ಹುಬ್ಬಳ್ಳಿ: ‘ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಎಲ್ಲರೂ ನಿರಪರಾಧಿಗಳು ಎಂದು ನಾವೂ ಎಲ್ಲಿಯೂ ಹೇಳಿಲ್ಲ. ಅಮಾಯಕರನ್ನು ಆದಷ್ಟು ಬೇಗ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದೇವೆಯೇ ಹೊರತು, ಈಗ ಬಂಧಿಸಲಾಗಿರುವ ಎಲ್ಲರಿಗೂ ಜಾಮೀನು ಕೊಡಿ ಎಂದು ಕೇಳಿಲ್ಲ’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ ಹುಸೇನ್ ಹಳ್ಳೂರ ಹೇಳಿದ್ದಾರೆ.
‘ವಿನಾಕಾರಣ ಕೆಲ ಅಮಾಯಕರು ಈ ಗಲಭೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಾಸ್ತವ ಸಂಗತಿ ಅರಿತುಕೊಂಡು ಹೇಳಿಕೆ ನೀಡಬೇಕು. ಜನರ ದಿಕ್ಕು ತಪ್ಪಿಸಬಾರದು’ ಎಂದು ತಿರುಗೇಟು ನೀಡಿದ್ದಾರೆ.
‘ಈ ಪ್ರಕರಣಗಳಲ್ಲಿನ ಆರೋಪಿಗಳು ಸಮಾಜ ಘಾತುಕ ಶಕ್ತಿಗಳಾಗಿದ್ದಾರೆ. ಪ್ರಕರಣ ಕೈಬಿಡುವುದರಿಂದ ಸರ್ಕಾರ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ರಾಜಿ ಮಾಡಿಕೊಂಡಂತಾಗುವುದಿಲ್ಲವೇ? ಎಂದು ಜೋಶಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೇಳಿಕೆ ಗಮನಿಸಬೇಕಿತ್ತು’ ಎಂದಿದ್ದಾರೆ.
‘ಪ್ರಕರಣಗಳನ್ನು ಕೈ ಬಿಡುವಂತೆ ಕೋರಿ ಪತ್ರಗಳು ಬಂದ ತಕ್ಷಣ ಏಕಾಏಕಿ ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಗೃಹ ಇಲಾಖೆಯಿಂದ ಪರಿಶೀಲಿಸಿದ ನಂತರ ಸಚಿವ ಸಂಪುಟದ ಉಪ ಸಮಿತಿ ಮುಂದೆ ತಂದು, ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಬೇಕಾಗುತ್ತದೆ’ ಎಂದು ಗೃಹ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
‘ಪ್ರಲ್ಹಾದ ಜೋಶಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು, ಕ್ಷುಲ್ಲಕ ಮತ್ತು ಸಣ್ಣತನದ ಹೇಳಿಕೆ ನೀಡುವುದು ಸರಿಯಲ್ಲ. ಕೇವಲ ರಾಜಕೀಯ ಉದ್ದೇಶದಿಂದ ಜನರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಲು ಕಾರಣವಾಗುತ್ತದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.