ADVERTISEMENT

ಸರ್ಕಾರಿ ಕಚೇರಿ ಚಾವಣಿಗಳಲ್ಲಿ ಸೌರವಿದ್ಯುತ್‌ ಫಲಕ ಅಳವಡಿಕೆಗೆ ನಿರ್ಧಾರ– ಧನಕರ್‌ 

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 13:36 IST
Last Updated 1 ಮಾರ್ಚ್ 2024, 13:36 IST
<div class="paragraphs"><p>ಧಾರವಾಡದ ಐಐಟಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಶ ಧನಕರ್‌ ಅವರು ಕೆಆರ್‌ಡಿಸಿ ಹಾಗೂ ಸಿಎಲ್‌ಟಿ  ಉದ್ಘಾಟನೆ ನೆರವೇರಿಸಿದರು. ವಿಧಾನ ‍ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಸುದೇಶಾಧನಕರ್‌, ರಾಜ್ಯ‍ಪಾಲ ಥಾವರಚಂದ್‌ ಗೆಹ್ಲೋತ್‌ ಇದ್ದರು.</p></div>

ಧಾರವಾಡದ ಐಐಟಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಉಪರಾಷ್ಟ್ರಪತಿ ಜಗದೀಶ ಧನಕರ್‌ ಅವರು ಕೆಆರ್‌ಡಿಸಿ ಹಾಗೂ ಸಿಎಲ್‌ಟಿ ಉದ್ಘಾಟನೆ ನೆರವೇರಿಸಿದರು. ವಿಧಾನ ‍ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಸುದೇಶಾಧನಕರ್‌, ರಾಜ್ಯ‍ಪಾಲ ಥಾವರಚಂದ್‌ ಗೆಹ್ಲೋತ್‌ ಇದ್ದರು.

   

ಧಾರವಾಡ: ‘2025ರ ಹೊತ್ತಿಗೆ ದೇಶದ ಎಲ್ಲ ಸರ್ಕಾರಿ ಕಚೇರಿಗಳ ಕಟ್ಟಡಗಳ ಚಾವಣಿಯಲ್ಲಿ ಸೌರವಿದ್ಯುತ್‌ ಫಲಕಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ’ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್‌ ಹೇಳಿದರು.

ನಗರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಜ್ಞಾನ ಸಂಪನ್ಮೂಲ–ದತ್ತಾಂಶ ಕೇಂದ್ರ (ಕೆಆರ್‌ಡಿಸಿ) ಹಾಗೂ ಕೇಂದ್ರೀಯ ಅಧ್ಯಾಪನ ಭವನದ (ಸಿಎಲ್‌ಟಿ) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಭಾರತವು ಸೌರಶಕ್ತಿ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಸೌರ ವಿದ್ಯುತ್‌ ಉತ್ಪಾದನೆ 25 ಪಟ್ಟು ಹೆಚ್ಚಿದೆ. ಪ್ರಸ್ತುತ 72 ಸಾವಿರ ಮೆಗಾ ವ್ಯಾಟ್‌ ಉತ್ಪಾದನೆಯಾಗುತ್ತಿದೆ. ಈ ಪರಿಸರಸ್ನೇಹಿ ಕ್ರಮವು ಭಾರತದ ದಿಟ್ಟ ಹೆಜ್ಜೆಯಾಗಿದೆ’ ಎಂದು ಶ್ಲಾಘಿಸಿದರು.

ADVERTISEMENT

‘ಧಾರವಾಡ ಐಐಟಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವಂತೆ ಇಂಡಿಯನ್‌ ಕೌನ್ಸಿಲ್‌ ಆಫ್‌ ವರ್ಲ್ಡ್‌ ಅಫೇರ್ಸ್‌ (ಐಸಿಡಬ್ಲ್ಯುಎ) ನಿರ್ದೇಶಕರಿಗೆ ಸೂಚನೆ ನೀಡುತ್ತೇನೆ. ಮಾರ್ಚ್‌ 30 ರೊಳಗೆ ಈ ಪ್ರಕ್ರಿಯೆ ಮುಗಿಸಲು ತಿಳಿಸುತ್ತೇನೆ. ಐಸಿಡಬ್ಲ್ಯುಎ ಜಾಗತಿಕ ಸಂಸ್ಥೆಯಾಗಿದ್ದು, ವಿಶ್ವದಲ್ಲಿ ಚಟುವಟಿಕೆಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಧಾರವಾಡ ಐಐಟಿ ವಿದ್ಯಾರ್ಥಿಗಳಿಗೆ ಸೆಂಟ್ರಲ್‌ ವಿಸ್ತಾ ಕಟ್ಟಡ ವೀಕ್ಷಣೆಗೆ ದೆಹಲಿ ಭೇಟಿಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ಹೇಳಿದರು.

‘ದೇಶದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಕೇಂದ್ರ ಸರ್ಕಾರವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆದಿದೆ. ಇದರಿಂದ, ಲೋಕಸಭೆ ಮತ್ತು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಲಭಿಸಲಿದೆ. 2030ರೊಳಗೆ ಸಾಕಾರವಾಗಲಿದೆ. ಶಾಸನ ರಚನೆ, ನೀತಿ ನಿರೂಪಣೆ ಎಲ್ಲದರಲ್ಲೂ ಮಹಿಳೆಯರು ಪಾಲ್ಗೊಳ್ಳಲಿದ್ಧಾರೆ’ ಎಂದು ಅವರು ಹೇಳಿದರು.

‘ದೇಶವು ಪ್ರಗತಿಪಥದಲ್ಲಿ ಸಾಗುತ್ತಿರುವುದು ಕೆಲವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅಂಥವರ ಸಂಖ್ಯೆ ಕಡಿಮೆ ಇದೆ. ನಾವು ನಮ್ಮ ರಾಷ್ಟ್ರ ಮತ್ತು ರಾಷ್ಟ್ರೀಯತೆಯಲ್ಲಿ ನಂಬಿಕೆ ಇಡಬೇಕು. ರಾಷ್ಟ್ರೀಯತೆ ಬಗೆಗಿನ ನಮ್ಮ ಬದ್ಧತೆ ಎಂಥದ್ದೇ ಸಂದರ್ಭದಲ್ಲೂ ಬದಲಾಗಬಾರದು. ‘ರಾಷ್ಟ್ರ ಮೊದಲು’ ಎಂಬುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಸ್ವಾತಂತ್ರೋತ್ಸವದ ಶತಮಾನೋತ್ಸವದ ಹೊತ್ತಿಗೆ (2047) ಹೊತ್ತಿಗೆ ಭಾರತವನ್ನು ವಿಶ್ವದ ನಂಬರ್‌ 1 ರಾಷ್ಟ್ರವಾಗಿ ಮಾಡಬೇಕು. ಈ ಕಾರ್ಯದ ‘ಚಾವಿ’ (ಕೀಲಿ) ನಿಮ್ಮ ಕೈಯಲ್ಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.