ್ತಾರ ಆರೋಪಿಸಿದರು.
ನಗರದ ಸಿಬಿಟಿ ಬಳಿಮಂಗಳವಾರ ‘ಜ್ಞಾನವಾಪಿ ಮಸೀದಿ ವಿರುದ್ಧದ ಷಡ್ಯಂತ್ರ ಸೋಲಿಸೋಣ’ ಹೆಸರಲ್ಲಿ ಎಸ್‌ಡಿಪಿಐ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ‘ಜ್ಞಾನವಾಪಿ ಮಸೀದಿ ಇಂಡೋ–ಇಸ್ಲಾಮಿಕ್ ಶೈಲಿಯಲ್ಲಿದೆ. ಅದರಿಂದಾಗಿ ಅಲ್ಲಿಯ ಕೆಲವು ಭಾಗ ಹಿಂದೂ ದೇವಾಲಯದ ಶೈಲಿಯಲ್ಲಿದೆ. ಆದರೆ, ಅದನ್ನೇ ಮುಂದಿಟ್ಟುಕೊಂಡು ಮಸೀದಿಯನ್ನೇ ವಶಕ್ಕೆ ಪಡೆಯುವ ಹುನ್ನಾರ ನಡೆದಿದೆ’ ಎಂದು ಆರೋಪಿಸಿದರು.
‘ಯಾವುದೇ ಧಾರ್ಮಿಕ ಪಂಥದ ಸ್ಥಳವನ್ನು ಇನ್ನೊಂದು ಪಂಥಕ್ಕೆ ಸೇರಿಸಬಾರದು. ಆರಾಧನಾ ಸ್ಥಳಗಳ ಸ್ವರೂಪವು ಸ್ವಾತಂತ್ರ್ಯಾನಂತರ ಹಾಗೆಯೇ ಮುಂದುವರಿಯಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ, ಆರ್‌ಎಸ್‌ಎಸ್ ಅಧೀನದ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು, ಮಸೀದಿಗಳ ತೆರವಿಗೆ ಕುತಂತ್ರ ನಡೆಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ನ್ಯಾಯ ನಮ್ಮ ಜನ್ಮಸಿದ್ಧ ಹಕ್ಕಾಗಿದೆ. ಆರಾಧನಾ ಸ್ಥಳಗಳ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ನಮ್ಮದು ಕೋಮುವಾದಿಗಳ ವಿರುದ್ಧದ ಹೋರಾಟವೇ ಹೊರತು ಯಾವುದೇ ಧರ್ಮದ ವಿರುದ್ಧವಲ್ಲ’ ಎಂದರು.
ಅಜಂ ಪಠಾಣ್, ಹಮೀದ್ ಬಂಗಾಲಿ, ಸದ್ದಾಂ ಖಾನ್ ಹಾಗೂ ಸದಸ್ಯರು ಇದ್ದರು.
‘ಆರ್‌ಎಸ್‌ಎಸ್ ನಿಷೇಧಿಸಿ’
ಮುಸ್ಲಿಮರು ನಿರ್ಮಿಸಿದ ಮತ್ತು ಅವರ ಒಡೆತನದಲ್ಲಿರುವ ಧಾರ್ಮಿಕ ಆರಾಧನಾ ಸ್ಥಳಗಳನ್ನು ನಾಶಪಡಿಸುವುದು ಆರ್‌ಎಸ್‌ಎಸ್ ಕಾರ್ಯಸೂಚಿಯ ಭಾಗವಾಗಿದೆ. 3 ಸಾವಿರ ಮಸೀದಿಗಳನ್ನು ನೆಲಸಮ ಮಾಡುವ ಸಂಚು ರೂಪಿಸಿದ್ದಾರೆ. ಬ್ರಿಟಿಷರು ಹುಟ್ಟುಹಾಕಿದ ಸಂಘಟನೆ ಅದಾಗಿದ್ದು, ಸೌಹಾರ್ದದಿಂದ ಬದುಕುತ್ತಿರುವವರ ನಡುವೆ ಬಿರುಕು ಮೂಡಿಸುತ್ತಿದೆ. ಅದರ ಅಧೀನದಲ್ಲಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಹಗರಣಗಳಲ್ಲಿಯೇ ಕಾಲ ಕಳೆಯುತ್ತಿವೆ. ಹಗರಣಗಳನ್ನು ಮುಚ್ಚಿಹಾಕಲು ಸಾಮರಸ್ಯ ಕದಡುವ ಯತ್ನ ನಡೆಯುತ್ತಿದೆ. ಆರ್‌ಎಸ್‌ಎಸ್ ಸಂಘಟನೆ ನಿಷೇಧಿಸಬೇಕು’ ಎಂದು ಇರ್ಷಾದ್‌ಅಹ್ಮದ್ ಅತ್ತಾರ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.