ADVERTISEMENT

Hubli:ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಸಂದರ್ಶನ ಮುಂದೂಡಿಕೆ: ಆಕ್ರೋಶ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಅಧೀನದಲ್ಲಿರುವ ವಿವಿಧ ಆಸ್ಪತ್ರೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 10:42 IST
Last Updated 22 ನವೆಂಬರ್ 2023, 10:42 IST
<div class="paragraphs"><p>ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಸಂದರ್ಶನ ಮುಂದೂಡಿಕೆ: ಆಕ್ರೋಶ</p></div>

ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಸಂದರ್ಶನ ಮುಂದೂಡಿಕೆ: ಆಕ್ರೋಶ

   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಅಧೀನದಲ್ಲಿರುವ ವಿವಿಧ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿ ಹುದ್ದೆಯ ಸಂದರ್ಶನಕ್ಕೆ ನಗರದ ಚಿಟಗುಪ್ಪಿ ಆಸ್ಪತ್ರೆಗೆ ಬಂದ ಅಭ್ಯರ್ಥಿಗಳಿಗೆ ನಿರಾಸೆ ಕಾದಿತ್ತು. ಬುಧವಾರ ನಡೆಯಬೇಕಿದ್ದ ಸಂದರ್ಶನ ನ. 27, 28ಕ್ಕೆ ಮು‌ದೂಡಿದ್ದು ಅವರ ಆಕ್ರೋಶಕ್ಕೆ ಕಾರಣವಾಯಿತು.

ಪ್ರಸೂತಿ ಹಾಗೂ ಸ್ತ್ರೀರೋಗ ವೈದ್ಯರು, ಎಂಬಿಬಿಎಸ್ ವೈದ್ಯರು, ಸಾಮಾನ್ಯ ವೈದ್ಯರು, ಅರವಳಿಕೆ ತಜ್ಞರು, ಅರೆ ವೈದ್ಯಕೀಯ ಸಿಬ್ಬಂದಿ, ಎಲ್.ಡಿ.ಸಿ., ಡೇಸ್ಟರ್, ವಾರ್ಡ್'ಬಾಯ್, ಆಯಾ ಮತ್ತು ಆ್ಯಂಬೂಲೆನ್ಸ್ ವಾಹನ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಮಾಸಿಕ ಗೌರವಧನ ಆಧಾರದ ಮೇಲೆ 11 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿ, ನ. 22ರಂದು ಸಂದರ್ಶನ ನಿಗದಿಪಸಲಾಗಿತ್ತು.

ADVERTISEMENT

ಅರ್ಜಿ‌ ಸಲ್ಲಿಸಿದ್ದ ಮಹಾರಾಷ್ಟ್ರದ ಪುಣೆ, ರಾಯಚೂರು, ಕಲಬುರ್ಗಿ, ಯಾದಗಿರಿ, ಕೊಪ್ಪಳ, ಹಾವೇರಿ, ಉತ್ತರಕನ್ನಡ, ಬೆಂಗಳೂರು ಭಾಗದ 70ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರು. ಆಸ್ಪತ್ರೆ ಮುಂಭಾಗ 'ಕಾರಣಾಂತರಗಳಿಂದ ಸಂದರ್ಶನ ಮುಂದೂಡಲಾಗಿದೆ' ಎನ್ನುವ ನೋಟಿಸ್ ನೋಡಿ ಅಸಮಾಧಾನ ವ್ಯಕ್ತಪಡಿಸಿದರು.

'ಟೆಕ್ನಿಷಿಯನ್ ಹುದ್ದೆಗೆ ಆಯ್ಕೆ ಬಯಸಿ ಅರ್ಜಿ ಸಲ್ಲಿಸಿದ್ದೆ. ಸುತ್ತೋಲೆಯಲ್ಲಿ ತಿಳಿಸಿದಂತೆ ಇಂದು ಬೆಳಿಗ್ಗೆ 10ಕ್ಕೆ ಸಂದರ್ಶನವಿತ್ತು. ಆದರೆ, ಮುಂದೂಡಲಾಗಿದೆ ಎಂದು ನೋಟಿಸ್ ಅಂಟಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಅನೇಕರು ಸಂದರ್ಶನಕ್ಕೆ ಬಂದಿದ್ದಾರೆ. ಸಂದರ್ಶನ ಮುಂದೂಡಿರುವ ವಿಷಯ ಒಂದು ದಿನ ಮುಂಚಿತವಾಗಿಯಾದರೂ ಮಾಧ್ಯಮದಲ್ಲಿ ತಿಳಿಸಬೇಕಿತ್ತು' ಎಂದು ಪುಣೆಯಿಂದ ಬಂದಿದ್ದ ಮಂಜುನಾಥ ಎಂ. ಬೇಸರ ವ್ಯಕ್ತಪಡಿಸಿದರು.

'ಮನೆಯಲ್ಲಿ‌ ನಾಲ್ಕು ತಿಂಗಳ ಮಗುವನ್ನು ಬಿಟ್ಟು ಸಂದರ್ಶನಕ್ಕೆ ಬಂದಿದ್ದೆ. ಇಲ್ಲಿ ಸಿಬ್ಬಂದಿಯನ್ನು ಕೇಳಿದರೆ ನೋಟಿಸ್ ನೋಡಿ, ನಮಗೇನೂ ಗೊತ್ತಿಲ್ಲ ಎಂದು ದರ್ಪದಿಂದ ಮಾತನಾಡುತ್ತಾರೆ. ಉದ್ಯೋಗ ಸಿಗಬಹುದೆಂದು ಕಷ್ಟಪಟ್ಟು, ನೂರಾರು ಕಿ.ಮೀ. ದೂರದಿಂದ ಬಂದಿರುತ್ತೇವೆ. ಹೀಗೆ ಏಕಾಏಕಿ ಮುಂದೂಡಿದರ ನಾವೇನು ಮಾಡಬೇಕು' ಎಂದು ಬೆಂಗಳೂರಿನಿಂದ ಬಂದ ಚೈತ್ರಾ ಪ್ರಶ್ನಿಸಿದರು.

'ಸಂದರ್ಶನದ ಜಾಹೀರಾತಿನಲ್ಲಿ ಯಾವ ಹುದ್ದೆಗೆ ಎಷ್ಟು ಸೀಟು, ವೇತನ ಎಷ್ಟು ಎನ್ನುವ ಯಾವ ಮಾಹಿತಿಯೂ ಇಲ್ಲ. ಮೆರಿಟ್ ಅಥವಾ ಅನುಭವದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆಯೋ ಎನ್ನುವುದೂ ಗೊತ್ತಿಲ್ಲ. ಇದರಲ್ಲಿ ಗೊಂದಲವಿದ್ದು, ಪಾರದರ್ಶಕ ಆಯ್ಕೆ ನಡೆಯುವ ಅನುಮಾನವಿದೆ. ಅದಕ್ಕಾಗಿ ಸಂದರ್ಶನ ಮುಂದೂಡಿದ್ದಾರೆ' ಎಂದು ರಾಯಚೂರಿನಿಂದ ಬಂದಿದ್ದ ಸ್ಮೀತಾ ಎಂ.ಎಸ್. ತಿಳಿಸಿರು.

ಪಾಲಿಕೆ ಮುಖ್ಯವೈದ್ಯಾಧಿಕಾರಿ ಶ್ರೀಧರ ದಂಡೆಪ್ಪನವರ ಅವರು, ಅಭ್ಯರ್ಥಿಗಳ ಜೊತೆ ಚರ್ಚಿಸಿ, ಸಮಾಧಾನಪಡಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, '50 ಹುದ್ದೆಗಳಿಗರ 200ರಷ್ಟು ಅರ್ಜಿ ಬರಬಹುದೆಂದು ನಿರೀಕ್ಷೆ ಮಾಡಲಾಗಿತ್ತು.‌ ಆದರೆ, ಒಂದು ಸಾವಿರದಷ್ಟು ಅರ್ಜಿಗಳು ಸ್ವೀಕೃತವಾಗಿದೆ. ನಿರೀಕ್ಷೆ ಮೀರಿ ಅರ್ಜಿ ಬಂದಿದ್ದರಿಂದ ಸಂದರ್ಶನ ಮುಂದೂಡಲಾಗಿದೆ. ಅರ್ಜಿಗಳನ್ನೆಲ್ಲ ಪರಿಶೀಲಿಸಿ, ಅರ್ಹ 200ರಷ್ಟು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನ ಮುಂದೂಡಿರುವ ವಿಷಯ ಒಂದುದಿನ ಮುಂಚಿತವಾಗಿಯಾದರೂ ನಾವು ತಿಳಿಸಬೇಕಿತ್ತು. ಇದರಿಂದಾಗಿ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.