ಹುಬ್ಬಳ್ಳಿ: ಎರಡು ವರ್ಷಗಳಲ್ಲಿ (2019,2020) ಸುರಿದ ಉತ್ತಮ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದರೆ, ವಾಣಿಜ್ಯನಗರಿ ಹುಬ್ಬಳ್ಳಿ ಸೇರಿದಂತೆ ಎರಡು ತಾಲ್ಲೂಕುಗಳಲ್ಲಿ ಕುಸಿತವಾಗಿದೆ.
2019ರಲ್ಲಿ ಜಿಲ್ಲೆಯಲ್ಲಿ 749 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 1,205 ಮಿ.ಮೀ. ಮಳೆಯಾಗಿದೆ. 2020ರಲ್ಲಿ 1,081 ಮಿ.ಮೀ. ಮಳೆಯಾಗಿದೆ. ಪರಿಣಾಮ ಜಿಲ್ಲೆಯ ಬಹುತೇಕ ತಾಲ್ಲೂಕಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಹೆಚ್ಚಳವಾಗಿದೆ. ಇದು ನೀರಾವರಿ ಹೊಂದಿರುವ ರೈತರು ಹಾಗೂ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ತಾಲ್ಲೂಕುಗಳ ಜನರಿಗೆ ಹರ್ಷವುಂಟು ಮಾಡಿದೆ.
‘2019ರಲ್ಲಿ ಜಿಲ್ಲೆಯಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿತ್ತು. ನಂತರ ವರ್ಷದಲ್ಲಿಯೂ ಉತ್ತಮ ಮಳೆಯಾಗಿದೆ. ಹಾಗಾಗಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ’ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಡಾ.ಚಂದ್ರಶೇಖರ ಕಲ್ಯಾಣಿ.
ಆರು ತಾಲ್ಲೂಕುಗಳಲ್ಲಿ ಅಂತರ್ಜಲ ಹೆಚ್ಚಳದ ನಡುವೆಯೂ ಹುಬ್ಬಳ್ಳಿ ನಗರ ಹಾಗೂ ನವಲಗುಂದ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ.7.4 ಮೀಟರ್‌ನಿಂದ 9.02 ಮೀಟರ್‌ಗೆ ಹಾಗೂಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ 9.1 ಮೀಟರ್‌ನಿಂದ 9.23ಗೆ ಕೆಳಗಿಳಿಗಿದೆ
ಹುಬ್ಬಳ್ಳಿ ನಗರದಲ್ಲಿ ಮೊದಲೇ ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ನಗರದ ಜನತೆ ಕುಡಿಯುವ ನೀರಿಗೆ ಮಲಪ್ರಭಾ ಹಾಗೂ ನೀರಸಾಗರ ಜಲಾಶಯ ಅವಲಂಬಿಸಿದ್ದಾರೆ. ಆದರೂ, ಅಂತರ್ಜಲ ಮಟ್ಟ ಕುಸಿದಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ಕುಸಿತಕ್ಕೆ ಕಾರಣಗಳು: ಹುಬ್ಬಳ್ಳಿ ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದು ಹಾಗೂ ಕಟ್ಟಡಗಳ ನಿರ್ಮಾಣದಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ಯಾವುದೇ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸಲು ವ್ಯವಸ್ಥೆ ಮಾಡಿಕೊಳ್ಳದಿರುವುದು ಕುಸಿತಕ್ಕೆ ಕಾರಣಗಳಾಗಿವೆ.
ನವಲಗುಂದ ತಾಲ್ಲೂಕಿನಲ್ಲಿ ಕಪ್ಪು ಮಣ್ಣು ಹೆಚ್ಚಿನ ಪ್ರಮಾಣದಲ್ಲಿದೆ. ಆ ಮಣ್ಣಿನಲ್ಲಿ ನೀರು ಆರೇಳು ಅಡಿಗಿಂತ ಹೆಚ್ಚಿಗೆ ಇಳಿಯುವುದಿಲ್ಲ. ಸಂಗ್ರಹಿಸಿಡಲೂ ವ್ಯವಸ್ಥೆಯಿಲ್ಲ. ಹಾಗಾಗಿ ನೀರು ಹರಿದು ಹೋಗುತ್ತದೆ ಎನ್ನುತ್ತಾರೆ ಭೂವಿಜ್ಞಾನಿ ಚಂದ್ರಶೇಖರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.