ADVERTISEMENT

ಹುಬ್ಬಳ್ಳಿ | ಮಳೆಯಿಂದಾಗಿ ಉತ್ತಮ ಫಸಲು: ತರಕಾರಿ ದರ ಅಲ್ಪ ಇಳಿಕೆ

ಸ್ಮಿತಾ ಶಿರೂರ
Published 3 ಆಗಸ್ಟ್ 2024, 5:59 IST
Last Updated 3 ಆಗಸ್ಟ್ 2024, 5:59 IST
ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ತರಕಾರಿ ಮಾರಾಟ
ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ತರಕಾರಿ ಮಾರಾಟ   

ಹುಬ್ಬಳ್ಳಿ: ಎರಡು ವಾರಗಳಿಂದ ತರಕಾರಿ ದರ ಇಳಿಕೆಯತ್ತ ಸಾಗಿದೆ. ಸದ್ಯ ಟೊಮೆಟೊ ಎಲ್ಲ ತರಕಾರಿಗಳಲ್ಲಿ ಅಗ್ಗವೆನಿಸಿದ್ದು ಕೆ.ಜಿ.ಗೆ ₹ 15ರಿಂದ ₹ 20ಕ್ಕೆ ಮಾರಾಟವಾಗುತ್ತಿದೆ. ಉಳಿದಂತೆ ಎಲ್ಲ ತರಕಾರಿ ದರ ಸರಾಸರಿ ₹ 50ರಷ್ಟಿದೆ.

ಕೆ.ಜಿಗೆ ಕುಂಬಳಕಾಯಿ ₹ 30, ಬದನೆಕಾಯಿ ₹ 40, ಈರುಳ್ಳಿ ಗುಣಮಟ್ಟಕ್ಕೆ ತಕ್ಕಂತೆ ₹ 38ರಿಂದ ₹ 45, ಆಲೂಗಡ್ಡೆ ₹ 40ರಿಂದ ₹ 45, ಬೀಟ್‌ರೂಟ್‌ ₹ 40 ರಿಂದ ₹ 50, ಬೀನ್ಸ್‌ ದರ ಗುಣಮಟ್ಟಕ್ಕೆ ತಕ್ಕಂತೆ ₹ 40ರಿಂದ ₹ 80ರವರೆಗೂ ಇದೆ, ಹಸಿಮೆಣಸು ₹ 40ರಿಂದ ₹ 80, ಗಜ್ಜರಿ ₹ 50, ಬೆಂಡೆಕಾಯಿ ₹ 60, ಹೀರೇಕಾಯಿ ₹ 60, ಹಾಗಲಕಾಯಿ ₹ 60, ಚವಳಿಕಾಯಿ ₹ 60ರಿಂದ ₹ 70, ಪಡುವಲಕಾಯಿ ₹ 60, ದೊಡ್ಡಮೆಣಸಿನಕಾಯಿ ₹ 60ರಿಂದ ₹ 90, ತೊಂಡೆಕಾಯಿ ₹ 80, ಸುವರ್ಣಗಡ್ಡೆ ₹ 80, ನುಗ್ಗೇಕಾಯಿ ₹ 70, ಹಸಿಬಟಾಣಿ ₹ 90, ಎಲೆಕೋಸು ₹ 10 ರಿಂದ ₹ 20 (ಪೀಸ್‌ ಲೆಕ್ಕ), ಹೂಕೋಸು ₹ 30 (ಪೀಸ್‌ ಲೆಕ್ಕ) ದಂತೆ ಚಿಲ್ಲರೆ ದರದಲ್ಲಿ ದುರ್ಗದಬೈಲ್‌ ಹಾಗೂ ಜನತಾಬಜಾರ್‌ನಲ್ಲಿ ಸಿಗುತ್ತಿವೆ.

ಮೆಂತೆ, ಪಾಲಕ್‌, ಸಬ್ಬಸಿಗೆ, ಕಿರ್ಕಸಾಲಿ, ಕೊತ್ತಂಬರಿ ಸೊಪ್ಪು ಸೇರಿದಂತೆ ಬಹುತೇಕ ಎಲ್ಲ ಸೊಪ್ಪುಗಳು ಕಟ್ಟಿಗೆ ₹ 10 ಇದೆ. ಈರುಳ್ಳಿ ಗಿಡ ಮಾತ್ರ ಕಟ್ಟಿಗೆ ₹ 20ರಂತೆ ಮಾರಾಟವಾಗುತ್ತಿದೆ.

ADVERTISEMENT

‘ತರಕಾರಿ ದರ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಕಳೆದ ತಿಂಗಳು ಟೊಮೆಟೊ ದರ ಮಾತ್ರ ₹ 100ರವರೆಗೆ ಹೋಗಿತ್ತು. ಈಗ ಮಾರುಕಟ್ಟೆಗೆ ಭರಪೂರ ತರಕಾರಿ ಬರುತ್ತಿರುವುದರಿಂದ ದರ ಇಳಿಕೆ ಆಗಿದೆ. ಜನರ ಕೈಗೆಟುಕುವಂತಿದೆ’ ಎಂದು ಜನತಾಬಜಾರ್‌ನ ತರಕಾರಿ ವ್ಯಾಪಾರಿ ಸಂತೋಷ್‌ ಕಟ್ಟಿಮನಿ ಅಭಿಪ್ರಾಯಪಟ್ಟರು.

‘ಮಳೆ ಬಂದು ಸ್ವಲ್ಪ ಹೊಳವಾಗಿರುವುದರಿಂದ ಎಪಿಎಂಸಿಗೆ ತರಕಾರಿ ಬೆಳೆ ಆವಕ ಚೆನ್ನಾಗಿದೆ. ಹೀಗಾಗಿ ದರ ಇಳಿಕೆ ಆಗಿದೆ’ ಎಂದು ದುರ್ಗದಬೈಲ್‌ನಲ್ಲಿ ತರಕಾರಿ ಮಾರಾಟ ಮಾಡುವ ಮಹಮ್ಮದ್‌ ವಸೀಂ ತಿಳಿಸಿದರು.

‘ಕಳೆದ 10 ದಿನಗಳಿಂದ ತರಕಾರಿ ದರದಲ್ಲಿ ಇಳಿಕೆ ಆರಂಭವಾಗಿದೆ. ಈಗಿನ ದರ ಸಾಮಾನ್ಯ ಎನ್ನಬಹುದು. ಶ್ರಾವಣ ಆರಂಭವಾಗುತ್ತಿದ್ದಂತೆಯೇ ತರಕಾರಿ ದರದಲ್ಲಿ ₹ 10ರಷ್ಟು ಹೆಚ್ಚಳ ಕಾಣಬಹುದು’ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಹುಬ್ಬಳ್ಳಿ ಎಪಿಎಂಸಿಗೆ ಧಾರವಾಡ ಜಿಲ್ಲೆಯಿಂದಲೇ ಹೆಚ್ಚಿನ ತರಕಾರಿ ಮಾರಾಟಕ್ಕೆ ಬರುತ್ತವೆ. ಬೈಲಹೊಂಗಲ, ಬೆಳಗಾವಿ, ಘಟಪ್ರಭಾಗಳಿಂದಲೂ ಹೆಚ್ಚಿನ ತರಕಾರಿಗಳು ಬರುತ್ತಿವೆ. ಬೆಳೆ ಹೊಸದಾಗಿ ಬಂದಿರುವುದರಿಂದ ಈ ಬಾರಿ ನಿರೀಕ್ಷೆಯಷ್ಟು ಆವಕ ಇದ್ದು ದರ ನಿಯಂತ್ರಣದಲ್ಲಿದೆ. ಶ್ರಾವಣ ಆರಂಭವಾಗುತ್ತಿದ್ದಂತೆಯೇ ₹ 10ರಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

ತರಕಾರಿ ದರ ₹ ಗಳಲ್ಲಿ

ಟೊಮೆಟೊ;15–20

ಆಲೂಗಡ್ಡೆ;40–45

ಈರುಳ್ಳಿ;38–45

ಹಸಿಮೆಣಸು;40–70

ಬದನೆಕಾಯಿ;40

ಮಾರುಕಟ್ಟೆಗೆ ತರಕಾರಿ ಆವಕ ಉತ್ತಮ ಶ್ರಾವಣ ಆರಂಭವಾಗುತ್ತಿದ್ದಂತೆ ದರ ಏರಿಕೆ ಸಾಧ್ಯತೆ ಕಳೆದ 10 ದಿನಗಳಿಂದ ತರಕಾರಿ ದರದಲ್ಲಿ ಇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.