ಧಾರವಾಡ: ‘ಹಳ್ಳಿಗಳ ಅಭಿವೃದ್ಧಿ, ಜನಸಾಮಾನ್ಯರಿಗೆ ಮೂಲಸೌಕರ್ಯಗಳನ್ನು ನೀಡುವತ್ತ ಗಮನ ಹರಿಸಬೇಕಾದ ಸರ್ಕಾರ, ರಾಮಮಂದಿರ ನಿರ್ಮಾಣಕ್ಕೆ ಅತೀವ ಆಸಕ್ತಿ ವಹಿಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಆರ್. ಪಾಟೀಲ ಆರೋಪಿಸಿದರು.
ರೈತ, ಕಾರ್ಮಿಕ, ದಲಿತ, ಪ್ರಗತಿಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಗುರುವಾರ ಆಯೋಜಿಸಿದ್ದ ‘ರೈತ ಚೈತನ್ಯ’ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರೈತರು ಮನೋದೌರ್ಬಲ್ಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿಕೆ ನೀಡಿದ್ದಾರೆ. ಹಾಗಾದರೆ, ಚುನಾವಣೆಯಲ್ಲಿ ಸೋತ ಎಷ್ಟು ಜನಪ್ರತಿನಿಧಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಕಿಸಂಖ್ಯೆಯನ್ನು ಕೃಷಿ ಸಚಿವರು ರೈತರಿಗೆ ನೀಡಬೇಕು. ಕೃಷಿ ಮಸೂದೆ, ಭೂಸುಧಾರಣಾ ಮಸೂದೆ ವಿರೋಧಿಸಿ ಹಳ್ಳಿಗಳಲ್ಲಿ ಕಾನೂನು ಅರಿವು ಮೂಡಿಸಬೇಕು. ಜನರಲ್ಲಿ ರೈತ ವಿರೋಧಿ ಕಾಯ್ದೆ ವಿರುದ್ಧ ಧ್ವನಿ ಎತ್ತುವಂತೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದರು.
ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘55 ದಿನಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದಿತ್ತು. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಂಪನಿಗಳಿಗೆ ನಮ್ಮ ಸಂಪತ್ತನ್ನು ಲೂಟಿ ಮಾಡಲು ಸರ್ಕಾರ ಅವಕಾಶ ಕಲ್ಪಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಕ್ಯ ಹೋರಾಟ ಸಮಿತಿಯ ಸಂಯೋಜಕ ಡಾ. ಪ್ರಕಾಶ ಕಮ್ಮರಡಿ ಮಾತನಾಡಿ, ‘ಸುಗ್ರೀವಾಜ್ಞೆ ಮೂಲಕ ಕಾಯ್ದೆ ಮೇಲೆ ಕಾಯ್ದೆಯನ್ನು ತರುವುದು ಸರಿಯಾದ ಕ್ರಮವಲ್ಲ. ರಾಷ್ಟ್ರದ ವಿವಿಧ ಮೂಲೆಗಳಿಂದ ದೆಹಲಿಗೆ ಬಂದ ರೈತರು ಮೈಕೊರೆವ ಚಳಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರನ್ನುಸಮಾಧಾನ ಮಾಡುವ ಕೆಲಸ ಸರ್ಕಾರದಿಂದ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಮಾತನಾಡಿ, ‘ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಸಮಾಜದಲ್ಲಿ ವಿಷಬೀಜ ಬಿತ್ತಿ ಸಮಾಜ ಹಾಳು ಮಾಡುವ ಕೆಲಸ ಮಾಡುತ್ತಿದೆ. ಪ್ರಕೃತಿ, ಸಂಸ್ಕೃತಿ, ಸಮಾಜದ ನಡುವೆ ಸಮಾನತೆ ಇರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು’ ಎಂದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಿ.ಆರ್. ಯಾವಗಲ್, ಎಐಡಿವೈಒ ರಾಷ್ಟ್ರ ಘಟಕದ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ, ನಾಗರಾಜ ಗುರಿಕಾರಿ, ಲಕ್ಷ್ಮಣ ಬಕ್ಕಾಯಿ, ಡಾ. ವೆಂಕನಗೌಡ ಪಾಟೀಲ, ನಾಗಪ್ಪ ಉಂಡಿ, ವೀರೇಶ ಸೊಬರದಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.