ನವಲಗುಂದ: ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿದ್ದು, ಬಿತ್ತನೆಗಾಗಿ ಜಮೀನು ಹದಗೊಳಿಸುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.
ಬರದಿಂದಾಗಿ ರೈತರು ಬೆಳೆ ನಷ್ಟ ಅನುಭವಿಸಿದ್ದರು. ಈ ವರ್ಷವಾದರೂ ಮುಂಗಾರಿನಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಮೇ ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ರೈತರು ಸಂತಸಗೊಂಡಿದ್ದು ಮುಂಗಾರಿನಲ್ಲಿ ಹೆಸರು, ಗೋವಿನಜೋಳ ಹಾಗೂ ಹತ್ತಿ ಬಿತ್ತನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಮೊರಬ ಹೊಬಳಿಯಲ್ಲಿ ಮೇ ತಿಂಗಳಲ್ಲಿ ವಾಡಿಕೆಯಂತೆ 41 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 43 ಮಿ.ಮೀ ಮಳೆಯಾಗಿದೆ. ಅಣ್ಣಿಗೇರಿ ಹೊಬಳಿಯಲ್ಲಿಯೂ ವಾಡಿಕೆಗಿಂದ ಹೆಚ್ಚು ಮಳೆಯಾಗಿದ್ದು, ಒಟ್ಟು 78 ಮಿ.ಮೀ ಮಳೆ ಸುರಿದಿದೆ.
ಕೃಷಿ ಇಲಾಖೆ ಪ್ರಕಾರ ಈ ವರ್ಷ ಮುಂಗಾರಿನಲ್ಲಿ ನವಲಗುಂದ ವ್ಯಾಪ್ತಿಯಲ್ಲಿ 56,772 ಹೆಕ್ಟೇರ್, ಅಣ್ಣಿಗೇರಿ ವ್ಯಾಪ್ತಿಯಲ್ಲಿ 23,679 ಹೆಕ್ಟೇರ್ ಸೇರಿದಂತೆ ಒಟ್ಟು 80,451 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ನವಲಗುಂದ ಹೊಬಳಿಯಲ್ಲಿ 26,079 ಹೆಕ್ಟೇರ್‌ನಲ್ಲಿ ಹೆಸರು, ಗೋವಿನಜೋಳ 13,584 ಹೆಕ್ಟೇರ್, ಹತ್ತಿ 16,028 ಹೆಕ್ಟೇರ್, ಶೇಂಗಾ 992 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ನಿರೀಕ್ಷೆ ಇದೆ. ಅಣ್ಣಿಗೇರಿ ವ್ಯಾಪ್ತಿಯಲ್ಲಿ 10,744 ಹೆಕ್ಟೇರ್‌ನಲ್ಲಿ ಹೆಸರು, ಗೋವಿನಜೋಳ 1,845 ಹೆಕ್ಟೇರ್, ಹತ್ತಿ 9,658 ಹೆಕ್ಟೇರ್ ಹಾಗು ಶೇಂಗಾ 1,397 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.
ಕೆಲವು ರೈತರು ಸ್ವಲ್ಪ ಪ್ರಮಾಣದಲ್ಲಿ ತೊಗರಿ, ಉದ್ದು, ಅಲಸಂದಿ, ಸೂರ್ಯಕಾಂತಿ ಹಾಗೂ ಕಬ್ಬು ಬೆಳೆಗೆ ಒತ್ತು ಕೊಡಲು ಮುಂದಾಗಿದ್ದಾರೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ರೋಹಿಣಿ ಮಳೆ ನಿರೀಕ್ಷೆಯಲ್ಲಿ ರೈತರು ಅಗತ್ಯದಷ್ಟು ಬೀಜ, ಗೊಬ್ಬರ ದಾಸ್ತಾನು ತೊಗರಿ, ಉದ್ದು, ಅಲಸಂದಿ ಬೆಳೆಗೂ ಆದ್ಯತೆ
ರೈತರಿಗೆ ಬೀಜ ರಸಗೊಬ್ಬರದ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದ್ದು ರಿಯಾಯಿತಿ ದರದಲ್ಲಿ ಬೀಜ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ಬೀಜೋಪಚಾರ ಮಾಡಿ ಬಿತ್ತನೆ ಮಾಡಿದರೆ ರೋಗಬಾಧೆ ತಡೆಗಟ್ಟಬಹುದುಶಿವಕುಮಾರ ಬೀರಣ್ಣವರ ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ನವಲಗುಂದ
ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು–ಎನ್.ಎಚ್. ಕೋನರಡ್ಡಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.