ADVERTISEMENT

ಪ್ರಜಾವಾಣಿ ಫೋನ್‌-ಇನ್‌ | ಸ್ಟ್ರೋಕ್; ‘ಗೋಲ್ಡನ್’ ಸಮಯ ಪಾಲನೆ ಮುಖ್ಯ

ಉಬ್ಬಿದ ರಕ್ತನಾಳ ಸಮಸ್ಯೆ ಕಡೆಗಣಿಸಬೇಡಿ; ಆರಂಭಿಕ ಚಿಕಿತ್ಸೆಯಿಂದ ಅಪಾಯ ದೂರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 5:49 IST
Last Updated 6 ಫೆಬ್ರುವರಿ 2022, 5:49 IST
ಡಾ.ವೆಂಕಟೇಶ ಎಚ್‌.ಎ
ಡಾ.ವೆಂಕಟೇಶ ಎಚ್‌.ಎ   

ಹುಬ್ಬಳ್ಳಿ: ಹೃದಯಾಘಾತದಷ್ಟೇ ಪಾರ್ಶ್ವವಾಯು ಕೂಡ ಅಪಾಯಕಾರಿ. ಪಾರ್ಶ್ವವಾಯು ಉಂಟಾದ ಆರು ತಾಸಿನೊಳಗೆ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆದರೆ ಅಪಾಯದಿಂದ ಪಾರಾಗಬಹುದು. ಪಾರ್ಶ್ವವಾಯು ಬಾಧಿಸಿದ ಮೊದಲ ಆರು ಗಂಟೆ ರೋಗಿಯ ಪಾಲಿನ ‘ಗೊಲ್ಡನ್‌’ ಸಮಯ. ಅದನ್ನು ವ್ಯರ್ಥಗೊಳಿಸಬೇಡಿ, ವಿಳಂಬವೂ ಮಾಡದಿರಿ...

ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯ ಎಂಡೋವೆಸ್ಕುಲರ್‌ ಆ್ಯಂಡ್‌ ಇಂಟರ್‌ವೆನ್ಷನಲ್‌ ರೆಡಿಯಾಲಜಿಸ್ಟ್ ಡಾ.ವೆಂಕಟೇಶ ಎಚ್‌.ಎ ಅವರ ಕಿವಿಮಾತು ಇದು.

ಶನಿವಾರ ‘ಪ್ರಜಾವಾಣಿ’ಯ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಉಬ್ಬಿದ ರಕ್ತನಾಳ ಸಮಸ್ಯೆ, ಸ್ಟ್ರೋಕ್‌ ಅಥವಾ ಬ್ರೇನ್‌ ಅಟ್ಯಾಕ್‌, ಲಿವರ್‌ ಕ್ಯಾನ್ಸರ್‌, ಲಿವರ್‌ ಡ್ಯಾಮೇಜ್‌ ಮುಂತಾದ ತೊಂದರೆಗಳಿಗೆ ಪರಿಹಾರ ಸೂಚಿಸಿದರು. ಓದುಗರ ಪ್ರಶ್ನೆಗಳು ಹಾಗೂ ವೈದ್ಯರು ನೀಡಿರುವ ಉತ್ತರ ಇಲ್ಲಿವೆ.

ADVERTISEMENT

-ರಘು, ಹೆಬಸೂರು
ಇದ್ದಕ್ಕಿದ್ದಂತೆ ಕಾಲು ಹಿಡಿಯುತ್ತದೆ. ತೊಂದರೆ ಏನು ಅಂತ ತಿಳಿತಿಲ್ಲ.
–ಕಾಲಿನಲ್ಲಿ ರಕ್ತನಾಳದ ಸಮಸ್ಯೆ ಇದ್ದರೆ ಈ ತೊಂದರೆ ಕಾಣಿಸುತ್ತದೆ. ವೇರಿಕೋಸ್‌ ವೇನ್ಸ್‌ (ಉಬ್ಬಿದ ರಕ್ತನಾಳ) ಸಮಸ್ಯೆ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಉಬ್ಬಿದ ರಕ್ತನಾಳದ ಸಮಸ್ಯೆ ಇದ್ದಲ್ಲಿ, ಆ್ಯಂಟೊಪ್ಲಾಸ್ಟೊ ಚಿಕಿತ್ಸೆ ನೀಡಲಾಗುತ್ತದೆ.

* ಗರ್ಭಕೋಶದ ಗಡ್ಡೆಯ ಲಕ್ಷಣಗಳೇನು? ಅದಕ್ಕೆ ಯಾವ ಚಿಕಿತ್ಸೆ ಪಡೆಯಬಹುದು?
–ಕೆಲವರಿಗೆ ಗರ್ಭಕೋಶದಲ್ಲಿ ಗಡ್ಡೆ ಬೆಳೆಯುವುದು ತಿಳಿಯುವುದಿಲ್ಲ. ಋತುಚಕ್ರದ ಸಮಯದಲ್ಲಿ ನಿರಂತರವಾಗಿ ರಕ್ತಸ್ರಾವ ಆಗುವುದು, ಅವಧಿಗೂ ಮೊದಲೇ ಮುಟ್ಟಾಗುವುದು; ಗರ್ಭಧಾರಣೆಗೆ ತೊಂದರೆಯಾಗುವುದು; ಪದೇಪದೇ ಗರ್ಭಪಾತವಾಗುತ್ತದೆ. ಗರ್ಭಕೋಶದಲ್ಲಿ ಗಡ್ಡೆ ಇರುವ ಜಾಗ ಮತ್ತು ಗಾತ್ರವನ್ನು ಆಧರಿಸಿ, ನೋವಿನ ತೀವ್ರತೆ ಕಂಡುಬರುತ್ತದೆ. ಆರಂಭದಲ್ಲೇ ಈ ಸಮಸ್ಯೆ ಪತ್ತೆಯಾದರೆ, ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆಯೇ ಸಮಸ್ಯೆಗೆ ಪರಿಹಾರ ದೊರೆಯುವುದು.

-ನವೀನ್, ಹುಬ್ಬಳ್ಳಿ
ಪಾರ್ಶ್ವವಾಯು ಲಕ್ಷಣಗಳೇನು? ಹೇಗೆ ತಿಳಿಯಬಹುದು?

–ಸಾಮಾನ್ಯವಾಗಿ 60 ವಯಸ್ಸಿನ ನಂತರ ಸ್ಟ್ರೋಕ್‌ ಆಗುವ ಸಾಧ್ಯತೆ ಇರುತ್ತದೆ. ಧೂಮಪಾನಿಗಳು, ಮಧುಮೇಹಿಗಳಿಗೆ ಸ್ಟ್ರೋಕ್‌ ಆಗುತ್ತದೆ. 50 ವರ್ಷದ ನಂತರ ವರ್ಷಕ್ಕೊಮ್ಮೆ ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಬೇಕು. ಆಗ ರಕ್ತನಾಳ ಹಾಗೂ ಹೃದಯ ಸಂಬಂಧಿ ತೊಂದರೆಗಳಿದ್ದರೆ ಬೇಗ ಪತ್ತೆಯಾಗುತ್ತವೆ.

-ಜೈರಾಮ್‌, ಹೊಸಕೋಟೆ
ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗಿ, ಕಾಲುನೋವು ವಾಸಿಯಾಗುತ್ತಿಲ್ಲ.

–ರಕ್ತದೊತ್ತಡ, ಮಧುಮೇಹ ಇದ್ದರೆ ರಕ್ತನಾಳಗಳು ಕುಗ್ಗುತ್ತವೆ. ಕೆಲವೊಮ್ಮೆ ರಕ್ತನಾಳಗಳಲ್ಲಿ ರಕ್ತ ಸರಬರಾಜು ಸಮರ್ಪಕವಾಗಿರುವುದಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ದೀರ್ಘಕಾಲೀನ ತೊಂದರೆ ಖಚಿತ.

-ಮಂಜುನಾಥ, ಗಜೇಂದ್ರಗಡ
ನಮ್ಮ ಚಿಕ್ಕಪ್ಪನ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಮಸ್ಯೆ ಆಗಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳ‍ಪಟ್ಟಾಗ ಮಾತ್ರೆ ನೀಡಿದ್ದಾರೆ. ಮುಂದೆಯೂ ಚಿಕಿತ್ಸೆ ಅಗತ್ಯವೇ?
–ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ನಿರ್ಲಕ್ಷ್ಯಿಸುವಂತಿಲ್ಲ. ರಕ್ತನಾಳದಲ್ಲಿ ಸಮಸ್ಯೆ ಇದ್ದರೆ ಮುಂದೆ ಇದರಿಂದ ಸ್ಟ್ರೋಕ್‌ ಅಥವಾ ಬ್ರೇನ್‌ ಅಟ್ಯಾಕ್‌ ಆಗುವ ಸಮಸ್ಯೆಯೂ ಇರುತ್ತದೆ. ಕೆಲವೊಮ್ಮೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೂ ಇರುತ್ತದೆ. ತಪಾಸಣೆಗೆ ಒಳಪಡುವುದು ಸೂಕ್ತ.

-ಪ್ರಮೋದ, ಧಾರವಾಡ
ಹೊಟ್ಟೆಯಲ್ಲಿನ ಬೊಜ್ಜು ಲಿವರ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆಯೇ?
–ಜೀವನ ಶೈಲಿ, ಆನುವಂಶಿಕವಾಗಿ ಹಾಗೂ ಸೂಕ್ತವಲ್ಲದ ಆಹಾರ ಪದ್ಧತಿಯಿಂದ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಲಿವರ್‌ನಲ್ಲಿ ಕಲ್ಲುಗಳಿದ್ದರೆ ಕ್ಯಾನ್ಸರ್‌ ಆಗಿ ಬದಲಾಗುವ ಸಾಧ್ಯತೆ ಇರುತ್ತದೆ. ಲಿವರ್ ಕ್ಯಾನ್ಸರ್‌, ಉಬ್ಬಿದ ರಕ್ತನಾಳಗಳು, ಸ್ಟ್ರೋಕ್‌ ಸೇರಿದಂತೆ ಬೇರಾವುದೇ ಸಮಸ್ಯೆ ಇದ್ದರೆ ಸ್ಥೂಲಕಾಯದಿಂದ ಉಲ್ಬಣವಾಗುತ್ತದೆ. ಹಾಗಾಗಿ, ತೂಕ ನಿಯಂತ್ರಿಸುವುದು ಅವಶ್ಯ. ನಿಗದಿತ ವ್ಯಾಯಾಮ, ಆರೋಗ್ಯವಂತ ಊಟದಿಂದ ತೂಕ ನಿಯಂತ್ರಿಸಬಹುದಾಗಿದೆ.

-ಬಸವರಾಜ ತೋಟಗಿ, ಹುಬ್ಬಳ್ಳಿ
ತಂದೆಯ ಕಾಲುಗಳಲ್ಲಿ ರಕ್ತನಾಳಗಳು ಉಬ್ಬಿವೆ. ಚಿಕಿತ್ಸೆ ಹೇಗೆ?

–ರಕ್ತನಾಳಗಳ ಉಬ್ಬುವಿಕೆ ಅಂದ ತಕ್ಷಣ ನರರೋಗ ತಜ್ಞರ ಬಳಿ ಹೋಗುತ್ತಾರೆ. ಆದರೆ, ಎಂಡೋವೆಸ್ಕುಲರ್‌ ತಜ್ಞರನ್ನು ಕಂಡು, ಚಿಕಿತ್ಸೆಗೆ ಒಳಪಡಬೇಕು. ಸಮಸ್ಯೆ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ, ಚಿಕಿತ್ಸೆ ನೀಡಲಾಗುತ್ತದೆ.

-ಜಗನ್ನಾಥ, ಹುಬ್ಬಳ್ಳಿ
ನನಗೆ 69 ವರ್ಷ. ಬಿ.ಪಿ, ಶುಗರ್‌ ಇಲ್ಲ. 2 ವರ್ಷದಿಂದ ಪಾದಗಳು ಉರಿಯುತ್ತವೆ. ನಿರಂತರವಾಗಿ ಮಾತ್ರೆ ಸೇವಿಸುತ್ತಿದ್ದೇನೆ.

–ಉಬ್ಬಿದ ರಕ್ತನಾಳ ಸಮಸ್ಯೆ ಇರಬಹುದು. ನಿರಂತರವಾಗಿ ಮಾತ್ರೆ ಸೇವಿಸುವುದರಿಂದ ಪರಿಹಾರ ಸಿಗುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆ ಮಾಡಿಸಿ. ಸಮಸ್ಯೆ ಆಧರಿಸಿ, ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.

-ಈಶ್ವರ ಅಂಗಡಿ, ಗಜೇಂದ್ರಗಡ
ಅಜ್ಜನಿಗೆ ಕಾಲುನೋವು ಇದೆ. ಗ್ಯಾಂಗ್ರಿನ್‌ ಶಸ್ತ್ರಚಿಕಿತ್ಸೆಯ ನಂತರ ಈ ನೋವು ಇನ್ನೂ ಹಚ್ಚಾಗಿದೆ.
–ರಕ್ತನಾಳದಲ್ಲಿ ಸಮಸ್ಯೆ ಇರಬೇಕು. ವಯಸ್ಸಾದ ಕಾರಣ ಮಧುಮೇಹ, ರಕ್ತದೊತ್ತಡ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಿ. ಆಂಜಿಯೋಗ್ರಾಫಿ ಚಿಕಿತ್ಸೆ ಪಡೆದರೆ ಗುಣವಾಗಬಹುದು.

-ಆಶಾ ಹೊಸಮನಿ, ನವನಗರ, ಹುಬ್ಬಳ್ಳಿ
3–4 ತಿಂಗಳಿಂದ ಋತುಸ್ರಾವದ ಸಮಸ್ಯೆ ಉಂಟಾಗಿದೆ. ಬೆನ್ನುನೋವು ವಿಪರೀತವಾಗಿದೆ.
-ಹಾರ್ಮೋನ್ ಸಮಸ್ಯೆಯಿಂದ ಹೀಗಾಗಬಹುದು. ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಮಾಡಿಸಿ. ಸಮಸ್ಯೆ ಏನೆಂದು ತಿಳಿಯುತ್ತದೆ. ನಂತರ ಚಿಕಿತ್ಸೆ ಆರಂಭಿಸಬಹುದು.

-ಚೇತನ್‌, ಹುಬ್ಬಳ್ಳಿ
ತಾಯಿಯ ಎಡಗಾಲಿನಲ್ಲಿ ರಕ್ತ ಸಂಚಾರ ಸರಿಯಾಗಿ ಆಗದ ಕಾರಣ, ಗ್ಯಾಂಗ್ರಿನ್‌ ಆಗಿ ಬೆರಳೊಂದನ್ನು ಕತ್ತರಿಸಲಾಯಿತು. ಮತ್ತೆ ಸಮಸ್ಯೆ ಕಾಣಿಸಿಕೊಂಡಾಗ ಆಂಜಿಯೊಪ್ಲಾಸ್ಟಿ ಚಿಕಿತ್ಸೆ ಮಾಡಿಸಲು ಸಲಹೆ ನೀಡಿದರು. ಈ ಬಗ್ಗೆ ಮೊದಲೇ ತಿಳಿಸಿದ್ದರೆ ಬೆರಳು ತೆಗೆಯುವ ಪ್ರಮೇಯವೇ ಇರುತ್ತಿರಲಿಲ್ಲ.

–ಶಸ್ತ್ರಚಿಕಿತ್ಸೆ ಅಲ್ಲದೆ, ಸುಲಭದ ಹಾಗೂ ಹಾನಿಕಾರಕವಲ್ಲದ ಚಿಕಿತ್ಸೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಬೇಕಿದೆ. ಎಂಡೋವೆಸ್ಕುಲರ್‌ ಚಿಕಿತ್ಸೆ ಮೂಲಕ ಆರಂಭಿಕ ಹಂತದಲ್ಲಿ ಗ್ರಾಂಗ್ರಿನ್‌ ಅನ್ನು ಸಹ ನಿಯಂತ್ರಿಸಬಹುದು.

‘ಸ್ಟ್ರೋಕ್ ರೆಡಿ’ ಆಸ್ಪತ್ರೆ ಮಾಹಿತಿ ಇರಲಿ...
‘ಮಿದುಳಿನ ರಕ್ತನಾಳ ಹೆಪ್ಪುಗಟ್ಟಿ ಅಥವಾ ಒಡೆದು ನರಮಂಡಲದ ಮೇಲಿನ ಪರಿಣಾಮಗಳಿಗೆ ಪಾರ್ಶ್ವವಾಯು ಎಂದು ಕರೆಯುತ್ತಾರೆ. ಇದಲ್ಲದೆ ಸಬ್ ಅರಚ್ನಾಯ್ಡ್ ಹೆಮರೇಜ್ ಮತು ಸರೆಬ್ರಲ್ ವೇನಸ್ ತ್ರಾಂಬೋಸಿಸ್ ಎಂಬ ಇನ್ನೆರಡು ವಿಧಗಳಿವೆ. ಪಾರ್ಶ್ವವಾಯು ಸಂಭವಿಸಿದ ಆರು ಗಂಟೆ(ಗೋಲ್ಡನ್ ಟೈಂ)ಯೊಳಗೆ ರೋಗಿ ಸಂಪೂರ್ಣ ಗುಣಮುಖರಾಗಿ, ಎಂಆರ್‌ಐ ಸ್ಕ್ಯಾನ್‌ನಲ್ಲಿಯೂ ಲಕ್ಷಣ ಕಂಡುಬರದೇ ಗುಣಮುಖರಾಗಬಹುದು’ ಎನ್ನುತ್ತಾರೆ ಡಾ.ವೆಂಕಟೇಶ ಎಚ್‌.ಎ.

‘ಮುಂಜಾಗ್ರತೆಯು ’ಸ್ಟ್ರೋಕ್‌‘ನ ತೀವ್ರತೆಯಿಂದ ಪಾರು ಮಾಡಬಲ್ಲದು. ತಕ್ಷಣವೇ ಔಷಧ, ಅತ್ಯಾಧುನಿಕ ಚಿಕಿತ್ಸೆಯ ಕೇಂದ್ರಕ್ಕೆ ದಾಖಲು ಆಗಬೇಕು. ಪಾರ್ಶ್ವವಾಯು ಸಂಭವಿಸಿದ ಮೊದಲ ಆರು ಗಂಟೆಯಲ್ಲಿ (ಗೋಲ್ಡನ್ ಅವರ್) ರೋಗಿಗೆ ಸಂಪೂರ್ಣವಾದ ವೈದ್ಯಕೀಯ ನೆರವು ಲಭಿಸಬೇಕು’ ಎನ್ನುತ್ತಾರೆ ಅವರು.

‘ರೋಗಿ ಆಸ್ಪತ್ರೆಯಲ್ಲಿದ್ದರೆ ರಕ್ತನಾಳ ಹೆಪ್ಪುಗಟ್ಟಿರುವುದನ್ನು ಭೇದಿಸಲು ‘ಕ್ಲಾಟ್ ಬ್ಲಸ್ಟರ್’ ಔಷಧ ನೀಡಲಾಗುತ್ತದೆ. ಪಾರ್ಶ್ವವಾಯು ಸಂಭವಿಸಿದ ಪ್ರತಿ ನಿಮಿಷವೂ ಮಿದುಳಿನ ನರಗಳು ದುರ್ಬಲವಾಗುತ್ತಾ ಹೋಗುತ್ತವೆ. ಹಾಗಾಗಿ ವಿಳಂಬ ಮಾಡದೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಲಭ್ಯವಿರದ ಕಾರಣ ಸಾರ್ವಜನಿಕರಿಗೆ ತಮ್ಮ ವಾಸಸ್ಥಳದ ಹತ್ತಿರ ಇರುವ ‘ಸ್ಟ್ರೋಕ್ ರೆಡಿ’ ಆಸ್ಪತ್ರೆಯ ಬಗ್ಗೆ ಅರಿವು ಅವಶ್ಯಕ. ಪ್ರಾಥಮಿಕ ಚಿಕಿತ್ಸೆ ನೀಡುವ ವೈದ್ಯರು ಇಂಥ ಆಸ್ಪತ್ರೆಗಳಿಗೆ ತ್ವರಿತವಾಗಿ ಶಿಫಾರಸು ಮಾಡಬೇಕು’ ಎನ್ನುತ್ತಾರೆ ಅವರು.

ಎಂಡೊವೆಸ್ಕ್ಯೂಲರ್‌ ಎಂದರೇನು?
ರಕ್ತನಾಳದ ಮೂಲಕ ಶಸ್ತ್ರಚಿಕಿತ್ಸೆ ಮಾಡುವ ವಿಧಾನಕ್ಕೆ ಎಂಡೊವೆಸ್ಕ್ಯೂಲರ್‌ ಎನ್ನಲಾಗುತ್ತದೆ. ಈ ಹಿಂದೆ ಮುಂದುವರಿದ ನಗರಗಳಲ್ಲಿ ಮಾತ್ರ ಈ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು. ಇಗ ಹುಬ್ಬಳ್ಳಿಯಲ್ಲೂ ಈ ಚಿಕಿತ್ಸೆ ಲಭ್ಯವಿದ್ದು, ಚಿಕಿತ್ಸೆಗೆ ಒಳಪಡುವ ರೋಗಿಗಳು ಶೀಘ್ರ ಗುಣಮುಖರಾಗುತ್ತಾರೆ. ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಡಾ.ವೆಂಕಟೇಶ ಎಚ್‌.ಎ ಹೇಳಿದರು.

ಲಕ್ಷಣಗಳು: ಸ್ವಲ್ಪ ಹೊತ್ತು ನಿಂತರು ಕಾಲು ನೋವು, ಕಾಲು ಊದುವಿಕೆ, ಕಾಲು ಭಾರ ಅನಿಸುವುದು. ಮೊಣಕಾಲಿನಿಂದ ಕೆಳಗಡೆ ಕಪ್ಪಾಗಲು ಶುರುವಾಗುವುದು. ತುರಿಕೆ ಆರಂಭವಾಗಿ ಗಾಯ ಆಗುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವುದರಿಂದ ಗುಣವಾಗಬಹುದು. ಸಾಮಾನ್ಯವಾಗಿ 40 ವಯಸ್ಸಿನ ನಂತರ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬದಲಾದ ಜೀವನ ಶೈಲಿಯಿಂದ ಈಚೆಗೆ 30ರ ಪ್ರಾಯದಲ್ಲೇ ಈ ಸಮಸ್ಯೆ ಕಾಣಿಸುತ್ತಿದೆ.

ಲಿವರ್‌ ಕ್ಯಾನ್ಸರ್‌: ಎಚ್ಚರ ಅವಶ್ಯ
‘ಮದ್ಯವ್ಯಸನಿಗಳಲ್ಲಿ ಮೂತ್ರಪಿಂಡಕ್ಕೆ ಹಾನಿಯಾಗುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹೊಟ್ಟೆಯಲ್ಲಿ ನೀರು ತುಂಬುವುದು, ರಕ್ತಸ್ರಾವ ಆಗಬಹುದು. ಇದು ಲಿವರ್‌ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ದೇಹದ ಇತರೆ ಭಾಗದಲ್ಲಿರುವ ಕ್ಯಾನ್ಸರ್‌ ಲಿವರ್‌ಗೂ ಹರಡಬಹುದು. ಬಿ.ಪಿ, ಸ್ಥೂಲಕಾಯದಿಂದ ಮದ್ಯವ್ಯಸನಿಗಳಲ್ಲದವರಿಗೂ ಇದು ಕಾಡುತ್ತದೆ. ಹೊಟ್ಟೆ ಊತ, ವಿಪರೀತ ತೇಗು, ಗ್ಯಾಸ್ಟಿಕ್ ಇದರ ಲಕ್ಷಣಗಳು. 6 ತಿಂಗಳಿಗೊಮ್ಮೆ ಅಲ್ಟ್ರಾ ಸೌಂಡ್‌ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳಬೇಕು. ನಂತರ ಸಿಟಿ ಎಂಆರ್‌ಐ ಸ್ಕ್ಯಾನಿಂಗ್‌ನಲ್ಲಿ ಕ್ಯಾನ್ಸರ್‌ ಪ್ರಮಾಣ ಅರಿತು ಚಿಕಿತ್ಸೆ ನೀಡಲಾಗುತ್ತದೆ. ನಿರ್ಲಕ್ಷ್ಯ ಮಾಡಿದರೆ ಸಮಸ್ಯೆ ಗಂಭೀರವಾಗಲಿದೆ’.

ವೈದ್ಯರ ಸಲಹೆಗಳು
* ತಲೆನೋವು ಸಹ ಪಾರ್ಶ್ವವಾಯುವಿಗೆ ಕಾರಣ ಆಗಬಲ್ಲದು. ಒತ್ತಡ, ಕಣ್ಣಿನ ಸಮಸ್ಯೆಯಿಂದಲೂ ತಲೆನೋವು ಬರುತ್ತದೆ. ಪದೇಪದೇ ಕಂಡುಬಂದರೆ ನರರೋಗ ತಜ್ಞರನ್ನು ಸಂಪರ್ಕಿಸಿ.

*ಪಾರ್ಶ್ವವಾಯು ಆನುವಂಶಿಕವಾಗಿಯೂ ಬರಬಹುದು. ಆನುವಂಶಿಕವಾಗಿ ರೂಪುಗೊಳ್ಳವ ರಕ್ತನಾಳಗಳ ವಿನ್ಯಾಸವೂ ಇದಕ್ಕೆ ಕಾರಣ ಆಗಬಹುದು.

* ಕೊಬ್ಬಿರುವ ಅಂಶ ಕಡಿಮೆ ಇರುವಆಹಾರ ಸೇವನೆ, ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಬಳಸುವುದು.

* ದೇಹದ ತೂಕ ಕಡಿಮೆ ಮಾಡುವುದು. ಶಿಸ್ತುಬದ್ಧ ಜೀವನಶೈಲಿ ರೂಢಿಸಿಕೊಳ್ಳುವುದು. ಒತ್ತಡ ನಿವಾರಣೆಗೆ ಒತ್ತು ನೀಡುವುದು.

* ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಇದಕ್ಕೆ ಸೂಕ್ತವಾದ ಚಿಕಿತ್ಸೆ ಅಗತ್ಯ.

* ಧೂಮಪಾನ, ಮದ್ಯಪಾನದಿಂದ ದೂರವಿರುವುದು.

* ನಿರಂತರವಾಗಿ ಕುಳಿತುಕೊಳ್ಳುವ ಅಥವಾ ನಿಂತುಕೊಂಡು ಕೆಲಸ ಮಾಡುವವರು ಪ್ರತಿ 30 ನಿಮಿಷಕ್ಕೊಮ್ಮೆ ತಮ್ಮ ಚಟುವಟಿಕೆ ಬದಲಿಸಬೇಕು. ಕುಳಿತೇ ಇರುವವರು ಓಡಾಡಬೇಕು. ನಿಂತೇ ಇರುವವರು ಕೊಂಚ ಕುಳಿತುಕೊಳ್ಳುವ ಮೂಲಕ ದೇಹ, ಮನಸ್ಸಿಗೆ ವಿಶ್ರಾಂತಿ ನೀಡಬೇಕು.

********************************************************

ಪ್ರಜಾವಾಣಿ ಫೋನ್‌ ಇನ್‌ ನಿರ್ವಹಣೆ: ರಶ್ಮಿ ಎಸ್‌, ಕೃಷ್ಣಿ ಶಿರೂರ, ರವಿ ಬಳೂಟಗಿ, ಗೋವರ್ಧನ್‌ ಎಸ್‌.ಎನ್‌, ಗೌರಮ್ಮ ಕಟ್ಟಿಮನಿ, ಹಿತೇಶ ವೈ ಚಿತ್ರ: ಗೋವಿಂದರಾಜ ಜವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.