ADVERTISEMENT

ಹುಬ್ಬಳ್ಳಿ: ಸಂಕಷ್ಟದಲ್ಲಿ ಸ್ಮಶಾನ ಕಾರ್ಮಿಕರು

ಕೊರೊನಾದಿಂದ ಬದುಕು ಬೀದಿಗೆ; ದುಡಿಯವ ಕೈಗಳಿಗಿಲ್ಲ ಕೆಲಸ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 20:15 IST
Last Updated 10 ಅಕ್ಟೋಬರ್ 2020, 20:15 IST
ಹುಬ್ಬಳ್ಳಿಯ ವಿದ್ಯಾನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರು    ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಹುಬ್ಬಳ್ಳಿಯ ವಿದ್ಯಾನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರು    ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಇಹಲೋಕ ತ್ಯಜಿಸಿದವರ ಅಂತ್ಯಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಿ, ಮುಕ್ತಿ ಕೊಡುವವರು ಮಸಣ ಕಾರ್ಮಿಕರು. ಸಾವಿನ ಸುದ್ದಿ ಮುಟ್ಟಿಸುವುದು, ಸ್ಮಶಾನ ಸ್ವಚ್ಛತೆ, ಹೂಳಲು ಗುಂಡಿ ತೆಗೆಯುವುದು, ಪೂಜೆ ಮುಗಿದ ಬಳಿಕ ಶವವನ್ನು ಗುಂಡಿಗೆ ಇಳಿಸಿ ಮಣ್ಣು ಮುಚ್ಚುವುದು, ಸುಡುವುದಾದರೆಕಟ್ಟಿಗೆ ಹೊಂದಿಸಿ, ಚಿತೆಗೆ ಹೆಣ ಇಡುವುದು ಇವರ ಕಾಯಕ.

ಎಲ್ಲಾ ಕೆಲಸಗಳು ಮುಗಿದ ಬಳಿಕ ಸತ್ತವರ ಕುಟುಂಬದವರು ಸೇರಿದಂತೆ,ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರು ಇವರ ಜೋಳಿಗೆಗೆ ಹಾಕುವ ಚಿಲ್ಲರೆ ಹಣವೇ ಬದುಕಿಗೆ ಆಧಾರ.ತಮ್ಮ ಕುಲದ ಬಾಧ್ಯತೆ ಎಂದುಸಾಂಪ್ರದಾಯಿಕವಾಗಿ ಈ ಕೆಲಸ ಮಾಡಿಕೊಂಡು ಬರುತ್ತಿರುವ ಕಾರ್ಮಿಕರ ಬದುಕು, ಕೊರೊನಾ ಸೋಂಕಿನಿಂದಾಗಿ ಬೀದಿಗೆ ಬಂದಿದೆ.

ಆದಾಯಕ್ಕೆ ಕೊಕ್ಕೆ: ‘ಇತ್ತೀಚೆಗೆ ಕೋವಿಡ್‌ನಿಂದಾಗಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಇತರ ಅನಾರೋಗ್ಯದಿಂದ ಮೃತಪಟ್ಟವರಲ್ಲೂ ಕೋವಿಡ್ ಶಂಕೆ ಇರುವುದರಿಂದ ಅವರ ಅಂತ್ಯಕ್ರಿಯೆಯೂ ಕಟ್ಟುನಿಟ್ಟಾಗಿದೆ. ಹಾಗಾಗಿ, ನಮ್ಮ ಆದಾಯಕ್ಕೂ ಕೊಕ್ಕೆ ಬಿದ್ದಿದೆ. ಇಲ್ಲಿನ ಪಾಲಿಕೆಯವರೂ ನಮಗೆ ಬಿಡಿಗಾಸನ್ನೂ ಕೊಡುವುದಿಲ್ಲ’ ಎಂದು ಹುಬ್ಬಳ್ಳಿಯ ಉಣಕಲ್‌ ಸ್ಮಶಾನದ ಕಾರ್ಮಿಕಪರಶುರಾಮ ಚಲವಾದಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪೂರ್ವಿಕರ ಕಾಲದಿಂದಲೂ ಇದೇ ವೃತ್ತಿ ಅವಲಂಬಿಸಿ ಬದುಕು ಸಾಗಿಸುತ್ತಿದ್ದೇವೆ. ನಾಲ್ಕು ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಉಳ್ಳವರು ಕರುಣೆ ತೋರಿ ನಾಲ್ಕೈದು ಸಾವಿರ ಕೊಡುತ್ತಾರೆ. ಬಡವರು ತಮ್ಮ ಕೈಯಲ್ಲಿದ್ದಷ್ಟನ್ನೇ ಕೊಟ್ಟು ಹೋಗುತ್ತಾರೆ. ಅನಾಥ ಶವಗಳು ಬಂದಾಗ ಉಚಿತವಾಗಿ ಅಂತ್ಯಕ್ರಿಯೆ ಮಾಡುತ್ತೇವೆ’ ಎಂದು ವಿದ್ಯಾನಗರ ಸ್ಮಶಾನದ ಕಾರ್ಮಿಕ ಗದಿಗೆಪ್ಪ ದೊಡ್ಡಮನಿ ಸಮಸ್ಯೆಯನ್ನು ಬಿಚ್ಚಿಟ್ಟರು.

2.5 ಲಕ್ಷ ಇದ್ದಾರೆ: ‘ಕಾರ್ಮಿಕರಿಗೆ ಹಳ್ಳಿಗಳಲ್ಲೂ ಸರಿಯಾಗಿ ಕೂಲಿ ಕೆಲಸ ಸಿಗುತ್ತಿಲ್ಲ. ಕೆಲಸಕ್ಕಾಗಿ ಊರು ಬಿಟ್ಟು ಹೋಗದ ಈ ಕಾರ್ಮಿಕರು ರಾಜ್ಯದಾದ್ಯಂತ ಅಂದಾಜು 2.5 ಲಕ್ಷಕ್ಕೂ ಹೆಚ್ಚು ಇದ್ದಾರೆ. ಪರಿಶಿಷ್ಟ ಜಾತಿಗೆ ಸೇರಿರುವ ಇವರ ಸಂಖ್ಯೆ ಉತ್ತರ ಕರ್ನಾಟಕದಲ್ಲೇ ಹೆಚ್ಚು’ ಎಂದುರಾಜ್ಯ ಮಸಣ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ಯು. ಬಸವರಾಜು ಹೇಳಿದರು.

‘ಸ್ಮಶಾನಗಳ ನಿರ್ವಹಣೆ ಹೊಣೆಯನ್ನು ಇತ್ತೀಚೆಗೆ ಗ್ರಾಮ ಪಂಚಾಯ್ತಿ ಸೇರಿದಂತೆ,ಸ್ಥಳೀಯ ಆಡಳಿತಗಳಿಗೆ ಸರ್ಕಾರ ವಹಿಸಿದೆ. ಅಲ್ಲಿ ನಮ್ಮವರೇ ಕೆಲಸ ಮಾಡಿದರೂ, ಬಹುತೇಕ ಕಡೆ ಅವರಿಗೆ ಸಂಬಳವಿಲ್ಲ. ಸ್ಮಶಾನದಲ್ಲಿ ಸಂಪಾದಿಸಿದ್ದನ್ನು
ಮನೆಗೆ ತೆಗೆದುಕೊಂಡು ಹೋಗದೆ ಮದ್ಯಪಾನಕ್ಕೆ ಕಳೆಯುವವರೇ ಹೆಚ್ಚು. ಹಾಗಾಗಿ, ಸರ್ಕಾರ ಇವರ ನೆರವಿಗೆ ಬರಬೇಕು’ ಎಂದು ಸಂಘದ ಸಹ ಸಂಚಾಲಕಿ ಬಿ. ಮಾಳಮ್ಮ ಒತ್ತಾಯಿಸಿದರು.

ಕಾರ್ಮಿಕರ ಬೇಡಿಕೆಗಳು

* ಸ್ಮಶಾನಗಳಲ್ಲಿ ಮೂಲಸೌಕರ್ಯ ಕಲ್ಪಿಸಿ, ನಿರ್ವಹಣೆಗೆ ಸ್ಮಶಾನ ಕಾರ್ಮಿಕರನ್ನು ನೇಮಿಸಬೇಕು.

* ಶವಸಂಸ್ಕಾರಕ್ಕೆ ತೆಗೆಯುವ ಒಂದು ಗುಂಡಿಗೆ ₹4 ಸಾವಿರ ನಿಗದಿಪಡಿಸಬೇಕು. ಬಡವರಿಗೆ ಹಣ ಕೊಡಲಾಗದಿದ್ದಾಗ, ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಆಡಳಿತ ಸಂಸ್ಥೆಗಳು ಪಾವತಿಸಬೇಕು.

* ತಿಂಗಳಿಗೆ ₹7 ಸಾವಿರ ಗೌರವಧನ ನೀಡಬೇಕು. ಸ್ಮಶಾನದಲ್ಲೇ ವಸತಿ ವ್ಯವಸ್ಥೆ ಮಾಡಬೇಕು. ವಯಸ್ಸಾದ ಕಾರ್ಮಿಕರಿಗೆ ಪಿಂಚಣಿ ನೀಡಬೇಕು.

* ಕೊರೊನಾ ಲೆಕ್ಕಿಸದೆ ಕೆಲಸ ಮಾಡುವ ಕಾರ್ಮಿಕರನ್ನು ಸಹ ಕೊರೊನಾ ವಾರಿಯರ್‌ಗಳು ಎಂದು ಪರಿಗಣಿಸಬೇಕು.

ಪ್ರತಿಕ್ರಿಯೆಗಳು

ಸ್ಥಳೀಯ ಆಡಳಿತ ಸಂಸ್ಥೆಗಳು ನಮ್ಮನ್ನು ಕಾರ್ಮಿಕರೆಂದು ಪರಿಗಣಿಸಿ, ತಿಂಗಳಿಗೆ ಇಂತಿಷ್ಟು ಸಂಬಳವನ್ನು ನಿಗದಿಪಡಿಸಬೇಕು
– ಪರಶುರಾಮ ಚಲವಾದಿ, ಸ್ಮಶಾನ ಕಾರ್ಮಿಕ, ಹುಬ್ಬಳ್ಳಿ

ಸ್ಮಶಾನ ಕಾರ್ಮಿಕರ ತಲಾ ಆದಾಯ ದಿನಕ್ಕೆ ₹10. ಹಾಗಾಗಿ, ಸರ್ಕಾರ ಅವರ ಸಮೀಕ್ಷೆ ನಡೆಸಿ, ಕಾರ್ಯಕ್ರಮಗಳನ್ನು ರೂಪಿಸಬೇಕು
– ಯು. ಬಸವರಾಜು, ಸಂಚಾಲಕ, ರಾಜ್ಯ ಸ್ಮಶಾನ ಕಾರ್ಮಿಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.