ಕಲಘಟಗಿ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಕಾಯಂ ಮುಖ್ಯಾಧಿಕಾರಿ ಇಲ್ಲ. ಅಧ್ಯಕ್ಷ ಸ್ಥಾನ ಸಹ ಕಳೆದ ಒಂದು ವರ್ಷದಿಂದ ಖಾಲಿ ಇದೆ. ಹೀಗಾಗಿ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದೇ ವರ್ಷದಲ್ಲಿ 7 ಜನ ಮುಖ್ಯಾಧಿಕಾರಿಗಳನ್ನು ಪಟ್ಟಣ ಪಂಚಾಯಿತಿ ಕಂಡಿದೆ. ಪಟ್ಟಣ ವ್ಯಾಪ್ತಿಯ ಸಾರ್ವಜನಿಕರು ಹಲವು ಕೆಲಸಗಳಿಗಾಗಿ ನಿತ್ಯ ಕಚೇರಿಗೆ ಅಲೆಯುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಪಟ್ಟಣದಲ್ಲಿ ಒಟ್ಟು 17 ವಾರ್ಡ್‌ಗಳಿವೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಒಂದು ವರ್ಷದಿಂದ ಚುನಾವಣೆ ನಡೆದಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನ ಖಾಲಿ ಇದೆ. ಸದ್ಯ ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವರ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯಾಗಿ ನೇಮಕವಾಗಿದ್ದಾರೆ.
ಉಸ್ತುವಾರಿ ಸಚಿವರು ಗಮನಹರಿಸಲಿ: ‘ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕ್ಷೇತ್ರದ ಶಾಸಕರು ಪಟ್ಟಣ ಪಂಚಾಯಿತಿಗೆ ಕಾಯಂ ಮುಖ್ಯಾಧಿಕಾರಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಬಾಕಿ ಅರ್ಜಿ ವಿಲೇವಾರಿಗೆ ಸೂಚಿಸಬೇಕು’ ಎಂಬುದು ಪಟ್ಟಣದ ಜನರ ಆಗ್ರಹವಾಗಿದೆ.
ನನೆಗುದಿಗೆ ಬಿದ್ದ ಕಾರ್ಯಗಳು: ಪಟ್ಟಣದಲ್ಲಿ ಒಟ್ಟು 56 ವಾಣಿಜ್ಯ ಮಳಿಗೆಗಳಿದ್ದು, 12 ವರ್ಷಗಳ ಹಿಂದೆ ಅವುಗಳನ್ನು ಬಾಡಿಗೆಗೆ ನೀಡಲಾಗಿದೆ. ಟೆಂಡರ್ ಅವಧಿ ಮುಗಿದು ವರ್ಷ ಕಳೆದರೂ ಮರಳಿ ಟೆಂಡರ್ ಕರೆದಿಲ್ಲ. ಮಳಿಗೆಗಳ ₹46 ಲಕ್ಷ ಬಾಡಿಗೆ ವಸೂಲಿಯಾಗಬೇಕಿದೆ.
ಪಟ್ಟಣದ 200ಕ್ಕೂ ಹೆಚ್ಚು ಜನ ಮನೆಯ ಉತಾರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಉತಾರ ನೀಡಿಲ್ಲ. ನೀರಿನ ಪರವಾನಗಿಗಾಗಿ ಸಲ್ಲಿಕೆಯಾಗಿದ್ದ 30ಕ್ಕೂ ಹೆಚ್ಚು ಅರ್ಜಿಗಳು ಮತ್ತು ಮನೆಯ ಕಟ್ಟಡ ಪರವಾನಗಿಗಾಗಿ ಸಲ್ಲಿಕೆಯಾದ ಅರ್ಜಿಗಳು 6 ತಿಂಗಳಿಂದ ವಿಲೇವಾರಿಯಾಗಿಲ್ಲ.
‘ಪಟ್ಟಣ ಪಂಚಾಯಿತಿಗೆ ಒಂದು ವರ್ಷದಿಂದ ಕಾಯಂ ಮುಖ್ಯಾಧಿಕಾರಿ ಇಲ್ಲದೆ ಜನರು ಮನೆಯ ಉತಾರ ಹಾಗೂ ಇತರ ಕೆಲಸಗಳಿಗೆ ಅರ್ಜಿ ಸಲ್ಲಿಸಿ ಕಚೇರಿಗೆ ನಿತ್ಯ ಅಲೆಯುತ್ತಿದ್ದರೂ ಸಮಸ್ಯೆ ಕೇಳುವವರು
ಇಲ್ಲದಂತಾಗಿದೆ. ಇನ್ನಾದರೂ ಮೇಲಧಿಕಾರಿಗಳು ಗಮನ ಹರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಸಮಾಜ ಸೇವಕ ಶಶಿಕುಮಾರ್ ಕಟ್ಟಿಮನಿ ಒತ್ತಾಯಿಸಿದರು.
‘ಪಟ್ಟಣದ ಮಾಚಾಪುರ ತಾಂಡಾ ಹತ್ತಿರ ಜಾಗ ಖರೀದಿಸಿದ್ದು, ಉತಾರಕ್ಕೆ ಅರ್ಜಿ ಸಲ್ಲಿಸಿ 3 ತಿಂಗಳಾಯಿತು. ಪಟ್ಟಣ ಪಂಚಾಯಿತಿಗೆ 15 ಬಾರಿ ಭೇಟಿ ನೀಡಿದ್ಧೇನೆ. ಆದರೂ ಉತಾರ ನೀಡಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಸೋಮನಕೊಪ್ಪ ಗ್ರಾಮದ ಗುರುಬಸಯ್ಯ ಹಿರೇಮಠ
ದೂರಿದರು.
ಒಂದೇ ವರ್ಷದಲ್ಲಿ 7 ಮುಖ್ಯಾಧಿಕಾರಿಗಳು
2023ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆ ಜಾಗಕ್ಕೆ ಬಂದ ಐ.ಕೆ.ಗುಡದಾರಿ ಅವರು ಅಧಿಕಾರ ವಹಿಸಿಕೊಂಡ 7 ತಿಂಗಳಲ್ಲಿ ವರ್ಗಾವಣೆಯಾದರು. ನಂತರ ವಿ.ಜಿ.ಅಂಗಡಿ ಅವರು 3 ತಿಂಗಳು ಪ್ರಭಾರಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅವರ ನಂತರ ಪ್ರಕಾಶ ಮಗದುಮ್, ದಾನೇಶ್ವರಿ ಪಾಟೀಲ್ ಅವರು ಕೆಲವೇ ತಿಂಗಳು ಕಾರ್ಯನಿರ್ವಹಿಸಿ ವರ್ಗಾಣೆಯಾದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಭಾಗ್ಯಶ್ರೀ ಅವರು ಮತದಾನ ಮುಗಿದ ಬಳಿಕ ಅನಾರೋಗ್ಯದ ನಿಮಿತ್ತ ರಜೆ ಮೇಲೆ ತೆರಳಿದ್ದು, ಈಗ ಮತ್ತೆ ವಿ.ಜಿ.ಅಂಗಡಿ ಅವರನ್ನು ಪ್ರಭಾರಿ ಮುಖ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಕಟ್ಟಡ ಪರವಾನಗಿ ಪತ್ರವನ್ನು ನಿಯಮಾವಳಿ ಪ್ರಕಾರ 30 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಅರ್ಜಿ ಸಲ್ಲಿಸಿ 6 ತಿಂಗಳು ಕಳೆದರೂ ಪರವಾನಗಿ ಸಿಗುತ್ತಿಲ್ಲ.–ಅಜಿತ್ ಪಾಟೀಲ, ಸಿವಿಲ್ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.